ಸಾರಾಂಶ
ಮಾರ್ಚ್ 3 ರಂದು ಪಲ್ಸ್ ಪೋಲಿಯೋ । ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಪೂರ್ವ ಭಾವಿ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಮಾರ್ಚ್ 3 ರಂದು ನಡೆಯುವ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಪೋಷಕರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೆ ತಮ್ಮ 5 ವರ್ಷದ ಒಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್ ಪೋಲಿಯೋ ಹನಿ ಹಾಕಿಸುವಂತೆ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ವಿಜಯಕುಮಾರ್ ಮನವಿ ಮಾಡಿದರು.
ಬುಧವಾರ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಪಲ್ಸ್ ಪೋಲಿಯೋ ಪೂರ್ವ ಭಾವಿ ಹಾಗೂ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಪಲ್ಸ್ ಪೋಲಿಯೋ ದೇಶದಿಂದ ಮುಕ್ತವಾಗಿದ್ದರಿಂದ ಕಳೆದ ವರ್ಷ ಪಲ್ಸ್ ಪೋಲಿಯೋ ಕಾರ್ಯಕ್ರಮ ಆಯೋಜಿಸಿರಲಿಲ್ಲ, ಆದರೆ, ಅಕ್ಕಪಕ್ಕದ ರಾಷ್ಟ್ರಗಳಲ್ಲಿ ಪಲ್ಸ್ ಪೋಲಿಯೋ ಪ್ರಕರಣ ಮತ್ತೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಮರು ಚಾಲನೆ ನೀಡಿದೆ. ಎಲ್ಲಾ ಪೋಷಕರೂ ಮಾರ್ಚ್ 3 ರಂದು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್ ಪೋಲಿಯೋ ಹನಿ ಹಾಕಿಸಬೇಕು.ಈ ಕಾರ್ಯಕ್ರಮಕ್ಕೆ 96 ಬೂತ್‌ಗಳನ್ನು ಸ್ಥಾಪಿಸಲಾಗುವುದು. 404 ಜನರು ಕರ್ತವ್ಯ ನಿರ್ವಹಿಸಲಿದ್ದಾರೆ. ಶೇ.100 ರಷ್ಟು ಪೋಲಿಯೋ ಹನಿ ಹಾಕುವ ಗುರಿ ಹೊಂದಲಾಗಿದೆ. ತಾಲೂಕಿನಲ್ಲಿ ಒಟ್ಟು 4414 ಮಕ್ಕಳಿದ್ದಾರೆ. ಮಾ.4 ಹಾಗೂ 5 ರಂದು ಎರಡು ದಿನಗಳ ಕಾಲ ಮನೆ, ಮನೆಗೆ ಭೇಟಿ ನೀಡಿ ಪೋಲಿಯೋ ಹನಿ ಹಾಕಲಾಗುವುದೆಂದರು.ಕಟ್ಟಿನಮನೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ವಿನಯ್ ಮಾತನಾಡಿ, 1957 ರಲ್ಲಿ ಮೊದಲ ಬಾರಿಗೆ ಶಿವಮೊಗ್ಗದ ಕ್ಯಾಸನೂರು ಕಾಡಿನಲ್ಲಿ ಕೆಎಫ್ ಡಿ (ಮಂಗನ ಕಾಯಿಲೆ)ಪ್ರಕರಣ ಪತ್ತೆಯಾಯಿತು. ಅತಿಸಾರ ಬೇಧಿ, ಜ್ವರ, ಮೈಕೈ ನೋವು, ಕಣ್ಣು ಕೆಂಪಗಾಗುವುದು, ವಸಡು ಹಾಗೂ ಮೂಗಿನಲ್ಲಿ ರಕ್ತ ಸ್ರಾವ ಈ ರೋಗದ ಲಕ್ಷಣ. ಸಾರ್ವಜನಿಕರು ಅನಗತ್ಯವಾಗಿ ಕಾಡಿಗೆ ಹೋಗುವುದನ್ನು ಬಿಡಬೇಕು. ಕಾಡಿಗೆ ಹೋಗುವವರು ಪೂರ್ಣ ಪ್ರಮಾಣದ ಬಟ್ಟೆಯನ್ನು ಧರಿಸಬೇಕು ಎಂದರು.
ಜೇಸೀ ಸಂಸ್ಥೆ ಅಧ್ಯಕ್ಷ ಎಂ.ಪಿ.ಅಬ್ರಾಹಂ ಮಾತನಾಡಿ, ಪ್ರತೀ ವರ್ಷದಂತೆ ಈ ವರ್ಷವೂ ಬಸ್ ನಿಲ್ದಾಣ ಆವರಣದ ಪಲ್ಸ್ ಪೋಲಿಯೋ ಬೂತ್‌ನ್ನು ನಾವೇ ನಿರ್ವಹಣೆ ಮಾಡುತ್ತೇವೆ. ಸಿಬ್ಬಂದಿಗೆ ಎಲ್ಲಾ ರೀತಿಯ ಸಹಕಾರ ನೀಡಿ, ಅಂದಿನ ಖರ್ಚನ್ನು ಸಂಸ್ಥೆಯೇ ಭರಿಸುತ್ತದೆ ಎಂದರು.ರೋಟರಿ ಸಂಸ್ಥೆ ಅಧ್ಯಕ್ಷ ಕಿರಣ್ ಮಾತನಾಡಿ, ಪೋಲಿಯೋ ಕಾರ್ಯಕ್ರಮಕ್ಕೆ ಸಂಸ್ಥೆಯಿಂದ ವಾಹನಗಳನ್ನು ಒದಗಿಸಲಾಗುವುದು. ತಾ.ಕಸಾಪ ಅಧ್ಯಕ್ಷ ಎಚ್.ಎಸ್.ಪೂರ್ಣೇಶ್ ಮಾತನಾಡಿ, ಬಾಳೆಹೊನ್ನೂರು ಭಾಗದ ಪ್ರಮುಖ ಬೂತ್‌ಗಳ ಜವಾಬ್ದಾರಿ ವಹಿಸಿಕೊಳ್ಳವುದಾಗಿ ತಿಳಿಸಿದರು.ತಹಸೀಲ್ದಾರ್ ತನುಜಾ .ಟಿ.ಸವದತ್ತಿ ಮಾತನಾಡಿ, ನಮ್ಮ ದೇಶ ಪೋಲಿಯೋ ಮುಕ್ತ ದೇಶವಾಗಿದೆ. ಎಲ್ಲರ ಸಹಭಾಗಿತ್ವದಲ್ಲಿ ಇದು ಸಾಧ್ಯವಾಗಿದೆ. ಮಾರ್ಚ್ 3 ರ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆ ಮುಖ್ಯಸ್ಥರು ಸಹಕಾರ ನೀಡಬೇಕು ಎಂದರು. ವೈದ್ಯ ಡಾ.ಭರತ್ ಮೆದುಳು ಜ್ವರದ ಬಗ್ಗೆ ಮಾಹಿತಿ ನೀಡಿದರು. ಹಿರಿಯ ನಿರೀಕ್ಷಣಾಧಿ ಕಾರಿ ಪಿ.ಕೆ.ಭಗವಾನ್ ಇಲಿ ಜ್ವರದ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಸುರೇಶ್, ತಾ.ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ್ ಪವನ್ ಉಪಸ್ಥಿತರಿದ್ದರು.