ಸಾರಾಂಶ
ಅಂತಾರಾಷ್ಟ್ರೀಯ ಖ್ಯಾತಿಯ ನೃತ್ಯಗಾರ್ತಿ ಡಾ. ವಸುಂಧರಾ ದೊರಸ್ವಾಮಿ ಅವರು ಕಿತ್ತೂರು ರಾಣಿ ಚೆನ್ನಮ್ಮ ಏಕವ್ಯಕ್ತಿ ನೃತ್ಯ - ನಾಟಕ - ಸಮರ ಕಲಾ ಪ್ರದರ್ಶನವನ್ನು ನೀಡಿದರು.
ಕನ್ನಡಪ್ರಭ ವಾರ್ತೆ ಮಣಿಪಾಲ
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಇದರ ಸಾಂಸ್ಕೃತಿಕ ಸಮನ್ವಯ ಸಮಿತಿ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ನೃತ್ಯಗಾರ್ತಿ ಡಾ. ವಸುಂಧರಾ ದೊರಸ್ವಾಮಿ ಅವರು ಕಿತ್ತೂರು ರಾಣಿ ಚೆನ್ನಮ್ಮ ಏಕವ್ಯಕ್ತಿ ನೃತ್ಯ - ನಾಟಕ - ಸಮರ ಕಲಾ ಪ್ರದರ್ಶನವನ್ನು ನೀಡಿದರು.ಈ ಸಂದರ್ಭದಲ್ಲಿ ಮಾಹೆ ಉಪಕುಲಪತಿ ಡಾ. ಎಂ.ಡಿ. ವೆಂಕಟೇಶ್, ಸಿಸಿಸಿ ಅಧ್ಯಕ್ಷೆ ಡಾ. ಶೋಭಾ ಕಾಮತ್, ಉಪಾಧ್ಯಕ್ಷ ಸಂಬಿತ್ ದಾಸ್ ಸೇರಿದಂತೆ ಅಪಾರ ಸಂಖ್ಯೆಯ ಜನರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅವರು ಇಲ್ಲಿನ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್)ನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಇತ್ತೀಚಿನ ವರ್ಷಗಳ್ಲಲಿ ಕೆಲವು ಪ್ರದರ್ಶನಗಳೊಂದಿಗೆ ವಿಕಸನಗೊಂಡ ತನ್ನ ನೃತ್ಯದ ಶೈಲಿಯ ವಿಶಿಷ್ಟತೆಗಳನ್ನು ವಿವರಿಸಿದರು.ನನ್ನ ಭರತನಾಟ್ಯ ಶೈಲಿಯಲ್ಲಿ ಯೋಗ ಮತ್ತು ಸಮರ ಕಲೆಯನ್ನು ಸೇರಿಸಲು ಪ್ರಯತ್ನಿಸಿದ್ದೇನೆ, ಇದು ಪಂದನಲ್ಲೂರಿನ ನೃತ್ಯ ಶೈಲಿಗಿಂತ ಭಿನ್ನವಾಗಿದೆ. ನೃತ್ಯ ಕಲೆಯ ಬಗೆಗಿನ ನನ್ನ ಪ್ರೀತಿಯು ನನ್ನನ್ನು 75ನೇ ವಯಸ್ಸಿನಲ್ಲಿ ನೃತ್ಯ ಮಾಡುವಂತೆ ಮಾಡುತ್ತದೆ ಎಂದು ಅವರು ಹೇಳಿದರು.
ನಂತರ ಅವರು ಯೋಗವು ಹೇಗೆ ಉತ್ತಮವಾಗಿ ನೃತ್ಯ ಮಾಡಲು ಸಹಾಯ ಮಾಡುತ್ತದೆ ಎಂಬುದನ್ನು ವಿವರಿಸಿದರು. ಅವರ ಶಿಷ್ಯೆ ಡಾ.ಭ್ರಮರಿ ಶಿವಪ್ರಕಾಶ್ ಅವರು ತಮ್ಮ ಗುರುಗಳ ನೃತ್ಯ ಶೈಲಿಯ ಕೆಲವು ನಿರ್ದಿಷ್ಟ ಗುಣಲಕ್ಷಣಗಳನ್ನು ಪ್ರದರ್ಶಿಸಿದರು. ಜಿಸಿಪಿಎಎಸ್ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ ಈ ಸಂವಾದವನ್ನು ನಿರ್ವಹಿಸಿದರು.