ಸಾರಾಂಶ
ಹೊನ್ನಾವರ ತಾಲೂಕಿನ ಕರ್ಕಿ ಸಮೀಪದ ಪಾವಿನಕುರ್ವೆಗೆ ಸೇತುವೆ ನಿರ್ಮಿಸುವಂತೆ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರು ಸಣ್ಣ ನೀರಾವರಿ ಸಚಿವ ಬೋಸರಾಜು ಅವರಿಗೆ ಮನವಿ ಮಾಡಿದ್ದಾರೆ. 2003ರಲ್ಲಿ ನಿರ್ಮಿಸಿದ ತೂಗುಸೇತುವೆ ಶಿಥಿಲವಾಗಿದ್ದು, ಅನಿವಾರ್ಯವಾಗಿ ಜನರು ಅದರಲ್ಲೇ ಓಡಾಡುತ್ತಿದ್ದಾರೆ.
ಪ್ರಸಾದ್ ನಗರೆ
ಹೊನ್ನಾವರ: ತಾಲೂಕಿನ ಕರ್ಕಿ ಸಮೀಪದ ದ್ವೀಪ ಗ್ರಾಮವಾದ ಪಾವಿನಕುರ್ವೆಗೆ ಸೇತುವೆ ನಿರ್ಮಿಸಬೇಕು ಎಂಬ ಜನರ ಕನಸಿಗೆ ಈಗ ಇಂಬು ದೊರೆತಿದೆ.ಸುತ್ತಲೂ ಶರಾವತಿ ನೀರಿನಿಂದ ಹಾಗೂ ಅರಬ್ಬಿ ಸಮುದ್ರದಿಂದ ಸುತ್ತುವರಿದ ಈ ಗ್ರಾಮದ ಜನರಿಗೆ ಓಡಾಡಲು ಕಷ್ಟಕರ ಪರಿಸ್ಥಿತಿ ಇದೆ. ೨೦೦೩ರಲ್ಲಿ ನಿರ್ಮಿಸಿದ ತೂಗುಸೇತುವೆ ಶಿಥಿಲವಾಗಿದ್ದು, ಜನರು ಓಡಾಡಲು ಯೋಗ್ಯವಾಗಿಲ್ಲ. ಆದರೆ ಪರ್ಯಾಯ ವ್ಯವಸ್ಥೆಯೇ ಇರಲಿಲ್ಲ.
ಕಾಂಗ್ರೆಸ್ ಮುಖಂಡ, ಕರ್ಕಿ ಗ್ರಾಪಂ ಉಪಾಧ್ಯಕ್ಷ ವಿನೋದ ನಾಯ್ಕ ಮತ್ತು ಸ್ಥಳೀಯ ಗ್ರಾಮಸ್ಥರ ಒತ್ತಾಯದ ಮೇರೆಗೆ ರಾಜ್ಯ ಸರ್ಕಾರದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಮಾಜಿ ಸಚಿವ ಆರ್.ವಿ. ದೇಶಪಾಂಡೆ ಅವರು ಶನಿವಾರ ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮದ ಪಾವಿನಕುರ್ವಾದ ಪಾದಚಾರಿಗಳು ಸಂಚರಿಸಲಾಗದೇ ದುರ್ಬಲಗೊಂಡ ತೂಗು ಸೇತುವೆ ವೀಕ್ಷಿಸಿದರು. ತಕ್ಷಣ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಸಣ್ಣ ನೀರಾವರಿ ಸಚಿವ ಬೋಸರಾಜ್ ಅವರಿಗೆ ದೂರವಾಣಿ ಕರೆ ಮಾಡಿ, ಇಲ್ಲಿನ ಸೇತುವೆಯನ್ನು ಹೊಸದಾಗಿ ನಿರ್ಮಿಸಿಕೊಡುವಂತೆ ಕೋರಿದ್ದಾರೆ. ಇದೀಗ ಆರ್.ವಿ. ದೇಶಪಾಂಡೆ ಅವರು ಖುದ್ದಾಗಿ ಈ ಸೇತುವೆ ಪರಿಶೀಲಿಸಿ, ಸಣ್ಣ ನೀರಾವರಿ ಸಚಿವರಿಗೆ ಸ್ಥಳದಿಂದಲೇ ಫೋನ್ ಮಾಡಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದಾರೆ.ಈ ಸೇತುವೆಯ ಅವಧಿ ಈಗಾಗಲೇ ಮುಗಿದಿದ್ದು, ಓಡಾಡಲು ಯೋಗ್ಯವಲ್ಲ ಎಂದು ಅಭಿಯಂತರರು ಸಣ್ಣ ನೀರಾವರಿ ಇಲಾಖೆಗೆ ಹಾಗೂ ಕಂದಾಯ ಇಲಾಖೆಗೆ ವರದಿ ನೀಡಿದ್ದಾರೆ. ೨೦೧೩ ಮತ್ತು ೨೦೧೮ರಲ್ಲಿ ನೆರೆ ಪರಿಹಾರ ನಿಧಿಯಲ್ಲಿ ಈ ಸೇತುವೆಯನ್ನು ದುರಸ್ತಿ ಮಾಡಲಾಗಿತ್ತು.
ಪಾವಿನಕುರ್ವಾ ಗ್ರಾಮದ ಜನಸಂಖ್ಯೆ ೭೦೦ರಿಂದ ೮೦೦ರಷ್ಟಿದೆ. ಒಟ್ಟು ೧೮೦ ಮನೆಗಳು ಇಲ್ಲಿ ಇವೆ. ಈಗ ಶಿಥಿಲಾವಸ್ಥೆಗೆ ಜಾರಿರುವ ಈ ಸೇತುವೆಯನ್ನು ಪಾವಿನಕುರ್ವಾ, ತಾರಿಬಾಗಿಲ, ಗೋಳಿಬೆಟ್ಟ, ಕರಿಮೂಲೆಯ ಜನರು ಬಳಸುತ್ತಿದ್ದಾರೆ. ಎರಡು ವರ್ಷಗಳಿಂದ ಈ ಸೇತುವೆ ದುರವಸ್ಥೆಗೆ ತಲುಪಿದೆ. ಆದರೆ ಇಲ್ಲಿಯ ಜನರಿಗೆ ಅದನ್ನೇ ಬಳಸಬೇಕಾದ ಅನಿವಾರ್ಯತೆ ಇದೆ.ಈ ಸೇತುವೆಗೆ ಬೇಕು ₹೪೨ ಕೋಟಿ: ಇನ್ನು ಇಲ್ಲಿ ಶಾಶ್ವತ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಒಟ್ಟೂ ಅಂದಾಜು ₹೪೨ ಕೋಟಿ ಬೇಕಾಗಲಿದೆ. ಸೇತುವೆ ನಿರ್ಮಾಣಕ್ಕೆ ಅಂದಾಜು ₹೧೪ ಕೋಟಿ ಹಾಗೂ ಸೈಡ್ ಪಿಚಿಂಗ್ ಮತ್ತು ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಅಂದಾಜು ₹೨೫ ಕೋಟಿ ಹಣ ಬೇಕಾಗಲಿದೆ.
ಲೋಕೋಪಯೋಗಿ ಇಲಾಖೆಯೂ ನೀಡಿದೆ ವರದಿ: ಪಾವಿನಕುರ್ವಾಗೆ ಸಂಪರ್ಕಿಸುವ ತೂಗು ಸೇತುವೆ ತನ್ನ ಗಟ್ಟಿತನ ಕಳೆದುಕೊಂಡಿದೆ, ನಡೆದಾಡಲು ಯೋಗ್ಯವಲ್ಲ. ಇದರ ಮೇಲೆ ಓಡಾಡುವುದನ್ನು ನಿಲ್ಲಿಸಬೇಕು ಎಂದು ೨ ವರ್ಷಗಳ ಹಿಂದೆಯೇ ಲೋಕೋಪಯೋಗಿ ಇಲಾಖೆ ವರದಿ ಸಲ್ಲಿಸಿದೆ. ಅದಕ್ಕೂ ಮುನ್ನ ಸಹಾಯಕ ಆಯುಕ್ತರು, ತಹಸೀಲ್ದಾರ್ ಈ ಸ್ಥಳಕ್ಕೆ ಭೇಟಿ ನೀಡಿ ಫಿಟ್‌ನೆಸ್ ಸರ್ಟಿಫಿಕೆಟ್ ನೀಡುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ವರದಿ ನೀಡಿದ್ದ ಲೋಕೋಪಯೋಗಿ ಇಲಾಖೆ, ಬೇರೆ ಕಡೆಯಿಂದ ಓಡಾಡಲು ಜನರಿಗೆ ವ್ಯವಸ್ಥೆ ಮಾಡಿದರೆ ಸೂಕ್ತ ಎಂಬ ಸಲಹೆಯನ್ನೂ ನೀಡಿತ್ತು. ಇದೀಗ ಹೊಸ ಸೇತುವೆ ನಿರ್ಮಾಣವಾಗಬಹುದು ಎಂಬ ಸಣ್ಣ ಆಸೆಯೊಂದು ಜನರಲ್ಲಿ ಮೂಡಿದೆ.