ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರಾಷ್ಟ್ರಭಕ್ತಿ, ಸಿದ್ಧಾಂತ ನಿಷ್ಠೆ ಹಾಗೂ ಭಾರತದ ಅಖಂಡತೆಯನ್ನು ಕಾಯ್ದುಕೊಳ್ಳಲು ಡಾ.ಶ್ಯಾಮ ಪ್ರಸಾದ್ ಮುಖರ್ಜಿ ತೋರಿದ ಬದ್ಧತೆ ಮತ್ತು ಆದರ್ಶಗಳು ಪ್ರತಿಯೊಬ್ಬರಿಗೂ ನಿರಂತರ ಪ್ರೇರಣೆಯಾಗಿವೆ ಎಂದು ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ ಹೇಳಿದರು.ನಗರದ ಶಿವಾನಂದ ಜಿನದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಭಾರತೀಯ ಜನಸಂಘದ ಸಂಸ್ಥಾಪಕ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ ಅವರು ಮಾತನಾಡಿದರು. ಪ್ರಖರ ರಾಷ್ಟ್ರೀಯವಾದಿ ಆಗಿದ್ದ ಡಾ.ಮುಖರ್ಜಿ ಅವರು ದೇಶದ ಅಖಂಡತೆ ಮತ್ತು ಏಕತೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಒಂದೇ ದೇಶದಲ್ಲಿ ಎರಡು ಸಂವಿಧಾನ, ಇಬ್ಬರು ಪ್ರಧಾನಿ ಇರಲು ಸಾಧ್ಯವಿಲ್ಲ ಎಂಬ ದೃಢ ನಿಲುವಿನೊಂದಿಗೆ ಕಾಶ್ಮೀರದ ಸಂಪೂರ್ಣ ವಿಲೀನಕ್ಕಾಗಿ ಹೋರಾಡಿ ತಮ್ಮ ಪ್ರಾಣವನ್ನೇ ಬಲಿದಾನಗೈದ ಅವರ ರಾಷ್ಟ್ರಭಕ್ತಿ ಹಾಗೂ ಸಿದ್ಧಾಂತ ನಿಷ್ಠೆ ಅನನ್ಯವಾಗಿದೆ. ಭಾರತದ ಏಕತೆಗಾಗಿ ಅವರು ತೋರಿದ ಬದ್ಧತೆ ಮತ್ತು ಆದರ್ಶಗಳು ಇಂದಿಗೂ ದೇಶದ ಜನತೆಗೆ ಮಾರ್ಗದರ್ಶಿಯಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ಎಂ.ಎಸ್.ದಡ್ಡೆನ್ನವರ, ಗುಂಡುರಾವ ಶಿಂಧೆ, ಬಸವರಾಜ ಯಂಕಂಚಿ, ಸತ್ಯನಾರಾಯಣ ಹೆಮಾದ್ರಿ, ಸುರೇಶ ಕೋಣ್ಣೂರ, ಕಲ್ಲಪ್ಪ ಭಗವತಿ, ಮಲ್ಲೇಶ ವಿಜಾಪುರ, ಶ್ರೀಮತಿ ಸವಿತಾ ಲಂಕೆನ್ನವರ, ರೇಖಾ ಕಲಬುರಗಿ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ರವಿ ದಾಮಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಅವರು 1946ರಲ್ಲಿ ಅಖಿಲ ಭಾರತೀಯ ಹಿಂದೂ ಮಹಾಸಭೆಯ ಅಧ್ಯಕ್ಷರಾಗಿದ್ದರು. ಆರ್ ಎಸ್ ಎಸ್ ನ ಗೋಲ್ವಾಲ್ಕರ್ ಗುರೂಜಿ ಅವರೊಂದಿಗೆ ಸಮಾಲೋಚಿಸಿದ ಬಳಿಕ 1951ರ ಅಕ್ಟೋಬರ್ 21ರಂದು ದೆಹಲಿಯಲ್ಲಿ ಭಾರತೀಯ ಜನಸಂಘವನ್ನು ಸ್ಥಾಪಿಸಿದರು. ಅಂತಹ ಮಹನೀಯರು ಸ್ಥಾಪಿಸಿದ ಪಕ್ಷದಲ್ಲಿ ಕಾರ್ಯನಿರ್ವಹಿಸುವುದು ನಮ್ಮ ಪಾಲಿಗೆ ಹೆಮ್ಮೆಯ ಸಂಗತಿ. ರಾಷ್ಟ್ರ ರಕ್ಷಣೆ ಮತ್ತು ಸರ್ವರ ಕಲ್ಯಾಣವೇ ನಮ್ಮ ಧ್ಯೇಯವಾಗಿದ್ದು, ಸರ್ವೇ ಜನಾಃ ಸುಖಿನೋ ಭವಂತು ಎಂಬ ಆಶಯದೊಂದಿಗೆ ಬಿಜೆಪಿ ಕಾರ್ಯನಿರ್ವಹಿಸುತ್ತಿದೆ.-ನಾರಾಯಣಸಾ ಬಾಂಡಗೆ, ರಾಜ್ಯಸಭಾ ಸದಸ್ಯ