ಸಾರಾಂಶ
ಹಳಿಯಾಳ: ಪುರಸಭೆಯ ಆಡಳಿತದ ಇನ್ನುಳಿದ ಅವಧಿಗಾಗಿ ಅಧ್ಯಕ್ಷರಾಗಿ ಕಾಂಗ್ರೆಸ್‌ನ ದ್ರೌಪದಿ ಅಪ್ಪಾರಾವ್ ಅಗಸರ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮೀ ಅಶೋಕ ವಡ್ಡರ ಅವರು ಆಯ್ಕೆಯಾಗಿದ್ದಾರೆ.
ಶುಕ್ರವಾರ ಹಳಿಯಾಳ ಪುರಸಭೆಯ ಸಭಾಭವನದಲ್ಲಿ ಚುನಾವಣೆಯು ನಡೆಯಿತು. ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ ಅವರು ಚುನಾವಣಾಧಿಕಾರಿಗಳಾಗಿ ಪ್ರಕ್ರಿಯೆ ನಡೆಸಿದರು.ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಕಾಂಗ್ರೆಸ್‌ನ ದ್ರೌಪದಿ ಅಗಸರ ಅವರು ಬಿಜೆಪಿ ಅಭ್ಯರ್ಥಿ ಸಂಗೀತಾ ಜಾಧವ ಅವರನ್ನು ಹತ್ತು ಮತಗಳ ಅಂತರಿಂದ ಸೋಲಿಸಿ ಆಯ್ಕೆಯಾದರೆ, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಕಾಂಗ್ರೆಸ್‌ನ ಲಕ್ಷ್ಮಿ ವಡ್ಡರ ಅವಿರೋಧವಾಗಿ ಆಯ್ಕೆಯಾದರು.
ಅಡ್ಡ ಮತದಾನವಾಗುವ ಭೀತಿಯಿಂದ ಕಾಂಗ್ರೆಸ್ ಹಾಗೂ ಬಿಜೆಪಿ ತಮ್ಮ ಸದಸ್ಯರಿಗೆ ವಿಪ್ ಜಾರಿ ಮಾಡಿದ್ದವು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆ ಮೀಸಲಾತಿಯು ಘೋಷಣೆಯಾಗಿತ್ತು. ಹಳಿಯಾಳ ಪುರಸಭೆಯು 23 ಸದಸ್ಯರನ್ನು ಹೊಂದಿದ್ದು, ಅದರಲ್ಲಿ ಕಾಂಗ್ರೆಸ್ 15, ಬಿಜೆಪಿ 7 ಹಾಗೂ ಜೆಡಿಎಸ್ 1 ಸ್ಥಾನವನ್ನು ಹೊಂದಿದೆ.ತುರುಸಿನ ಚುನಾವಣೆ
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ದ್ರೌಪದಿ ಅಗಸರ ಹಾಗೂ ಬಿಜೆಪಿಯಿಂದ ಸಂಗೀತಾ ಜಾಧವ ಸ್ಪರ್ಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ 17 ಮತಗಳು ಹಾಗೂ ಬಿಜೆಪಿ ಅಭ್ಯರ್ಥಿ 7 ಮತಗಳನ್ನು ಪಡೆದರು. ಕಾಂಗ್ರೆಸ್ ಅಭ್ಯರ್ಥಿಯನ್ನು ಜೆಡಿಎಸ್ ಬೆಂಬಲಿತ ಸದಸ್ಯೆ ಶಬಾನಾ ಸೈಯ್ಯದಲಿ ಅಂಕೋಲೆಕರ ಬೆಂಬಲಿಸಿ ಮತ ಚಲಾಯಿಸಿದರೆ, ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ತಮ್ಮ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಿದರು.ಕಾಂಗ್ರೆಸ್ಸಿನಿಂದ ಸರಣಿ ಸಭೆಗಳು
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯ ಸೂಕ್ಷ್ಮತೆ ಹಾಗೂ ಗಂಭೀರತೆಯನ್ನು ಮೊದಲೇ ಗ್ರಹಿಸಿಕೊಂಡ ಶಾಸಕ ಆರ್.ವಿ. ದೇಶಪಾಂಡೆ ಅವರು ಗುರುವಾರ ಸಂಜೆಯಿಂದಲೇ ತಮ್ಮ ನಿವಾಸದಲ್ಲಿ ಪುರಸಭೆಯ ಕಾಂಗ್ರೆಸ್ ಸದಸ್ಯರ ಸರಣಿ ಸಭೆಗಳನ್ನು ನಡೆಸಿದರು. ಸರ್ವ ಸದಸ್ಯರ ಅಭಿಪ್ರಾಯಗಳನ್ನು ಆಲಿಸಿದ ದೇಶಪಾಂಡೆ ಅವರು ಪಕ್ಷದ ಹಿತದೃಷ್ಟಿಯಿಂದ ಕೈಗೊಳ್ಳುವ ನಿರ್ಧಾರಗಳಿಗೆ ಸರ್ವ ಸದಸ್ಯರು ಬೆಂಬಲಿಸಬೇಕು ಎಂದು ಸೂಚಿಸಿದರು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷ ಬಯಸಿದ ಅಭ್ಯರ್ಥಿಗಳು ಹೆಸರನ್ನು ಘೋಷಿಸಿದಾಗ ಸರ್ವ ಸದಸ್ಯರು ಒಮ್ಮತದಿಂದ ಬೆಂಬಲ ವ್ಯಕ್ತಪಡಿಸಿದರು. ಶುಕ್ರವಾರ ಬೆಳಗ್ಗೆಯೂ ತಮ್ಮ ನಿವಾಸದಲ್ಲಿ ಅಂತಿಮ ಸಭೆ ನಡೆಸಿದ ದೇಶಪಾಂಡೆ, ಸದಸ್ಯರೊಂದಿಗೆ ಹಾಗೂ ಕಾಂಗ್ರೆಸ್ ಪದಾಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದರು. ಈ ಸಭೆಯ ಆನಂತರ ಸರ್ವ ಸದಸ್ಯರನ್ನು ಜತೆಗೂಡಿಸಿಕೊಂಡ ದೇಶಪಾಂಡೆ ಅವರು ಪುರಸಭೆ ವರೆಗೂ ಕಾಲ್ನಡಿಗೆಯಲ್ಲಿ ತೆರಳಿ, ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗುವ ವರೆಗೂ ಅಲ್ಲಯೇ ಉಳಿದು ಫಲಿತಾಂಶ ಘೋಷಣೆಯಾದ ಆನಂತರ ಆಯ್ಕೆಯಾದ ತಮ್ಮ ಅಭ್ಯರ್ಥಿಗಳನ್ನು ಅಭಿನಂದಿಸಿ ಹೊರನಡೆದರು.ಬಿಜೆಪಿ ಪ್ರಯತ್ನ ವಿಫಲ
ಅಧ್ಯಕ್ಷ ಸ್ಥಾನ ಗೆಲ್ಲಲು ಬಿಜೆಪಿ ನಡೆಸಿದ ಪ್ರಯತ್ನಗಳು ವಿಫಲವಾದವು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುರಸಭೆಯ ಹಲವಾರು ಕಾಂಗ್ರೆಸ್ ಸದಸ್ಯರು ಜೆಡಿಎಸ್ ಪರವಾಗಿ ಕಾಣಿಸಿದ್ದರು. ಇದರ ಲಾಭವನ್ನು ಪಡೆಯಲು ಮುಂದಾದ ಬಿಜೆಪಿ ಘೋಟ್ನೇಕರ ಪರವಾಗಿರುವ ಹಾಗೂ ಅಸಮಾಧಾನಿತ ಸದಸ್ಯರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಪ್ರಯತ್ನ ಆರಂಭಿಸಿತು. ಈ ರಾಜಕೀಯ ಬೆಳವಣಿಗೆಯ ಮಧ್ಯೆ ಕಾಂಗ್ರೆಸಿನಿಂದ ಐದು ಸದಸ್ಯರು ಅಡ್ಡ ಮತದಾನ ಮಾಡುವುದಾಗಿ ನೀಡಿದ ಭರವಸೆ ನಂಬಿದ ಬಿಜೆಪಿಯು ನಿರಾಶೆ ಅನುಭವಿಸಿತು. ಇದರ ಪರಿಣಾಮ ಕೊನೆಯ ಗಳಿಗೆಯಲ್ಲಿ ಚುನಾವಣಾ ಮ್ಯಾಜಿಕ್ ನಡೆಯಬಹುದು ಎಂದುಕೊಂಡಿದ್ದ ಬಿಜೆಪಿ ಮುಖಭಂಗವನ್ನು ಅನುಭವಿಸಿತು.ಜೆಡಿಎಸ್‌ನಿಂದ ಮೈತ್ರಿ ಧರ್ಮ ಉಲ್ಲಂಘನೆ- ಬಿಜೆಪಿ ಆರೋಪ
ಹಳಿಯಾಳ: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಹೀಗಿರುವಾಗ ಪುರಸಭೆಯ ಚುನಾವಣೆಯಲ್ಲಿ ಜೆಡಿಎಸ್ ಸದಸ್ಯೆ ಮೈತ್ರಿ ಧರ್ಮಪಾಲನೆ ಮಾಡದೇ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ ದ್ರೋಹವೆಸಗಿದ್ದಾರೆ ಎಂದು ಹಳಿಯಾಳ ಪುರಸಭೆಯಲ್ಲಿ ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ.ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ಆನಂತರ ಬಿಜೆಪಿಯ 7 ಸದಸ್ಯರು ಜಂಟಿ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ಹೊರಹಾಕಿದರು.ಬಿಜೆಪಿ ಸದಸ್ಯ ಸಂತೋಷ ಘಟಕಾಂಬ್ಳೆ ಮಾತನಾಡಿ, ಚುನಾವಣೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಸ್ಪರ್ಧಿಸುವುದು ಮುಖ್ಯ. ಹೀಗಿರುವಾಗ ಚುನಾವಣಾ ಸಮಯದಲ್ಲಿ ಹಳಿಯಾಳದಲ್ಲಿನ ಜೆಡಿಎಸ್ ಮುಖಂಡರು ಈ ಮೈತ್ರಿ ಧರ್ಮಪಾಲನೆಯ ಬಗ್ಗೆ ಎಚ್ಚರಿಕೆ ವಹಿಸಬೇಕಿತ್ತು. ತಮ್ಮ ಪಕ್ಷದ ಸದಸ್ಯೆಯನ್ನು ಕರೆದು ಮೊದಲೇ ತಿಳಿಸಬೇಕಾಗಿತ್ತು. ಆದರೆ ಇದಾವುದನ್ನು ಮಾಡದೇ ಮೈತ್ರಿ ಧರ್ಮದ ವಿರುದ್ಧ ನಡೆದುಕೊಂಡಿದ್ದಾರೆ. ಅವರ ಅಸಹಕಾರದ ಬಗ್ಗೆ ನಮ್ಮ ಪಕ್ಷದ ಮುಖ್ಯಸ್ಥರು ಹೈಕಮಾಂಡಿಗೆ ದೂರನ್ನು ಸಲ್ಲಿಸಲಿದ್ದಾರೆ ಎಂದರು.
ಪುರಸಭೆಯ ಇನ್ನೋರ್ವ ಬಿಜೆಪಿ ಸದಸ್ಯ ಉದಯ ಹೂಲಿ ಮಾತನಾಡಿ, ಹಿರಿಯ ನಾಯಕರಾದ ಆರ್.ವಿ. ದೇಶಪಾಂಡೆ ಅವರು ಪುರಸಭೆಯ ಅಭಿವೃದ್ಧಿಗಾಗಿ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ತಂದರೂ ಸರಿಯಾಗಿ ಅದರ ಬಳಕೆಯಾಗುತ್ತಿಲ್ಲ. ಕಾಂಗ್ರೆಸ್ ಮುಖಂಡರು ಕಾರ್ಯಕರ್ತರೇ ದೇಶಪಾಂಡೆ ಅವರ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದ್ದು, ಇದನ್ನು ದೇಶಪಾಂಡೆ ಅವರು ಗಮನಿಸಬೇಕು ಎಂದರು.ಹಳಿಯಾಳ ಪುರಸಭೆಯಲ್ಲಿ ಹಿಂದಿನ ಆಡಳಿತಾವಧಿಯಲ್ಲಿ ಆದ ಹಗರಣಗಳನ್ನು ನಾವು ಬೆಳಕಿಗೆ ತಂದಿದ್ದೇವೆ. ಎನ್‌ಎ ಪರವಾನಗಿ ನೀಡಲು ಲಕ್ಷಾಂತರ ರುಪಾಯಿ ಲಂಚ ಪಡೆದ ಘಟನೆ, ಸ್ವಾತಂತ್ರ್ಯ ಸುವರ್ಣ ಸಂಭ್ರಮೋತ್ಸವದ ಹೆಸರಿನಲ್ಲಿ ನಡೆದ ಲಕ್ಷಾಂತರ ಭ್ರಷ್ಟಾಚಾರ ಬಯಲಿಗೆಳೆದಿದ್ದೇವೆ. ದೇಶಪಾಂಡೆ ಅವರು ತಮ್ಮ ಪಕ್ಷದ ಸದಸ್ಯರ ಮೇಲೆ ಯಾವುದೇ ಶಿಸ್ತಿನ ಕ್ರಮ ಕೈಗೊಂಡಿಲ್ಲ. ಅವರ ಮೂಗಿನಡಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದರೂ ದೇಶಪಾಂಡೆ ಅವರು ತಾಳಿದ ಮೌನ ಸಂಶಯಕ್ಕೆ ಎಡೆಮಾಡಿ ಕೊಡುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸದಸ್ಯ ಚಂದ್ರು ಕಮ್ಮಾರ, ಶಾಂತಾ ಹಿರೇಕರ, ರಾಜೇಶ್ವರಿ ಹಿರೇಮಠ, ರೂಪಾ ಗಿರಿ, ಸಂಗೀತಾ ಜಾಧವ ಇದ್ದರು.