ಡೆಂಘೀ: ಭಯ ಬೇಡ, ಜಾಗೃತಿ ಇರಲಿ

| Published : Jul 10 2024, 12:33 AM IST

ಸಾರಾಂಶ

ಡೆಂಘೀ ಸೊಳ್ಳೆಗಳಿಂದ ಹೊರಡುವ ಜ್ವರವಾಗಿದ್ದು, ಸೊಳ್ಳೆ ನಿಯಂತ್ರಣವೇ ಏಕೈಕ ಪರಿಹಾರವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಡೆಂಘೀ ಜ್ವರದ ಬಗ್ಗೆ ಸಾರ್ವಜನಿಕರಲ್ಲಿ ಭಯ ಬೇಡ, ಜಾಗೃತಿ ಇರಲಿ, ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು ಎಂದು ನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ತಿಳಿಸಿದರು.

ನಗರದ ಮಂಡಿ ಮೊಹಲ್ಲಾದಲ್ಲಿರುವ ಮಾರುಕಟ್ಟೆಯಲ್ಲಿ ಜೀವದಾರ ರಕ್ತ ನಿಧಿ ಕೇಂದ್ರವು ಮಂಗಳವಾರ ಆಯೋಜಿಸಿದ್ದ ಡೆಂಘೀ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡೆಂಘೀ ಸೊಳ್ಳೆಗಳಿಂದ ಹೊರಡುವ ಜ್ವರವಾಗಿದ್ದು, ಸೊಳ್ಳೆ ನಿಯಂತ್ರಣವೇ ಏಕೈಕ ಪರಿಹಾರವಾಗಿದೆ. ಇದಕ್ಕಾಗಿ ಪಾಲಿಕೆ ಫಾಗಿಂಗ್ ಮಾಡುತ್ತಿದ್ದು, ಸ್ವಚ್ಛತೆ ಕಾಪಾಡುವಲ್ಲಿ ನಮ್ಮ ಪೌರಕಾರ್ಮಿಕರು ಸಾಕಷ್ಟು ಶ್ರಮ ಪಡುತ್ತಿದ್ದಾರೆ. ಜೊತೆಗೆ ಸಾರ್ವಜನಿಕರು ಅವರ ಜೊತೆ ಕೈಜೋಡಿಸಿ ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಬೇಕು ಎಂದು ಕೋರಿದರು.

ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ, ಮನುಷ್ಯರಿಗೆ ಆರೋಗ್ಯ ಮುಖ್ಯ. ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ರೋಗಗಳು ಪತ್ತೆಯಾಗುತ್ತಿದೆ. ಇದರಲ್ಲಿ ಡೆಂಘೀ ಜ್ವರವು ಸಹ ಒಂದಾಗಿದ್ದು, ಇದರ ಬಗ್ಗೆ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು. ಡೆಂಘೀ ಜ್ವರ ನಿಯಂತ್ರಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬರೂ ಈಡೀಸ್ ಲಾರ್ವ ಉತ್ಪತ್ತಿ ತಾಣಗಳನ್ನು ನಾಶಪಡಿಸಿ, ಡೆಂಘೀ ಜ್ವರ ಹರಡದಂತೆ ಮುಂಜಾಗ್ರತೆ ವಹಿಸಬೇಕು ಎಂದು ಮನವಿ ಮಾಡಿದರು.

ಮಂಡಿ ಪೊಲೀಸ್ ಠಾಣೆಯ ಎಸ್ಐ ರಂಗಸ್ವಾಮಿ, ಸ್ಥಳೀಯ ಮುಖಂಡರಾದ ವಿಜಿ, ಗಣೇಶ, ರಾಜು, ಸಂತೋಷ್, ಸದಾಶಿವ, ಸೂರಜ್, ಕಣ್ಣನ್, ರಶ್ಮಿ, ಪ್ರಭು, ಮಹಾಂತೇಶ್ ಮೊದಲಾದವರು ಇದ್ದರು.