ಸಾರಾಂಶ
ಕೃಷ್ಣ ಎನ್. ಲಮಾಣಿ
ಕನ್ನಡಪ್ರಭ ವಾರ್ತೆ ಹೊಸಪೇಟೆ"ಈ ವರ್ಷ ಮಳೆ ಕೈಕೊಟ್ಟಿದ್ದು, ಬಂಗಾರದಂಥ ಮೆಕ್ಕೆಜೋಳ ಬೆಳೆ ಹಾಳಾಗೈತಿ. ನಮ್ಮ ಹೊಟ್ಟೆಯ ಬಾಗಿಲು ಹಾಕಿಕೊಳ್ಳುವಂತಾಗೈತಿ. ಮಳೀ ಬಂದಿದ್ರ್, ನಮ್ಮ ಬದುಕು ಬಂಗಾರದ್ಹಂಗ ಇರತಿತ್ತು. ಈಗ ದಿನಾ ಆಕಾಶ ನೋಡುವಂತಾಗಿದೆ " ಎಂದು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ನಂದಿಬಂಡಿ ಗ್ರಾಮದ ರೈತ ಮಹಿಳೆ ಮರಿಯವ್ವ ಬರಗಾಲದ ಚಿತ್ರಣವನ್ನೇ ನಾಲ್ಕೈದು ಮಾತುಗಳಲ್ಲಿ ಕೇಂದ್ರ ಬರ ಅಧ್ಯಯನ ತಂಡಕ್ಕೆ ಕಟ್ಟಿಕೊಟ್ಟಿದ್ದಾರೆ.
ಕೇಂದ್ರದ ಕುಡಿಯುವ ನೀರು ಹಾಗೂ ಸ್ವಚ್ಛತಾ ಸಚಿವಾಲಯದ ಹೆಚ್ಚುವರಿ ಸಲಹೆಗಾರ ಡಿ. ರಾಜೇಶ್ವರ ರಾವ್ ನೇತೃತ್ವದ ತಂಡ ನಂದಿಬಂಡಿ ಗ್ರಾಮದ ಮರಿಯವ್ವ ಜಮೀನಿಗೆ ಭೇಟಿ ನೀಡಿತು. ಜಮೀನಿನಲ್ಲಿದ್ದ ಮೆಕ್ಕೆಜೋಳ ಬೆಳೆಯನ್ನು ಪರಿಶೀಲನೆ ನಡೆಸಿತು. ಈ ವೇಳೆ ಕೃಷಿ ಇಲಾಖೆ ಅಧಿಕಾರಿಗಳು ಕೂಡ ಮೆಕ್ಕೆಜೋಳ ಬೆಳೆ ಸಂಪೂರ್ಣ ಹಾಳಾಗಿದೆ ಎಂದು ವಿವರಣೆ ನೀಡಿದರು.ಈ ವೇಳೆ ಐಎಎಸ್ ಅಧಿಕಾರಿ ಡಿ. ರಾಜೇಶ್ವರ ರಾವ್ ಖುದ್ದು ಮರಿಯವ್ವ ಅವರಿಂದ ವಿವರಣೆ ಪಡೆದರು. ಕನ್ನಡದಲ್ಲೇ ವಿವರಣೆ ನೀಡಿದ ಮರಿಯವ್ವ ನಮ್ಮ 14 ಹೆಕ್ಟೇರ್ ಜಮೀನಿನಲ್ಲಿ ಐವರಿಗೆ ಪಾಲಿದೆ. ಈ ಜಮೀನೇ ನಮಗೆ ಆಸರೆ. ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಈ ವರ್ಷ ಬೆಳೆ ವಿಮೆ ಕೂಡ ಮಾಡಿಸಿಲ್ಲ ಎಂದರು. ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹಿಂದಿಯಲ್ಲಿ ಅನುವಾದ ಮಾಡಿದರು.
ಮೆಕ್ಕೆಜೋಳ ಕಾಳುಕಟ್ಟಿಲ್ಲ:ಈ ವೇಳೆ ರೈತ ಕರೀಂಸಾಬ್, ಹಿಂದಿಯಲ್ಲೇ ವಿವರಿಸಿ, "ಮಳೆ ಉತ್ತಮವಾಗಿ ಬಿದ್ದಿದ್ದರೆ, ಎಕರೆಗೆ 26ರಿಂದ 30 ಕ್ವಿಂಟಲ್ ಇಳುವರಿ ಬರುತ್ತಿತ್ತು. ಈಗ ಮಳೆ ಕೈಕೊಟ್ಟಿದೆ. ಬಿತ್ತನೆ ಬೀಜ, ಗೊಬ್ಬರ, ಕೂಲಿಯಾಳು ಸೇರಿದಂತೆ ರೈತಗಾರಿಕೆ ಸೇರಿ ಎಕರೆಗೆ ₹20 ಸಾವಿರದಿಂದ ₹25 ಸಾವಿರ ವರೆಗೆ ಬೆಳೆ ಹಾನಿಯಾಗಿದೆ. ಮೆಕ್ಕೆಜೋಳ ಕಾಳುಕಟ್ಟಿಲ್ಲ, ಸಂಪೂರ್ಣ ಹಾಳಾಗಿದೆ. ಎತ್ತು, ದನಕರುಗಳಿಗೂ ಮೇವಿಲ್ಲ ಎಂದು ಅಳಲು ತೋಡಿಕೊಂಡರು.
ನಂದಿಬಂಡಿ ಗ್ರಾಮದ ಜನರಿಗೆ ಕುಡಿಯುವ ನೀರಿನ ಪರಿಸ್ಥಿತಿ ಹೇಗಿದೆ ಎಂದು ಅಧಿಕಾರಿ ಡಿ. ರಾಜಶೇಖರ್ ಪ್ರಶ್ನಿಸುತ್ತಿದ್ದಂತೆಯೇ ರೈತ ಮುಖಂಡ ಪರಶುರಾಮ, "ತುಂಗಭದ್ರಾ ನದಿ ಪಕ್ಕದಲ್ಲೇ ಹರಿಯುತ್ತದೆ. ಆದರೂ ಈ ಊರಿಗೆ ಕುಡಿಯುವ ನೀರಿಲ್ಲ. ಎಷ್ಟೇ ಪ್ರತಿಭಟನೆ ಮಾಡಿದರೂ ಸಮಸ್ಯೆ, ಸಮಸ್ಯೆ ಆಗಿಯೇ ಉಳಿದಿದೆ. ವ್ಯವಸ್ಥೆ ಎದುರಿಸಲಾಗದೇ ನಾವು ಕೂಡ ಎರಡ್ಮೂರು ಕಿ.ಮೀ. ದೂರದಲ್ಲಿರುವ ಬೋರ್‌ವೆಲ್‌ನಿಂದ ನೀರು ತರುವ ಪರಿಪಾಠ ಬೆಳೆಸಿಕೊಂಡಿದ್ದೇವೆ " ಎಂದರು.ಬರ ಅಧ್ಯಯನ ತಂಡ ಬಳಿಕ ರಾಮಪ್ಪ ಎಂಬವರ ಹೊಲದಲ್ಲಿನ ಮೆಕ್ಕೆಜೋಳ ಪರಿಶೀಲನೆ ನಡೆಸಿತು. ಆನಂತರ ನಾರಾಯಣದೇವರ ಕೆರೆ ಗ್ರಾಮಕ್ಕೆ ತೆರಳಿ ಮೆಕ್ಕೆಜೋಳ, ಶೇಂಗಾ ಸೇರಿದಂತೆ ವಿವಿಧ ಬೆಳೆಗಳನ್ನು ಪರಿಶೀಲನೆ ನಡೆಸಿತು.
ನಮ್ಮ ಬದುಕು ಕಷ್ಟದಲ್ಲಿದೆ:ಬಳಿಕ ಹಂಪಾಪಟ್ಟಣ ಗ್ರಾಮದ ಬಳಿ ಮೆಕ್ಕೆಜೋಳ, ಶೇಂಗಾ, ನವಣಿ ಬೆಳೆಗಳನ್ನು ಬರ ಅಧ್ಯಯನ ತಂಡ ಪರಿಶೀಲನೆ ನಡೆಸಿತು. ಈ ವೇಳೆ ರೈತ ಮಹಿಳೆ ಸಕ್ರಿಬಾಯಿ, " ಮಳೆ ಇಲ್ಲದೇ ಬೆಳೆದಿರುವ ಮೆಕ್ಕೆಜೋಳ ಸಂಪೂರ್ಣ ಹಾಳಾಗಿದೆ. ನಾವು ಕೆಲಸ ಹುಡುಕಿಕೊಂಡು, ಬೆಂಗಳೂರು, ಮೈಸೂರು ಕಡೆಗೆ ಗುಳೆ ಹೋಗುವಂತಾಗಿದೆ. ನಮ್ಮ ಬದುಕು ಕಷ್ಟದಲ್ಲಿದೆ. ಮಳೆಯಾಗಿದ್ರ್, ನಮಗ್ ಈ ಪರಿಸ್ಥಿತಿ ಬರುತ್ತಿರಲಿಲ್ಲ " ಎಂದರು.
ತಂಡದ ಅಧಿಕಾರಿಗಳು, ಹಳ್ಳಿ, ತಾಂಡಾಗಳ ಜನರ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ವಿವರಣೆ ಪಡೆದರು. ಮಳೆ ಇಲ್ಲದ್ದರಿಂದ ಈ ಬಾರಿ ಅಂತರ್ಜಲಮಟ್ಟ ಕುಸಿದು, ಬೋರ್‌ವೆಲ್‌ಗಳು ಕೈಕೊಟ್ಟಿರುವುದರಿಂದ ತೋಟಗಾರಿಕೆ ಬೆಳೆಗಳು ಕೂಡ ಹಾಳಾಗಿವೆ. ರೈತರ ಸ್ಥಿತಿ ಶೋಚನೀಯವಾಗಿದೆ. ದನಕರುಗಳಿಗೆ ಮೇವಿಲ್ಲದಂತಾಗಿದೆ. ಈ ಭಾಗದಲ್ಲಿ ಕೆರೆಗಳು ಬತ್ತಿವೆ. ಕೆರೆಗಳು ತುಂಬಿದ್ದರೆ, ಬೋರ್‌ವೆಲ್‌ಗಳಲ್ಲಿ ನೀರು ಇರುತ್ತಿತ್ತು. ಈಗಲೇ ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಇನ್ನೂ ಬೇಸಿಗೆಗಾಲದಲ್ಲಿ ನಮ್ಮ ಪರಿಸ್ಥಿತಿ ಊಹಿಸಿಕೊಳ್ಳಲು ಕಷ್ಟ ಇದೆ ಎಂದು ರೈತರಾದ ಶಂಕರ ನಾಯ್ಕ, ಕೇಶು ನಾಯ್ಕ, ರಂಗಾರೆಡ್ಡಿ ನಾಯ್ಕ ಅಧಿಕಾರಿಗಳಿಗೆ ವಿವರಣೆ ನೀಡಿದರು.