ಸಹೃದಯರ ಕಣ್ಣಾಲಿಗಳಲ್ಲಿ ನೀರೂರಿಸಿದ ನಾಟಕಗಳು

| Published : Apr 01 2024, 12:45 AM IST

ಸಹೃದಯರ ಕಣ್ಣಾಲಿಗಳಲ್ಲಿ ನೀರೂರಿಸಿದ ನಾಟಕಗಳು
Share this Article
  • FB
  • TW
  • Linkdin
  • Email

ಸಾರಾಂಶ

ಅವಸರದ ನಿರ್ಧಾರದಿಂದ ಸಂಸಾರ ಸೂತ್ರವೇ ನಲುಗಿ ಕುಟುಂಬಗಳು ಬೀದಿ ಪಾಲಾಗುವ ರೈತರ ಅನಾಥ ಸ್ಥಿತಿಯನ್ನು ಅನಾವರಣಗೊಳಿಸಿದ ಆತ್ಮಹತ್ಯೆ ಹಾಗೂ ವೃದ್ಧಾಶ್ರಮ ಸಂಸ್ಕೃತಿಯ ಕರಾಳ ಸತ್ಯಗಳನ್ನು ಅಭಿವ್ಯಕ್ತಗೊಳಿಸಿದ ತಾಯಿಯ ಮಮತೆ ನಾಟಕಗಳು ಅರ್ಥಪೂರ್ಣ ನಿರೂಪಣೆಗೆ ಸಾಕ್ಷಿಯಾಯಾದವು.

ಹಾನಗಲ್ಲ: ಅವಸರದ ನಿರ್ಧಾರದಿಂದ ಸಂಸಾರ ಸೂತ್ರವೇ ನಲುಗಿ ಕುಟುಂಬಗಳು ಬೀದಿ ಪಾಲಾಗುವ ರೈತರ ಅನಾಥ ಸ್ಥಿತಿಯನ್ನು ಅನಾವರಣಗೊಳಿಸಿದ ಆತ್ಮಹತ್ಯೆ ಹಾಗೂ ವೃದ್ಧಾಶ್ರಮ ಸಂಸ್ಕೃತಿಯ ಕರಾಳ ಸತ್ಯಗಳನ್ನು ಅಭಿವ್ಯಕ್ತಗೊಳಿಸಿದ ತಾಯಿಯ ಮಮತೆ ನಾಟಕಗಳು ಅರ್ಥಪೂರ್ಣ ನಿರೂಪಣೆಗೆ ಸಾಕ್ಷಿಯಾಯಾದವು.ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಹಾನಗಲ್ಲ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ ಡಾ. ವಿಶ್ವನಾಥ ಬೋಂದಾಡೆ ಅವರು ರಚಿಸಿ ನಿರ್ದೆಶಿಸಿದ ಆತ್ಮಹತ್ಯೆ ಹಾಗೂ ಅವ್ವ ನಾಟಕಗಳು ಸಹೃದಯರ ಕಣ್ಣಾಲಿಗಳಲ್ಲಿ ನಿರೂರಿಸಿದವು. ಶಿಕ್ಷಣದ ಅಗತ್ಯದ ಜೊತೆಗೆ ಆತ್ಮವಿಶ್ವಾಸದ ನಡೆ ಅತ್ಯಂತ ಮುಖ್ಯ. ರೈತನಿಗೆ ಬರ ಅಥವಾ ಅತಿವೃಷ್ಟಿ ಹೊಸದಲ್ಲ. ಬ್ಯಾಂಕುಗಳು ಸಾಲ ಕೊಟ್ಟಿದ್ದು ಕೇಳುವುದರಲ್ಲಿ ಏನೂ ತಪ್ಪಿಲ್ಲ. ಯಾವುದನ್ನೂ ತಾಳ್ಮೆಯಿಂದ ಸ್ವೀಕರಿಸಿ ಸಮಾಧಾನದಿಂದ ಪರಿಹಾರ ಕಂಡುಕೊಳ್ಳುವ ನಡೆ ರೈತನದಾಗಬೇಕು.

ತಂದೆ ಅತ್ಮಹತ್ಯೆಗೊಳಗಾದ, ಆದರೆ ಮಗಳ ದುಃಖ ಮುಗಿಲು ಮುಟ್ಟಿತು. ಶಿಕ್ಷಕಿಯೊಬ್ಬಳು ಆ ರೈತನ ಮಗಳ ಶಿಕ್ಷಣಕ್ಕೆ ಒತ್ತು ಕೊಟ್ಟು, ಸಹಾಯ ನೀಡಿದಾಗ ಮಗಳು ಒಳ್ಳೆಯ ಉದ್ಯೋಗಿಯಾದಳು. ಸತ್ತ ಅಪ್ಪನ ಸಾಲ ಸಾಯಲಿಲ್ಲ. ಜೀವಂತವಾಗಿ ಬಡ್ಡಿಗೆ ಬಡ್ಡಿ ಬೆಳೆಯುತ್ತಿರುವ ಸಾಲವನ್ನು ಮಗಳು ತನ್ನ ವೇತನದಲ್ಲಿ ತೀರಿಸಿದ್ದು ಸುಳ್ಳಾಗಲಿಲ್ಲ. ಅಪ್ಪನ ಪ್ರಾಣ ಪಕ್ಷಿ ಹಾರಿ, ಇಡೀ ಸಂಸಾರ ಕಣ್ಣೀರ ಕಥೆಯಾದದ್ದು ಮಾತ್ರ ಸತ್ಯವಾಯಿತು. ಸಕಾಲಿಕ ಸರಿಯಾದ ನಿರ್ಧಾರಗಳು ಬೇಕೆ ಹೊರತು ಅವಸರದ ನಿರ್ಧಾರಗಳು ಇಡೀ ಕೌಟುಂಬಿಕ, ಸಾಮಾಜಿಕ ವ್ಯವಸ್ಥೆಯನ್ನು ಅಲ್ಲೊಲ ಕಲ್ಲೋಕಲ್ಲೋಗೊಳಿಸುತ್ತವೆ ಎಂಬ ಸಂದೇಶವನ್ನು ನಾಟಕ ಸಾರಿತು.

ಟೀಚರ್ ಪಾತ್ರದಲ್ಲಿ ಮನೋಜ್ಞ ಅಭಿನಯ ನೀಡಿದ ಪೃತ್ವಿ ಕಾಶೆಟ್ಟಿ, ರೈತನ ಪಾತ್ರದಲ್ಲಿ ಅಭಿನಯಿಸಿದ ನಂದಿನಿ ಪಾಟೀಲ, ಸಹಪಾತ್ರದಲ್ಲಿ ಎಚ್.ದೀಪಾ, ಪೂಜಾ ಪೂಜಾರ, ನೀಲಾ ಮುದ್ದಿ, ಅನಿತಾ ಭೋವಿ ವಡ್ಡರ, ಪಾರ್ವತಿ ವಿಭೂತಿ, ಸುಮಾದೇವಿ ಅಂಗಡಿ, ಸೌಭಾಗ್ಯ ವಾಲ್ಮೀಕಿ, ನಂದಿನಿ ತಳವಾರ, ಮಂಜುಳಾ ಕುಂದೂರ ಅತ್ಯುತ್ತಮ ಅಭಿನಯ ನೀಡಿದರು.ತಾಯಿಯ ಮಮತೆ ನಾಟಕ ಹಡೆದು, ಹಗಲಿರುಳು ದುಡಿದು, ಮಕ್ಕಳ ಹೊಟ್ಟೆ ಬಟ್ಟೆ, ನೆತ್ತಿಯನ್ನು ನೋಡಿಕೊಂಡು, ತನ್ನದೇ ಉಸಿರಾಟವಾಗಿ ಜೋಪಾನ ಮಾಡಿದ ತಾಯಿಯನ್ನು ವೃದ್ಧಾಶ್ರಮಕ್ಕೆ ಅಟ್ಟುವ ಹೊಸ ನಾಗರೀಕತೆಯ ವೈಪರಿತ್ಯವನ್ನು ಕಣ್ಣಿಗೆ ಕಟ್ಟುವಂತೆ ಅಭಿವ್ಯಕ್ತಗೊಳಿಸಿತು. ಸಾಮಾಜಿಕ ವೈಕಲ್ಯಗಳಿಗೆ ಕನ್ನಡಿಯಾದ ನಾಟಕ ಮಕ್ಕಳ ಮನೋಸ್ಥಿತಿಯ ಪ್ರತಿಬಿಂಬವಾಗಿತ್ತು.ತಾಯಿಯ ಪಾತ್ರದಲ್ಲಿ ಸೌಮ್ಯ ಸಿಂಗಣ್ಣನವರ ಅಚ್ಚು ಮೆಚ್ಚಿನ ಅಭಿನಯ ನೀಡಿದರು. ಶಿಲ್ಪಾ ಗೊಂದಿ, ಹುಲಿಗೆಮ್ಮ, ಉಮಾ ಅಂಬಿಗೇರ, ದೀಪಾ ಅಣ್ಣಿಗೇರಿ, ಶಾಂತಮ್ಮ, ಕಾವೇರಿ ಜಟ್ಟೆಪ್ಪನವರ, ಜಿ.ಸುಮಾ, ತಾಯವ್ವ ಬೆಣ್ಣಿ, ವಿದ್ಯಾ ಗುಡಿಕೊಪ್ಪ, ಮಮತಾ ಮುಗಳಕ್ಕಿ, ರಂಜಿತಾ ಸುಲೇಖಾ, ಎಸ್.ಬಿ. ದಾನೇಶ್ವರಿ, ಶ್ರೀದೇವಿ ಪಾನಗಲ್ಲ, ಸುನಂದಾ ಕಂದರಿ ಅವರು ಸುಂದರ ಅಭಿನಯ ನೀಡಿದರು. ಎರಡೂ ನಾಟಕಗಳಲ್ಲಿ ಬಿಇಡಿ ವಿದ್ಯಾರ್ಥಿನಿಯರೆ ಎಲ್ಲ ಪಾತ್ರಗಳಲ್ಲಿ ಕಾಣಿಸಿಕೊಂಡದ್ದು ವಿಶೇಷ.ಹನ್ನೆರಡನೇ ಶತಮಾನ ನಾಟಕ ಇಡೀ ಶರಣರ ಚಿಂತನೆಯ ಸೂತ್ರವಾದ ಸಮಾನತೆ, ಸಂಘರ್ಷದಿಂದ ದೂರವಿದ್ದು ಸಮನ್ವಯತೆಯ ಮೂಲಕ ಬದುಕು ಹಸನಗೊಳಿಸುವ ಸಂಗತಿಗಳನ್ನು ಹೃದಯಂಗಮವಾಗಿ ಕಟ್ಟಿ ಕೊಟ್ಟಿತು. ಈ ನಾಟಕದಲ್ಲಿ ವಿದ್ಯಾರ್ಥಿಗಳೇ ಎಲ್ಲ ಪಾತ್ರಧಾರಿಗಳು. ಪೀರಪ್ಪ ನಿಂಬೆಕಾಯಿ, ಮಂಜುನಾಥ ಬೈಲಸೀಮೆ, ಸೂರಜ್, ನೂತನ, ವಿಶ್ವನಾಥ, ಪ್ರಹ್ಲಾದ ಅತ್ಯುತ್ತ ಅಭಿನಯಕ್ಕೆ ಸಾಕ್ಷಿಯಾದರು.ಮೂರು ನಾಟಕಗಳೂ ನೂರು ಸಂದೇಶಗಳನ್ನು ಸಹೃದಯರಲ್ಲಿ ಬಿತ್ತಿ ಬೆಳೆಯುವಂತೆ ಮಾಡಿದವು. ಇದೇ ಸಂದರ್ಭದಲ್ಲಿ ಸ್ವಾತಿ ಬೈಲಣ್ಣನವರ, ಎನ್.ಎಂ.ಶಿವಾನಿ, ಅಮೃತಾ ಹಿರೇಮಠ ನಮಾಮಿ ನಮಾಮಿ ನೃತ್ಯದ ಮೂಲಕ ಗಮನ ಸೆಳೆದರು.