ಸಾರಾಂಶ
ಎಂ.ಅಫ್ರೋಜ್ ಖಾನ್
ಕನ್ನಡಪ್ರಭ ವಾರ್ತೆ ರಾಮನಗರಬೇಸಿಗೆ ಧಗೆ ಹೆಚ್ಚಾಗಿ ಕುಡಿಯುವ ನೀರಿನ ಮೂಲಗಳು ಬತ್ತುತ್ತಿವೆ. ಜಿಲ್ಲೆಯಲ್ಲಿ ಸದ್ಯಕ್ಕೆ 19 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ.
ಬೇಸಿಗೆ ಆಗಮನದೊಂದಿಗೆ ನೀರಿನ ಸಮಸ್ಯೆ ಜಿಲ್ಲೆಯನ್ನು ದಿನ ಕಳೆದಂತೆ ವ್ಯಾಪಿಸುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ನೀರಿನ ಸೆಲೆಗಳು ಬರಿದಾಗುತ್ತಿದ್ದು, ಮುಂದಿನ ದಿನಗಳಲ್ಲಿ ನೀರಿನ ಅಭಾವ ಮತ್ತಷ್ಟು ಹೆಚ್ಚಳವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.ಏಪ್ರಿಲ್‍ನ ಮೊದಲ ವಾರಕ್ಕೆ ಜಿಲ್ಲೆಯ 19 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಈ ಪರಿಣಾಮ ಮತ್ತಷ್ಟು ಹೆಚ್ಚಾಗುವ ಎಲ್ಲಾ ಸೂಚನೆ ಗೋಚರಿಸುತ್ತಿದೆ. ಜಲಸಂಪನ್ಮೂಲ ಸಚಿವ ಹಾಗೂ ಉಪಮುಖ್ಯಮಂತ್ರಿ ಆಗಿರುವ ಡಿ.ಕೆ. ಶಿವಕುಮಾರ್ ಕ್ಷೇತ್ರ ಕನಕಪುರ ತಾಲೂಕಿನಲ್ಲಿಯೇ ಹೆಚ್ಚು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ.
ಕಳೆದ ವರ್ಷ ಉಂಟಾಗಿದ್ದ ಬರದಿಂದ ಈ ಬಾರಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಮಾಡಿದೆ. ಜತೆಗೆ, ಕಳೆದ ವರ್ಷದಲ್ಲಿನ ಮಳೆ ಕೊರತೆ ಅದರಲ್ಲೂ ಕನಕಪುರ ತಾಲೂಕಿನಲ್ಲಿ ಮಳೆ ಕಡಿಮೆಯಾಗಿತ್ತು. ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಅಂತ್ಯದೊಳಗೆ ಕನಕಪುರ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಹಲವು ಕೆರೆಗಳು ಬರಿದಾಗಿ ನೀರಿನ ಸಮಸ್ಯೆ ಹೆಚ್ಚಳ ಮಾಡುವಂತೆ ಮಾಡಿದೆ.ಗ್ರಾಮಗಳಿಗೆ ಟ್ಯಾಂಕರ್ ನೀರಿನ ವ್ಯವಸ್ಥೆ :
ಜಿಲ್ಲೆಯಲ್ಲಿ ಉದ್ಭವಿಸಿರುವ ನೀರಿನ ಸಮಸ್ಯೆ ಬಗೆಹರಿಸಲು ಜಿಲ್ಲಾ ಪಂಚಾಯಿತಿ ಆಯಾ ಗ್ರಾಮ ಪಂಚಾಯಿತಿ ವತಿಯಿಂದ ಪ್ರತ್ಯೇಕವಾಗಿ ಟ್ಯಾಂಕರ್ ವ್ಯವಸ್ಥೆ ಮಾಡುತ್ತಿದೆ. ಕೆಲವು ಕಡೆಯಲ್ಲಿ ಖಾಸಗಿ ಬೋರ್ ವೆಲ್ ಗಳನ್ನು ಪಡೆದು, ಜನರಿಗೆ ಕುಡಿಯುವ ನೀರನ್ನು ಪೂರೈಕೆ ಮಾಡುವ ಕೆಲಸ ಮಾಡಲಾಗುತ್ತಿದೆ.ಖಾಸಗಿ ಟ್ಯಾಂಕರ್ ಮೂಲಕ ಪ್ರತಿ ದಿನ 10 ಟ್ರಿಪ್ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಹಾರೋಹಳ್ಳಿ ತಾಲೂಕಿನಲ್ಲಿ 4 ಟ್ರಿಪ್, ಕನಕಪುರ ತಾಲೂಕಿನಲ್ಲಿ 2 ಟ್ರಿಪ್, ಮಾಗಡಿ ತಾಲೂಕಿನಲ್ಲಿ 3 ಟ್ರಿಪ್, ರಾಮನಗರ ತಾಲೂಕಿನಲ್ಲಿ 1 ಟ್ರಿಪ್ ಟ್ಯಾಂಕರ್ ನೀರು ನಿತ್ಯ ಪೂರೈಕೆ ಮಾಡಲಾಗುತ್ತಿದೆ. ಆದರೆ, ಚನ್ನಪಟ್ಟಣ ತಾಲೂಕಿನ ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿಲ್ಲ. ಬದಲಿಗೆ ಖಾಸಗಿ ಕೊಳವೆ ಬಾವಿ ಪಡೆದು, ಗ್ರಾಮಗಳಲ್ಲಿ ನೀರುಪೂರೈಕೆ ಮಾಡಲಾಗುತ್ತಿದೆ.
ನೀರಿನ ಅಭಾವ ಇರುವ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಗೆ 7 ಟ್ಯಾಂಕರ್ ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಚನ್ನಪಟ್ಟಣ ಹೊರತು ಪಡಿಸಿ, ಹಾರೋಹಳ್ಳಿ ತಾಲೂಕಿಗೆ 4 ಟ್ಯಾಂಕರ್ ನೀರು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಬಾಕಿ ಉಳಿದ ಎಲ್ಲಾ ತಾಲೂಕಿಗೆ 1 ಟ್ಯಾಂಕರ್ ಮೂಲಕ ಸಮಸ್ಯೆ ಇರುವ ಪ್ರದೇಶಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ.ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಆಯಾ ಗ್ರಾಮ ಪಂಚಾಯಿತಿಗಳ ಮೂಲಕ ಖಾಸಗಿ ಕೊಳವೆ ಬಾವಿಗಳನ್ನು ಪಡೆದು ನೀರು ಪೂರೈಕೆ ಮಾಡಲಾಗುತ್ತಿದೆ. ಗ್ರಾಮಾಂತರ ಭಾಗದಲ್ಲಿ 22 ಕೊಳವೆ ಬಾವಿಗಳನ್ನು ಪಡೆದುಕೊಳ್ಳಲಾಗಿದೆ.
ಬೇಸಿಗೆ ಆರಂಭದಲ್ಲಿ ಪ್ರತಿ ಬಾರಿ ಗ್ರಾಮಾಂತರ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿಯೇ ಅತೀ ಹೆಚ್ಚು ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಅದರಲ್ಲೂ ಜಿಲ್ಲಾ ಕೇಂದ್ರದಲ್ಲಿ ಕಳೆದ ಬೇಸಿಗೆಯಲ್ಲಿ 20 ದಿನಕೊಮ್ಮೆ ನೀರಿನ ಪೂರೈಕೆ ಮಾಡಲಾಗಿತ್ತು. ಆದರೆ, ಈ ಬಾರಿ ಅಷ್ಟು ಸಮಸ್ಯೆ ಕಂಡುಬರುತ್ತಿಲ್ಲ. 24 ಗಂಟೆ ನೀರು ಯೋಜನೆ ಮುಕ್ತಾಯದ ಹಂತದಲ್ಲಿದೆ. ಹಾಗಾಗಿ ಜಿಲ್ಲಾ ಕೇಂದ್ರದಲ್ಲಿ 2 ಅಥವಾ 3 ದಿನಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಬಾಕಿ ಉಳಿದ ಕೆಲವು ವಾರ್ಡ್‍ಗಳಲ್ಲಿ ವಾರಕೊಮ್ಮೆ ಆಸುಪಾಸಿನಲ್ಲಿ ನೀರು ಬಿಡಲಾಗುತ್ತಿದ್ದು, ಈ ವಾರ್ಡ್‍ಗಳಲ್ಲಿ ಟ್ಯಾಂಕರ್ ನೀರು ಪೂರೈಕೆಗೆ ಸೂಚನೆ ನೀಡಲಾಗಿದೆ.ಕನಕಪುರ ತಾಲೂಕಿನಲ್ಲಿ ಎರಡು ದಿನಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಹಾರೋಹಳ್ಳಿ ಪಟ್ಟಣ ವ್ಯಾಪ್ತಿಯಲ್ಲಿ ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ. ಮಾಗಡಿ ನಗರ ಪ್ರದೇಶದಲ್ಲಿ ಎರಡು ದಿನಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಚನ್ನಪಟ್ಟನ ನಗರ ಪ್ರದೇಶದಲ್ಲಿ ದಿನಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ.
‘ರಾಮನಗರ ಜಿಲ್ಲೆಯ 19 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದು, ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಜತೆಗೆ, ಖಾಸಗಿ ಕೊಳವೆ ಬಾವಿಯಿಂದ ನೀರು ಕೊಡಲಾಗುತ್ತಿದೆ.’- ವೀರರಂಗೇಗೌಡ, ಇಇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಪಂ,ರಾಮನಗರ.
-------ರಾಮನಗರ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಇರುವ ಹಳ್ಳಿಗಳು
ತಾಲೂಕುಗ್ರಾಪಂಟ್ಯಾಂಕರ್ಬೋರ್ ವೆಲ್ಚನ್ನಪಟ್ಟಣ 02 00 02
ಹಾರೋಹಳ್ಳಿ 03 04 03ಕನಕಪುರ 08 0110
ಮಾಗಡಿ 04 0106ರಾಮನಗರ 02 0101
ಒಟ್ಟು 19 0722