ಅನುಮೋದನೆ ದೊರೆತರೂ ಆರಂಭವಾಗದ ಚರಂಡಿ ನಿರ್ಮಾಣ ಕಾಮಗಾರಿ

| Published : Jul 28 2024, 02:16 AM IST / Updated: Jul 28 2024, 02:17 AM IST

ಸಾರಾಂಶ

ನರೇಗಾದಡಿ ತುಂಗಾಭದ್ರಾ ಹಿನ್ನೀರು ಪ್ರದೇಶದಲ್ಲಿ ಹೂಳು ಎತ್ತುತ್ತಿರುವುದು ವ್ಯರ್ಥವಾಗುತ್ತಿದೆ.

ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿ ಗ್ರಾಮದ ೪ನೇ ವಾರ್ಡಿನ ಬಸ್‌ಸ್ಟ್ಯಾಂಡ್ ಪಕ್ಕದ ರಸ್ತೆಯಲ್ಲಿ ೨೦೨೨-೨೩ನೇ ಸಾಲಿನಲ್ಲಿ ಚರಂಡಿ ಮಾಡಲು ಅನುಮೋದನೆ ಸಿಕ್ಕರೂ ಗ್ರಾಪಂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಚರಂಡಿ ಕಾಮಗಾರಿ ನನೆಗುದಿಗೆ ಬಿದ್ದಿದೆ. ಇಲ್ಲಿ ನಿಂತ ನೀರಿನಿಂದಾಗಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ಕಾಲೋನಿಯ ಜನರು ಡೆಂಘೀ ಭೀತಿ ಎದುರಿಸುತ್ತಿದ್ದಾರೆ ಎಂದು ಪ್ರಾಂತರೈತ ಸಂಘದ ಜಿಲ್ಲಾ ಸಂಚಾಲಕ ಕೊಟಿಗಿ ಮಲ್ಲಿಕಾರ್ಜುನ ಆರೋಪಿಸಿದರು.

ತಾಲೂಕಿನ ತಂಬ್ರಹಳ್ಳಿ ಗ್ರಾಪಂ ಕಚೇರಿಯಲ್ಲಿ ನಡೆದ ನರೇಗಾ ಹಾಗೂ ೧೫ನೇ ಹಣಕಾಸು ಯೋಜನೆಯ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.

ನರೇಗಾದಡಿ ತುಂಗಾಭದ್ರಾ ಹಿನ್ನೀರು ಪ್ರದೇಶದಲ್ಲಿ ಹೂಳು ಎತ್ತುತ್ತಿರುವುದು ವ್ಯರ್ಥವಾಗುತ್ತಿದೆ. ಕೋಟಿಗಟ್ಟಲೇ ಭ್ರಷ್ಟಾಚಾರದ ಜೊತೆಗೆ ವೈಯಕ್ತಿಕ ಕಾಮಗಾರಿಗಳ ಆದ್ಯತೆ ಕ್ಷೀಣಿಸುತ್ತಿದೆ. ಹಿನ್ನೀರು ಪ್ರದೇಶ ವ್ಯಾಪ್ತಿಯ ವಿಜಯನಗರ, ಕೊಪ್ಪಳ, ಗದಗ ಈ ಎಲ್ಲ ಜಿಲ್ಲೆಗಳ ನದಿಯ ಎರಡು ದಂಡೆಯಲ್ಲಿ ಹೂಳು ತೆಗೆಯುವುದರಿಂದ ಕೋಟಿಗಟ್ಟಲೇ ಭ್ರಷ್ಟಾಚಾರ ನಡೆದಿದೆ. ಇದರ ಬದಲಿಗೆ ರೈತರು ಬೆಳೆಯುವ ಆಹಾರ ಬೆಳೆಗಳಿಗೆ ಅನುಕೂಲವಾಗುವಂತೆ ನರೇಗಾ ಕ್ರಿಯಾಯೋಜನೆ ರೂಪಿಸಬೇಕು. ಇದರಿಂದ ಕೃಷಿಗೆ ತಗುಲುವ ವೆಚ್ಚ ಕಡಿಮೆಯಾಗಿ ಆಹಾರ ಉತ್ಪಾದನೆ ಹೆಚ್ಚಾಗುತ್ತದೆ. ಗ್ರಾಮಸಭೆ ನಡೆಸುವ ಮೊದಲು ಎಲ್ಲ ವಾರ್ಡ್ ಸಭೆ ನಡೆಸಬೇಕಿತ್ತು. ನೇರವಾಗಿ ಗ್ರಾಮಸಭೆ ನಡೆಸುವುದರಿಂದ ನರೇಗಾ ಕಾಮಗಾರಿಗಳು ಕುಂಠಿತಗೊಳ್ಳುತ್ತವೆ. ನರೇಗಾದಲ್ಲಿ ಎನ್‌ಎಂಎಂಎಸ್ ಬಂದ ನಂತರ ಕೆಲಸಕ್ಕೆ ಹಾಜರಾದ ಕೂಲಿಕಾರರ ಪೋಟೋಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಇದರ ಬದಲಿಗೆ ಬಯೋಮೆಟ್ರಿಕ್ ಅಳವಡಿಕೆಯಾಗಬೇಕು ಎಂದು ಒತ್ತಾಯಿಸಿದರು.

ನೋಡಲ್ ಅಧಿಕಾರಿ ಸಿಡಿಪಿಒ ಸಿ.ಬೋರೇಗೌಡ ಪ್ರತಿಕ್ರಿಯಿಸಿ, ೪ನೇ ವಾರ್ಡಿನಲ್ಲಿ ಚರಂಡಿ ನಿರ್ಮಾಣ ಮಾಡುವಂತೆ ಕೂಡಲೇ ಸೂಚಿಸಲಾಗುವುದು. ನರೇಗಾ ವೈಯಕ್ತಿಕ ಕಾಮಗಾರಿಗಳಿಗೆ ಆದ್ಯತೆ ನೀಡಿ ಕ್ರಿಯಾಯೋಜನೆ ರೂಪಿಸಲಾಗುವುದು ಎಂದರು.

ಗ್ರಾಮದ ಮುಖಂಡ ಗಬ್ಬೂರ್ ದೇವಪ್ಪ ೨ನೇ ವಾರ್ಡಿನಲ್ಲಿ ಚರಂಡಿ ನಿರ್ಮಾಣವನ್ನು ಅರ್ಧಕ್ಕೆ ನಿಲ್ಲಿಸಿರುವುದರಿಂದ ದುರ್ವಾಸನೆಯ ಜಾಗದಲ್ಲಿ ಬದುಕುವಂತಾಗಿದೆ ಎಂದು ಆರೋಪಿಸಿದರು.

ಗ್ರಾಮ ಸಂಪನ್ಮೂಲ ವ್ಯಕ್ತಿ ಪೂಜಾರ್ ಸಿದ್ದಪ್ಪ ಮಾತನಾಡಿ, ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನರೇಗಾ ಯೋಜನೆಯಡಿ ಅಡುಗೆ ಕೋಣೆ ನಿರ್ಮಿಸಲಾಗಿದೆ. ವಾಲಿಬಾಲ್, ಖೋಖೋ, ಕಬಡ್ಡಿ, ರನ್ನಿಂಗ್ ಟ್ರ್ಯಾಕ್ ನಿರ್ಮಾಣ ಮಾಡಲಾಗಿದೆ. ಆರು ದನದ ಕೊಟ್ಟಿಗೆ ನಿರ್ಮಾಣ ಜೊತೆಗೆ ೬ಸಿಸಿ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಏಣಿಗಿ ಪೂರ್ಣಿಮ, ಉಪಾಧ್ಯಕ್ಷೆ ರುದ್ರಮ್ಮ, ಪಿಡಿಒ ಕೃಷ್ಣಮೂರ್ತಿ, ಸದಸ್ಯರಾದ ಮೈಲಾರ ಶಿವಕುಮಾರ, ಸಂಡೂರು ಮೆಹಬೂಬ್, ಕೆ.ಸಲೀಮಾಬೇಗಂ, ಎಚ್.ದೊಡ್ಡಬಸಪ್ಪ, ಎಂಜಿನಿಯರ್ ನಾಗಭೂಷಣ, ಸಂಪನ್ಮೂಲ ವ್ಯಕ್ತಿಗಳಾದ ರಾಮಲಸ್ವಾಮಿ, ಸವಿತಾ, ವಾಲಿ ವೀರೇಶ್, ಪೂರ್ಣಿಮ, ರೆಹಮಾನ್‌ಸಾಬ್, ಭದ್ರಮ್ಮ, ಮೇಟಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾಪಂ ಸಿಬ್ಬಂದಿ ಕಾಶಿನಾಯ್ಕರ ಕೊಟ್ರೇಶ ನಿರ್ವಹಿಸಿದರು.