ಮಹನೀಯರ ಸಾಧನೆ ಸಾರ ಅನುಸರಿಸಿ

| Published : Oct 06 2025, 01:00 AM IST

ಸಾರಾಂಶ

ರಾಜೇಂದ್ರ ಶ್ರೀಗಳು ಕಾರುಣ್ಯ ಮೂರ್ತಿಗಳು. ಶಾಂತಿ ಸಹನೆ, ಮಾತೃ ಹೃದಯ ಉಳ್ಳವರಾಗಿದ್ದ ಶ್ರೀಗಳು ಗ್ರಾಮೀಣ ಪ್ರದೇಶದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಮ್ಮ ತನು-ಮನ-ಧನವನ್ನೇ ಮುಡಿಪಾಗಿಟ್ಟಿದ್ದರು.

ಕನ್ನಡಪ್ರಭ ವಾರ್ತೆ ಮೈಸೂರು

ಮಹನೀಯರ ಸಾಧನೆಗಳ ಸಾರವನ್ನು ಜೀವನದಲ್ಲಿ ಅನುಸರಿಸಿದರೇ ಒಳ್ಳೆಯ ಮಾರ್ಗದಲ್ಲಿ ಸಾಗಬಹುದು ಎಂದು ಡಾ.ಎಸ್‌.ಪಿ. ಉಮಾದೇವಿ ತಿಳಿಸಿದರು.

ಜೆ.ಪಿ. ನಗರದಲ್ಲಿರುವ ಡಾ. ಪುಟ್ಟರಾಜ ಗವಾಯಿ ಯೋಗ ಮಂದಿರದಲ್ಲಿ ನಾದ ಹಂಸಿನಿ ಭಜನಾ ಸಂಘವು ಭಾನುವಾರ ಆಯೋಜಿಸಿದ್ದ ಶ್ರೀ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 110ನೇ ಜಯಂತಿಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಹಾನ್‌ ಸಾಧಕರು ಬದುಕಿನಲ್ಲಿ ಸಾಧನೆ ಮಾಡುವ ಸಂದರ್ಭದಲ್ಲಿ ಅರ್ಪಣಾ ಮನೋಭಾವನೆ, ತ್ಯಾಗ, ನಿಷ್ಠೆಯಿಂದ ಕಾರ್ಯ ಕೈಗೊಂಡಿರುತ್ತಾರೆ. ಹೀಗಾಗಿ, ಈ ಸಾಧನೆಗಳು ಅನುಭವದ ಪಾಠವಾಗಿವೆ. ಇಂದಿನ ಪೀಳಿಗೆಯು ಇವುಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕ ಎಂದರು.

ರಾಜೇಂದ್ರ ಶ್ರೀಗಳು ಕಾರುಣ್ಯ ಮೂರ್ತಿಗಳು. ಶಾಂತಿ ಸಹನೆ, ಮಾತೃ ಹೃದಯ ಉಳ್ಳವರಾಗಿದ್ದ ಶ್ರೀಗಳು ಗ್ರಾಮೀಣ ಪ್ರದೇಶದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಮ್ಮ ತನು-ಮನ-ಧನವನ್ನೇ ಮುಡಿಪಾಗಿಟ್ಟಿದ್ದರು. ಓದುವ ಮಕ್ಕಳ ಶ್ರೇಯೋಭಿಲಾಷೆಗಾಗಿ ಹಗಲು- ಇರುಳು ಶ್ರಮಿಸಿದರು. ವಿದ್ಯಾರ್ಥಿಗಳಿಗಾಗಿ ಎತ್ತಿನಗಾಡಿಯಲ್ಲಿ ಸಂಚಾರ ಮಾಡಿ, ಹಳ್ಳಿ ಹಳ್ಳಿಗಳಲ್ಲಿ ದವಸ- ಧಾನ್ಯಗಳನ್ನು ಸಂಗ್ರಹ ಮಾಡಿದ್ದರು ಎಂದರು.

ಇದೇ ವೇಳೆ ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ ಮಹಿಳಾ ನಗರ ಘಟಕದ ಅಧ್ಯಕ್ಷೆ ಧನ್ಯಾ ಸತ್ಯೇಂದ್ರಮೂರ್ತಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕದ ಉಪಾಧ್ಯಕ್ಷ ಎಂ. ಚಿನ್ನಸ್ವಾಮಿ ಉದ್ಘಾಟಿಸಿದರು. ನಾದ ಹಂಸಿನಿ ಭಜನಾ ಸಂಘದ ಗೌರವಾಧ್ಯಕ್ಷೆ ಉಮಾ ಮಹದೇವಸ್ವಾಮಿ ಶ್ರೀಗಳಿಗೆ ನುಡಿ-ನಮನ ಸಲ್ಲಿಸಿದರು. ಅಧ್ಯಕ್ಷೆ ಮಂಜುಳಾ ಶಿವಕುಮಾರಸ್ವಾಮಿ ಹಾಗೂ ಪದಾಧಿಕಾರಿಗಳು ಇದ್ದರು.