ಧಾರವಾಡ: ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಲೇಖಕಿ ಡಾ. ವೀಣಾ ಶಾಂತೇಶ್ವರ ಹಾಗೂ ಲೋಹಿಯಾ ಪ್ರಕಾಶನದ ಪ್ರಕಾಶಕ ಸಿ. ಚನ್ನಬಸವಣ್ಣ ಅವರಿಗೆ ಡಾ. ಗುರುಲಿಂಗ ಕಾಪಸೆ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಪ್ರಶಸ್ತಿಯು ತಲಾ ₹25 ಸಾವಿರ ನಗದು, ಸ್ಮರಣಿಕೆ ಹೊಂದಿದ್ದು, ಎಂ.ಎ. ವಿದ್ಯಾರ್ಥಿನಿ ರಾಜೇಶ್ವರಿ ಹುಲಮನಿಗೆ ₹5 ಸಾವಿರ ನಗದು ಹೊಂದಿರುವ ವಿದ್ಯಾರ್ಥಿ ಬಹುಮಾನ ಸಹ ಇದೇ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು.ಅಥಣಿಯ ದೇವದಾಸಿ ವಿಮೋಚನಾ ಸಂಸ್ಥೆ ಅಧ್ಯಕ್ಷ ಬಿ.ಎಲ್. ಪಾಟೀಲ ಮಾತನಾಡಿ, ಗುರುಲಿಂಗ ಕಾಪಸೆ ಅವರು ಸಂತರು. ಅವರ ಜೀವನ, ಸಾಧನೆ ನಮಗೆ ಪ್ರೇರಣೆ. ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಹಂತಕ್ಕೇರಿದ್ದು ಮಹತ್ಸಾಧನೆ ಎಂದರು.

ಸ್ತ್ರೀ ಶೋಷಣೆ ವಿರುದ್ಧ ಡಾ. ವೀಣಾ ಅವರು ಬರೆದ ಪುಸ್ತಕಗಳು ನನ್ನ ಮೇಲೆ ಪ್ರಭಾವ ಬೀರಿದ್ದರಿಂದ ದೇವದಾಸಿಯರ ಶ್ರೇಯೋಭಿವೃದ್ಧಿಗೆ ಕಾರ್ಯೋನ್ಮುಖನಾದೆನು. ಚನ್ನಬಸವಣ್ಣ ಕೇವಲ ಪ್ರಕಾಶಕರಷ್ಟೇ ಅಲ್ಲ, ಅವರು ಹಲವು ಸಂಘ-ಸಂಸ್ಥೆಗಳಿಗೆ ಆಶ್ರಯ ನೀಡಿದ ಮಹಾನ್ ವ್ಯಕ್ತಿ ಎಂದರು.

ಪ್ರಶಸ್ತಿ ಪುರಸ್ಕೃತರ ಅಭಿನಂದನಾ ಪರ ಮಾತನಾಡಿದ ಸಾಮಾಜಿಕ ಹೋರಾಟಗಾರ ಡಾ. ಸಿದ್ದನಗೌಡ ಪಾಟೀಲ, ಪ್ರಶಸ್ತಿ ಪುರಸ್ಕೃತ ಇಬ್ಬರು ಗಣ್ಯರು, ಉತ್ತಮ ವ್ಯಕ್ತಿತ್ವದ ಮಾದರಿಗಳು. ಸ್ತ್ರೀ ಪ್ರಜ್ಞೆ ಕುರಿತು ತಮ್ಮ ಕೃತಿಗಳ ಮೂಲಕ ಜಾಗೃತಿ ಮೂಡಿಸಿದ ವೀಣಾ ಶಾಂತೇಶ್ವರ ವಿದ್ಯಾರ್ಥಿಗಳನ್ನು ಸೃಷ್ಟಿಸಿದರೆ, ಲೋಹಿಯಾ ಪ್ರಕಾಶನದ ಮೂಲಕ ಅತ್ಯಮೂಲ್ಯ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಚನ್ನಬಸವಣ್ಣ ಸಾಹಿತ್ಯ ದಾಸೋಹ ಮಾಡಿದರು ಎಂದರು.

ಪ್ರಶಸ್ತಿ ಪುರಸ್ಕೃತ ಡಾ. ವೀಣಾ ಶಾಂತೇಶ್ವರ ಮಾತನಾಡಿ, ವೈಚಾರಿಕ ಉದಾರತೆ ಗುರುಲಿಂಗ ಕಾಪಸೆ ಅವರ ದೊಡ್ಡ ಗುಣ. ಸದಾ ಮಹಿಳೆಯರನ್ನು ಪ್ರೋತ್ಸಾಹಿಸುತ್ತ, ಸಾಧನೆಗೆ ಪ್ರೇರೇಪಿಸುತ್ತಿದ್ದರು. ಕಾಪಸೆ ಅವರು ಪ್ರಾಥಮಿಕ ಹಂತದಲ್ಲಿ ಮಾತೃಭಾಷೆ ಕಡ್ಡಾಯ ಎಂದು ಹೇಳುವುದರೊಂದಿಗೆ ಎಲ್ಲ ಭಾಷೆಗಳನ್ನೂ ಅಪ್ಪಿಕೊಳ್ಳುವಂತೆ ಸಲಹೆ ನೀಡುತ್ತಿದ್ದರು. ಜೀವನದುದ್ದಕ್ಕೂ ಶಾಂತಿ ಮಂತ್ರವನ್ನೇ ಅವರು ಪ್ರತಿಪಾದಿಸಿದರು ಎಂದರು.


ಇನ್ನೊಬ್ಬ ಪ್ರಶಸ್ತಿ ಪುರಸ್ಕೃತ ಸಿ. ಚನ್ನಬಸವಣ್ಣ ಮಾತನಾಡಿ, ಲೋಹಿಯಾ ಸಿದ್ಧಾಂತವನ್ನು ಯುವ ಜನಾಂಗಕ್ಕೆ ತಲುಪಿಸುವುದು ನಮ್ಮ ಮೂಲ ಉದ್ದೇಶವಾಗಿದೆ. ಚಿಂತನಾ ಲಹರಿ ಸರಿಯಿದ್ದರೆ, ಬದ್ಧತೆ ಇದ್ದರೆ ನಾವು ಅಂದುಕೊoಡಿದ್ದನ್ನು ಸಾಧಿಸಲು ಸಾಧ್ಯ. ಸಾಹಿತ್ಯದ ಪರಿಚಾರಕನಾದ ನನಗೆ ಪ್ರಶಸ್ತಿ ಸಂದಿರುವುದು ಖುಷಿ ನೀಡಿದೆ ಎಂದರು.

ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಡಾ. ಬಸವರಾಜ ಸಾದರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವೀರಣ್ಣ ರಾಜೂರ ಇದ್ದರು. ಸತೀಶ ತುರಮರಿ ಸ್ವಾಗತಿಸಿದರು. ಶಂಕರ ಹಲಗತ್ತಿ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.

ಚಂದ್ರಶೇಖರ ಕಾಪಸೆ, ಉಷಾ ಕಾಪಸೆ, ರವಿ ಕಾಪಸೆ, ಸೊಸೆ ಡಾ. ಜ್ಯೋತಿ ಕಾಪಸೆ, ಮೊಮ್ಮಗ ಸಂಕಲ್ಪ ಕಾಪಸೆ ಇದ್ದರು. ಶಶಿಕಲಾ ನಿಂಬಾಳ (ಅಮೇರಿಕ) ಆನ್ಲೈನ್ ದಲ್ಲಿ ಭಾಗಿಯಾಗಿದ್ದರು.