ಸಾರಾಂಶ
ಎ.ಜಿ. ಕಾರಟಗಿ ಕಾರಟಗಿ
ಹಳ್ಳ-ಕೊಳ್ಳ, ಬಾವಿ, ಕೆರೆಗಳು ಸದಾ ತುಂಬಿ ಹರಿಯುತ್ತಿದ್ದ ನೀರಾವರಿ ಪ್ರದೇಶದಲ್ಲಿಗ ಬೇಸಿಗೆ ಪ್ರಾರಂಭಕ್ಕೆ ನೀರಿನ ಚಿಂತೆಯಾಗಿದೆ.ಕಾರಟಗಿ ಪಟ್ಟಣ ಸೇರಿ ತಾಲೂಕಿನಾದ್ಯಂತ ಬೇಸಿಗೆಯ ಪ್ರಖರತೆ ಹೆಚ್ಚಾಗಿದ್ದು, ಜೊತೆಗೆ ನೀರಿಗಾಗಿ ಹಾಹಾಕಾರ, ಆತಂಕ ಸಣ್ಣದಾಗಿ ಶುರುವಾಗಿದೆ.
ಕಾರಟಗಿ ಪಟ್ಟಣಕ್ಕೆ ಕೊಳವೆ ಬಾವಿ, ಕೆರೆ ಹಾಗೂ ತಾಲೂಕಿನ ಹಳ್ಳಿಗಳಿಗೆ ತುಂಗಭದ್ರಾ ನದಿ ನೀರು ಹಾಗೂ ಕೊಳವೆಬಾವಿ, ಕಾಲುವೆಗಳೇ ಕುಡಿಯುವ ನೀರಿನ ಮೂಲಗಳು.ಈ ಬಾರಿ ಸಮರ್ಪಕ ಮಳೆಯಾಗದೆ ತುಂಗಭದ್ರಾ ನದಿ ಸಂಪೂರ್ಣ ಬತ್ತಿ ಹೋಗಿದೆ. ಜತೆಗೆ ಅಣೆಕಟ್ಟೆಯಲ್ಲಿ ನೀರಿಲ್ಲದೆ ಕಾಲುವೆಗಳಿಗೆ ನೀರು ಪೂರೈಕೆ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಇನ್ನು ಅಂತರ್ಜಲ ಮಟ್ಟ ಕುಸಿತದಿಂದ ಕೊಳವೆ ಬಾವಿಗಳ ನೀರಿನ ಪ್ರಮಾಣ ಕ್ಷೀಣಿಸಿದೆ. ಮಾರ್ಚ್ ಮೊದಲ ವಾರದಲ್ಲಿಯೇ ಇಂಥ ಪರಿಸ್ಥಿತಿ ಎದುರಾದರೆ ಮುಂದೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಇನ್ನಷ್ಟು ಗಂಭೀರ ಪರಿಸ್ಥಿತಿ ಉಂಟಾಗಲಿದೆ ಎನ್ನುವ ಆತಂಕ ಎದುರಾಗಿದೆ.
ಹಳ್ಳಿ ಭಾಗದಲ್ಲಿ ನೀರು ಸಮರ್ಪಕ ಸರಬರಾಜು ಆಗುತ್ತಿಲ್ಲ. ಕೆಲವೆಡೆ ನೀರಿಗಾಗಿ ಪರದಾಡುವಂತಾಗಿದೆ. ಈ ಮುಂಚೆ ಬೆಳಗಿನ ಜಾವ ನೀರು ಸರಬರಾಜು ಮಾಡಲಾಗುತ್ತಿತ್ತು, ಈಗ ನೀರು ಯಾವಾಗ ಬರುತ್ತದೆ ಎಂದು ಕಾಯಬೇಕಾಗಿದೆ. ತುಂಗಭದ್ರಾ ನದಿ ತೀರದ ಹಳ್ಳಿಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಸಿದ್ದಾಪುರ ಸೇರಿದಂತೆ ಕೆಲ ಭಾಗದಲ್ಲಿ ಕೆಲವೆಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆಯಾದರೂ ಎಲ್ಲರಿಗೂ ನೀರು ಸಿಗುತ್ತಿಲ್ಲ.ಅನುದಾನ ಕೊರತೆ ನಿರ್ವಹಣೆ ವೈಫಲ್ಯ: ಕಾರಟಗಿ ಮತ್ತು ನವಲಿ ಸೇರಿ ಒಟ್ಟು೬೨ ಹಳ್ಳಿಗಳಿಗೆ ಶುದ್ಧ ಕುಡಿವ ನೀರು ಪೂರೈಕೆಗೆ ಕಾರಟಗಿ ಬಳಿ ಬೃಹತ್ ಕೆರೆ ಇದೆ. ರಾಜೀವ ಗಾಂಧಿ ಶುದ್ಧ ಕುಡಿವ ನೀರಿನ ಬೃಹತ್ ಯೋಜನೆ ಇದೆ. ಕೆರೆಗೆ ತುಂಗಭದ್ರಾ ಎಡದಂಡೆ ನಾಲೆಯಿಂದ ನೀರು ಪೂರೈಕೆಯಾಗುತ್ತದೆ. ಆದರೆ ಸರ್ಕಾರದಿಂದ ನಿರ್ವಹಣೆಗೆ ಅನುದಾನ ನೀಡದ್ದರಿಂದ ನಿರ್ವಹಣೆ ವೈಫಲ್ಯ ಹೆಚ್ಚಾಗಿ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ ಎನ್ನುವ ಸಾಮಾನ್ಯ ಆರೋಪ-ದೂರು ಹಲವು ಪಂಚಾಯತಿಗಳಿಂದ ಅಧಿಕಾರಿಗಳ ಗಮನಕ್ಕೆ ಹೋಗಿದೆ. ಈಗ ಕೆರೆಯಲ್ಲಿ ೫ ಅಡಿ ನೀರಿದ್ದು, ಮಾರ್ಚ್‌ವರೆಗೆ ಕಾರಟಗಿ ಮತ್ತು ೬೦ ಹಳ್ಳಿಗಳಿಗೆ ಕೊರತೆ ಕಾಣದು. ಆದರೆ ನಿರ್ವಹಣೆ ವೈಫಲ್ಯ ಎದ್ದು ಕಾಣುತ್ತಿದೆ.
ಟ್ಯಾಂಕರ್ ವ್ಯವಸ್ಥೆ: ಗ್ರಾಪಂವಾರು ೫೪ ಹೊಸ ಕೊಳವೆಬಾವಿಗಳ ಅವಶ್ಯಕತೆ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಕಳಿಸಿದ್ದಾರೆ. ತಾಲೂಕಿನಲ್ಲಿ ಒಟ್ಟು ೧೭೯ ಸರ್ಕಾರಿ ಕೊಳವೆ ಬಾವಿಗಳಿದ್ದು, ನೀರು ಸಾಕಾಗುತ್ತಿಲ್ಲ. ಹೀಗಾಗಿ ಖಾಸಗಿ ವ್ಯಕ್ತಿಗಳ ಕೊಳವೆ ಬಾವಿಯಿಂದ ನೀರು ಪಡೆದುಕೊಳ್ಳಲು ಅಧಿಕಾರಿಗಳು ಮುಂದಾಗಿದ್ದು, ಒಟ್ಟು ೩೧೨ ಖಾಸಗಿ ಕೊಳವೆ ಬಾವಿ ಗುರುತಿಸಿದ್ದು, ಅದರಲ್ಲಿ ೭೧ ಜನರಿಂದ ಒಪ್ಪಿಗೆ ಪತ್ರ ಪಡೆದಿದ್ದಾರೆ. ಅವಶ್ಯಕತೆ ಬಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಮುಂದಾಗಿದ್ದಾರೆ.ಕಾರಟಗಿ ಪಟ್ಟಣದಲ್ಲಿ ಒಟ್ಟು ೨೩ ವಾರ್ಡ್ ಪೈಕಿ ೮ ವಾರ್ಡ್‌ಗಳಿಗೆ ಕೆರೆಯಿಂದ ಉಳಿದ ೧೫ ವಾರ್ಡ್‌ಗಳಿಗೆ ಕೊಳವೆ ಬಾವಿಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಪುರಸಭೆ ಒಟ್ಟು ೧೩೫ ಕೊಳವೆ ಬಾವಿ ಹೊಂದಿದ್ದು, ಅದರಲ್ಲಿ ೧೨೦ ಕೊಳವೆ ಬಾವಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ ಅವಶ್ಯಕತೆ ಇದ್ದಲ್ಲಿ ಹೊಸ ಕೊಳವೆ ಬಾವಿ ಕೊರೆಸಲು ಕ್ರಮ ವಹಿಸುತ್ತೇವೆ. ಜತೆಗೆ ಕೆಲ ಬೋರವೆಲ್‌ಗಳನ್ನು ಫ್ಲೆಷಿಂಗ್ ಮಾಡಿಸಲಾಗುವುದು. ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಜತೆಗೆ ಅವಶ್ಯಕತೆ ಬಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು. ಜನಸಾಮಾನ್ಯರಿಗೆ ಬೇಸಿಗೆಯಲ್ಲಿ ತೊಂದರೆಯಾಗದಂತೆ ಪುರಸಭೆ ಕ್ರಮ ವಹಿಸುತ್ತದೆ. ಈಗಾಗಲೆ ಸಹಾಯವಾಣಿ ತೆರೆಯಲಾಗಿದ್ದು ಯಾವುದೇ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಉಂಟಾದರೆ ೦೮೫೩೩-೨೭೪೨೩೨ಗೆ ಕರೆ ಮಾಡಿ ಗಮನಕ್ಕೆ ತರಬಹುದು ಎಂದು ಪುರಸಭೆ ಮುಖ್ಯಾಧಿಕಾರಿ ಸುರೇಶ್ ಶೆಟ್ಟಿ ತಿಳಿಸಿದ್ದಾರೆ. ಆದರೂ, ಕಾರಟಗಿ ಮುಂದಿನ ಎರಡು ತಿಂಗಳು ಗಂಭೀರ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ ಎನ್ನುವ ಆತಂಕ ವ್ಯಕ್ತಪಡಿಸುತ್ತಾರೆ ಕೆಲ ಸದಸ್ಯರು.