ಕನ್ನಡಪ್ರಭ ವಾರ್ತೆ ಆಲಮಟ್ಟಿ
ಸಮರ್ಪಕವಾಗಿ ಕುಡಿಯುವ ನೀರು ಪೂರೈಸುತ್ತಿಲ್ಲ ಎಂದು ಆರೋಪಿಸಿ ಸಮೀಪದ ವಂದಾಲ ಗ್ರಾಮದ ಮಾದಿಗ ಕಾಲೋನಿಯ ನಿವಾಸಿಗಳು ಶನಿವಾರ ಗ್ರಾಮ ಪಂಚಾಯಿತಿ ಕಾಂಪೌಂಡ್ ಗೇಟ್‌ಗೆ ಬೀಗ ಜಡಿದು ಪ್ರತಿಭಟಿಸಿದರು.ಮಾದಿಗ ಸಮುದಾಯದ ಮುಖಂಡ ತಿಪ್ಪಣ್ಣ ಮಾದರ ಮಾತನಾಡಿ, ಕಳೆದ 6-7 ತಿಂಗಳಿಂದ ಮಾದಿಗರು ವಾಸಿಸುವ ಕಾಲೋನಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ನಾಲ್ಕೈದು ದಿನಕ್ಕೊಮ್ಮೆ ಕೇವಲ ಹತ್ತು ನಿಮಿಷ ಮಾತ್ರ ನೀರು ಬಿಡಲಾಗುತ್ತಿದೆ. ಆದರೆ, ವಂದಾಲ ಗ್ರಾಮದ ಇತರೆಡೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಕೇವಲ ಮಾದಿಗರು ಹೆಚ್ಚಾಗಿ ವಾಸಿಸುವ ಕಡೆಯಲ್ಲಿಯೇ ಈ ಸಮಸ್ಯೆ ಇದೆ ಎಂದು ಆರೋಪಿಸಿದರು.ಈ ಕುರಿತು ವಂದಾಲ ಪಿಡಿಒ ಅವರಿಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ. ಸಾರ್ವಜನಿಕ ದೋಬಿ ಘಾಟ್‌ಗೂ ನೀರು ಪೂರೈಕೆ ನಿಲ್ಲಿಸಿದ್ದು, ಬಟ್ಟೆ ಒಗೆಯಲು ತೊಂದರೆಯಾಗುತ್ತಿದೆ. ದೋಬಿ ಘಾಟ್ ಪಾಚಿ ಕಟ್ಟಿದ್ದು, ಸ್ವಚ್ಛತೆಯೂ ಆಗಿಲ್ಲ ಎಂದು ದೂರಿದರು.
ಶನಿವಾರ ಸಂಜೆ ಗ್ರಾಮ ಪಂಚಾಯಿತಿಗೆ ಆಗಮಿಸಿದ ಕಾಲೋನಿ ನಿವಾಸಿಗಳು ಪ್ರತಿಭಟನೆ ನಡೆಸಿದರು. ಎರಡನೇ ಶನಿವಾರವಾದ್ದರಿಂದ ಪಂಚಾಯಿತಿ ಸಿಬ್ಬಂದಿ ಕಚೇರಿಯಲ್ಲಿ ಇರಲಿಲ್ಲ. ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಮೊದಲೇ ಬೀಗ ಹಾಕಿದ್ದರಿಂದ ಕಾಂಪೌಂಡ್ ಗೇಟ್‌ಗೆ ಬೀಗ ಜಡಿಯಲಾಯಿತು ಎಂದು ತಿಪ್ಪಣ್ಣ ಮಾದರ ತಿಳಿಸಿದರು.ಪ್ರತಿಭಟನೆಯಲ್ಲಿ ಸಿದ್ದು ತಳಗೇರಿ, ದಂಡೆಪ್ಪ ಮೇಲಿನಮನಿ, ಮಹಾದೇವಪ್ಪ ತಳಗೇರಿ, ಸೋಮಪ್ಪ ಪೂಜಾರಿ, ಬಸವರಾಜ ಮಾದರ ಸೇರಿದಂತೆ ಇತರರು ಇದ್ದರು.
ಇಒ ಸ್ಪಷ್ಟನೆ: ಈ ಕುರಿತು ಪ್ರತಿಕ್ರಿಯಿಸಿದ ನಿಡಗುಂದಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ವಂದಾಲ, ವಂದಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಜಲಧಾರೆ ಕಾಮಗಾರಿ ಕಾರಣದಿಂದ ಕೆಲವು ಓಣಿಗಳಲ್ಲಿ ಮಾತ್ರ ಸಮಸ್ಯೆಯಾಗಿದೆ. ಸಂಬಂಧಪಟ್ಟವರ ಜೊತೆ ಮಾತನಾಡಿ ಇಂದೇ ಸಮಸ್ಯೆ ಬಗೆಹರಿಸಲು ಸೂಚಿಸಿದ್ದೇನೆ. ಶೀಘ್ರದಲ್ಲೇ ನೀರು ಪೂರೈಕೆಯಾಗಲಿದೆ ಎಂದರು.