ಸಾರಾಂಶ
ಯಾದಗಿರಿ ನಗರದ ತಮ್ಮ ಜನಸಂಪರ್ಕ ಕಚೇರಿ ಆವರಣದಲ್ಲಿ ಕಲಬುರಗಿಯಿಂದ ಅಯೋಧ್ಯೆಗೆ 60ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಬೀಳ್ಕೊಡಲಾಯಿತು.
ಕನ್ನಡಪ್ರಭ ವಾರ್ತೆ ಯಾದಗಿರಿ
ಸ್ಪರ್ಧಾತ್ಮಕ ಯುಗದಲ್ಲಿ ನಾವೆಲ್ಲರೂ ಬದುಕಿನಲ್ಲಿ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಸದಾ ಒತ್ತಡದ ಜೀವನ ಕಳೆಯುತ್ತಿದ್ದೇವೆ. ಸ್ವಲ್ಪ ದಿನಗಳನ್ನು ನಾವು ದೇಶದ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಕೈಗೊಂಡರೆ ಮನಸ್ಸಿಗೆ ನೆಮ್ಮದಿ ಸಿಗುವ ಜೊತೆಗೆ ಬದುಕು ಪಾವನವಾಗುತ್ತದೆ ಎಂದು ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದರು.ನಗರದ ತಮ್ಮ ಜನಸಂಪರ್ಕ ಕಚೇರಿ ಆವರಣದಲ್ಲಿ ಇಂದು ಕಲಬುರಗಿಯಿಂದ ದೇಶದ ಪವಿತ್ರ ಕ್ಷೇತ್ರವಾಗಿರುವ ಅಯೋದ್ಯೆಗೆ ಯಾದಗಿರಿ ಮತಕ್ಷೇತ್ರದಿಂದ 60ಕ್ಕೂ ಹೆಚ್ಚು ಕಾರ್ಯಕರ್ತರು ರೈಲಿನ ಮೂಲಕ ತೆರಳಲಿದ್ದು, ಇಲ್ಲಿಂದ ಕಲಬುರಗಿಗೆ ಕಾರ್ಯಕರ್ತರನ್ನು ಬಸ್ ಮೂಲಕ ಬೀಳ್ಕೊಡುವ ಮೂಲಕ ಮಾತನಾಡಿದರು.
ಪ್ರಯಾಣ ಸಮಯದಲ್ಲಿ ಕಾರ್ಯಕರ್ತರು ಶಾಂತಿ, ಶಿಸ್ತು, ಸಮಯಪ್ರಜ್ಷೆಯೊಂದಿಗೆ ಎಲ್ಲರ ಜೊತೆ ಸಾಮರಸ್ಯದಿಂದ ಬೆರೆತು ವಿಶ್ವದ ಗಮನ ಸೆಳೆದಿರುವ ಶ್ರೀರಾಮನ ದರ್ಶನ ಪಡೆದು ಬನ್ನಿ ಎಂದು ಶುಭ ಹಾರೈಸಿದರು.ಶರಣಗೌಡ ಬಾಡಿಯಾಳ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರಕುಂದಿ, ಮುಖಂಡರಾದ ಬಸವರಾಜ ಸೊನ್ನದ್, ಚಂದಪ್ಪ ಕಾವಲಿ ರಾಮಸಮುದ್ರ, ನಗರ ಬಿಜೆಪಿ ಅಧ್ಯಕ್ಷ ಮಂಜುನಾಥ ಜಡಿ, ರಾಜಶೇಖರ ಕಾಡಂನೋರ, ಶಂಕರ ಸೊನಾರ ಸೇರಿದಂತೆ ಇತರರಿದ್ದರು.