ನಾಟಕಗಳು ತ್ರಿಕೋನ ಪ್ರೇಮ ಕಥೆಯಿದ್ದಂತೆ: ಡಾ.ಶ್ರೇಯಾ

| Published : Mar 29 2024, 12:47 AM IST

ನಾಟಕಗಳು ತ್ರಿಕೋನ ಪ್ರೇಮ ಕಥೆಯಿದ್ದಂತೆ: ಡಾ.ಶ್ರೇಯಾ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಜರುಗಿದ ಏಳು ದಿವಸಗಳ ನೇಪಥ್ಯ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಾಹಿತಿ ಡಾ. ಶ್ರೇಯಾ ಮಹೇಂದ್ರಕರ್‌ ಭಾಗಿಯಾಗಿ ಮಾತನಾಡಿದರು. ನಾಟಕದ ದೃಶ್ಯ 7 ದಿನಗಳ ನೇಪಥ್ಯ ನಾಟಕೋತ್ಸವಕ್ಕೆ ಸಂಭ್ರಮದ ತೆರೆ.

ಕನ್ನಡಪ್ರಭ ವಾರ್ತೆ ಬೀದರ್

ನಾಟಕಗಳು ತ್ರಿಕೋನ ಪ್ರೇಮಕಥೆಯಿದ್ದಂತೆ. ಕಲೆ, ಕಲಾವಿದ ಮತ್ತು ಪ್ರೇಕ್ಷಕರನ್ನೊಳಗೊಂಡ ವ್ಯಕ್ತಿಯ ಜೀವನದ ನೈಜ ಕಥೆಯೇ ನಾಟಕಗಳು. ಜೀವನವೇ ಒಂದು ನಾಟಕರಂಗ.ಅದರಲ್ಲಿ ನಾವು ನೀವುಗಳು ಒಂದು ಅಂಗವಿದ್ದಂತೆ. ನಾಟಕಗಳು ದುಃಖಾಂತ್ಯವೇ ಆಗಲಿ. ಸುಖಾಂತ್ಯವೇ ಆಗಲಿ. ಸಮಾಜಕ್ಕೆ ಒಂದು ಸಂದೇಶ ನೀಡುತ್ತವೆ ಎಂದು ಸಾಹಿತಿ ಡಾ. ಶ್ರೇಯಾ ಮಹೇಂದ್ರಕರ್ ತಿಳಿಸಿದರು.

ಜಾನಪದ ಕಲಾವಿದರ ಬಳಗ, ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಜರುಗಿದ ಏಳು ದಿವಸಗಳ ನೇಪಥ್ಯ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಗನ್ನಾಥ ಜಮಾದಾರ ಮಾತನಾಡಿ, ಹಿಂದೆ ನಾಟಕಗಳನ್ನು ನೋಡಲು ನಾ ಮುಂದೆ ತಾ ಮುಂದೆ ಎಂದು ಮನೆಯಿಂದಲೇ ಹೊದಿಕೆ, ಚಾಪೆ ತೆಗೆದುಕೊಂಡು ಹೋಗಿ, ಒಂದು ಗಂಟೆ ಮೊದಲೇ ಜಾಗ ಮೀಸಲು ಮಾಡಿಕೊಳ್ಳುತ್ತಿದ್ದರು. ಆದರೆ ಇಂದು ಆಧುನೀಕರಣ ಮತ್ತು ಮೊಬೈಲ್ ಯುಗದಲ್ಲಿ ರಂಗಕಲೆ ತನ್ನ ಬೆಲೆ ಕಳೆದುಕೊಳ್ಳುತ್ತಿದೆ. ಹೀಗಾಗಿ ರಂಗಭೂಮಿ, ಲಕ್ಷ ಕೋಟಿ ಸಂಪಾದನೆ ಮಾಡಿದರೂ ನಮಗೆ ಶಾಂತಿ ಸಿಗುವುದಿಲ್ಲ. ಆದರೆ ಕಲೆ ಮತ್ತು ಕಲಾವಿದರು ಉಳಿದರೆ ಮಾತ್ರ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ ಎಂದರು.

ಹಿರಿಯ ರಂಗಕಲಾವಿದ ಸಂಗ್ರಾಮ ಎಂಗಳೆ ಮಾತನಾಡಿ, ಏಳು ದಿವಸಗಳ ನೇಪಥ್ಯ ನಾಟಕೋತ್ಸವದಲ್ಲಿ ಹಲವು ವಿಷಯಗಳನ್ನು ಕಲಿತೇವು. ನವರಸಗಳ ಜ್ಞಾನ, ಹೊಸ ಕಲೆಗಳ ಪರಿಚಯವಾಯಿತು. ನಾಟಕಗಳು ಹಾಗೂ ಅದರಲ್ಲಿರುವ ವಿಷಯಗಳು ನಮಗೆ ಚಿಂತನೆಗೆ ಈಡು ಮಾಡುತ್ತವೆ. ಪರವಶರಾಗುವಂತೆ ಮಾಡುತ್ತವೆ ಎಂದರು.

ಲಂಬಾಣಿ ಕಲಾವಿದೆ ಲಲಿತಾ ಲೋಕಪವಾರ್ ಅವರನ್ನು ಸನ್ಮಾನಿಸಲಾಯಿತು. ಏಳು ದಿವಸಗಳ ನೇಪಥ್ಯ ನಾಟಕೋತ್ಸವದ ಕರ್ತೃಗಳಾದ ಪಾರ್ವತಿ ವಿಜಯಕುಮಾರ ಸೋನಾರೆ ದಂಪತಿಗೆ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು.

ಎಂ.ಎಸ್.ಮನೋಹರ, ಲಕ್ಷ್ಮಿ ಅಬ್ರಹಾಂ ಉಪಸ್ಥಿತರಿದ್ದರು. ಸಂಜುಕುಮಾರ ಉಜನಿ ಹಾಗೂ ಸಂಗಡಿಗರಿಂದ ತತ್ವಪದ ಗಾಯನ ಜರುಗಿತು. ಸುನೀಲ ಕಡ್ಡೆ ನಿರ್ದೇಶನದ, ಎಚ್.ಎಲ್.ಕೇಶವಮೂರ್ತಿ ರಚನೆಯ ಬೀದರ್‌ ಸಮುದಾಯ ಕಲಾವಿದರಿಂದ ‘ಪುಕ್ಸಟ್ಟೆ ಪ್ರಸಂಗ’ ನಾಟಕ ಪ್ರದರ್ಶನ ಜರುಗಿತು. ವಿಜಯಕುಮಾರ ಸೋನಾರೆ ಸ್ವಾಗತಿಸಿದರು. ಸುನೀಲ ಕಡ್ಡೆ ನಿರೂಪಿಸಿದರೆ ದೇವಿದಾಸ ಚಿಮಕೊಡೆ ವಂದಿಸಿದರು.

ಕಾರ್ಯಕ್ರಮದಲ್ಲಿ ಏಸುದಾಸ ಅಲಿಯಂಬರ, ಹಿರಿಯ ಸಾಹಿತಿ ಭಾರತಿ ವಸ್ತ್ರದ, ಪುಷ್ಪ ಕನಕ, ರೇಖಾ ಸೌದಿ, ವೀರೂಪಾಕ್ಷ ಗಾದಗಿ, ನಾಗಶೆಟ್ಟಿ ಧರಂಪೂರ, ಪುಣ್ಯವತಿ ವಿಸಾಜಿ, ವಿದ್ಯಾವತಿ ಬಲ್ಲೂರ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.