ಹನಿ ನೀರಾವರಿ ಸಹಾಯಧನ ಇಳಿಸಿ ರೈತರಿಗೆ ಸಂಕಷ್ಟ

| Published : Jul 06 2024, 12:54 AM IST

ಸಾರಾಂಶ

ಹನಿ ನೀರಾವರಿಗೆ ನೀಡುತ್ತಿದ್ದ ಸಹಾಯಧನದ ಮೊತ್ತವನ್ನು ದಿಢೀರನೇ ಶೇ.75ರಿಂದ ಶೇ.45ಕ್ಕೆ ಇಳಿಸುವ ಮೂಲಕ ರಾಜ್ಯ ಸರ್ಕಾರವು ರೈತರಿಗೆ ಆರ್ಥಿಕ ಸಂಕಷ್ಟ ತಂದಿಟ್ಟಿದೆ. ಇದರಿಂದ 2024- 2025ನೇ ಆರ್ಥಿಕ ವರ್ಷಕ್ಕೆ ರೈತರಿಗೆ ತೀವ್ರ ಹೊಡೆತ ಬೀಳಲಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ ಆತಂಕ ದಾವಣಗೆರೆಯಲ್ಲಿ ವ್ಯಕ್ತಪಡಿಸಿದ್ದಾರೆ.

- ಶೇ.75ರಿಂದ ಶೇ.45ಕ್ಕೆ ಸಹಾಯಧನ ಸೌಲಭ್ಯ ಇಳಿಸಿದರೆ ಕೃಷಿ ನಿರ್ವಹಣೆ ಹೇಗೆ: ಸರ್ಕಾರಕ್ಕೆ ಬಿ.ಎಂ.ಸತೀಶ ಪ್ರಶ್ನೆ

- - - - ಸಿದ್ದರಾಮಯ್ಯ ಸರ್ಕಾರವು ಆರ್ಥಿಕ ಶಿಸ್ತು ಇಲ್ಲದೇ ದಿವಾಳಿಯಾಗಿದೆ - ಹಾಲು ಖರೀದಿ ದರ ಇಳಿಸಿ, ಹಾಲು ಉತ್ಪಾದನೆ ಕುಂಠಿತಕ್ಕೆ ಯತ್ನ - ಕೋಚಿಮುಲ್‌ ಹಾಲು ಒಕ್ಕೂಟದಲ್ಲಿ ಹಾಲಿನ ದರ ₹2 ಕಡಿಮೆ ಸಲ್ಲದು

- ಹಾಲು ಖರೀದಿ ದರ ಕಡಿತ ರಾಜ್ಯ ಸರ್ಕಾರದ ದುರಾಡಳಿತ ಪರಮಾವಧಿ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಹನಿ ನೀರಾವರಿಗೆ ನೀಡುತ್ತಿದ್ದ ಸಹಾಯಧನದ ಮೊತ್ತವನ್ನು ದಿಢೀರನೇ ಶೇ.75ರಿಂದ ಶೇ.45ಕ್ಕೆ ಇಳಿಸುವ ಮೂಲಕ ರಾಜ್ಯ ಸರ್ಕಾರವು ರೈತರಿಗೆ ಆರ್ಥಿಕ ಸಂಕಷ್ಟ ತಂದಿಟ್ಟಿದೆ. ಇದರಿಂದ 2024- 2025ನೇ ಆರ್ಥಿಕ ವರ್ಷಕ್ಕೆ ರೈತರಿಗೆ ತೀವ್ರ ಹೊಡೆತ ಬೀಳಲಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ ಆತಂಕ ವ್ಯಕ್ತಪಡಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಪ್ರತಿ ಹನಿಗೆ ಪರ್ ಡ್ರಾಪ್‌ ಮೋರ್‌ ಕ್ರಾಪ್ ಘೋಷ ವಾಕ್ಯದಡಿ ಕೃಷಿಯಲ್ಲಿ ನೀರಿನ ಬಳಕೆ ದಕ್ಷತೆ ಹೆಚ್ಚಿಸಲು ಹನಿ-ತುಂತುರು ನೀರಾವರಿಯಂತಹ ಸೂಕ್ಷ್ಮ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂಬುದು ಪ್ರಧಾನಿ ಆಶಯವಾಗಿದೆ ಎಂದರು.

ಶೇ.48ರ ಬದಲಿಗೆ ಶೇ.18:

ನೀರಿನ ಬಳಕೆ ಸಾಮರ್ಥ್ಯ ಮತ್ತು ಸೂಕ್ತ ನಿರ್ವಹಣೆಯಿಂದ ಉತ್ಪಾದನೆ ಹೆಚ್ಚಿಸಿ, ರೈತರ ಆದಾಯ ದ್ವಿಗುಣಗೊಳಿಸುವುದು ಯೋಜನೆ ಮುಖ್ಯ ಉದ್ದೇಶ. 2023-2024ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 5466 ರೈತರು ಯೋಜನೆ ಫಲಾನುಭವಿಯಾಗಿದ್ದು, ಇದಕ್ಕಾಗಿ ₹21.14 ಕೋಟಿ ಬಿಡುಗಡೆಯಾಗಿದೆ. ಆಗ ರೈತರಿಗೆ ಶೇ.75 ಸಬ್ಸಿಡಿ ಸಿಗುತ್ತಿತ್ತು. ಇದರಲ್ಲಿ ಕೇಂದ್ರದ ಶೇ.27, ರಾಜ್ಯದ ಶೇ.48 ಪಾಲು ಇತ್ತು. ಕೇಂದ್ರವು ಈ ಸಲವೂ ಶೇ.27 ಸಬ್ಸಿಡಿ, ಮುಂದುವರಿಸಿದೆ. ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಶೇ.48ರ ಬದಲಿಗೆ ಶೇ.18ಕ್ಕೆ ಸಹಾಯಧನ ಇಳಿಸಿ, ಆದೇಶ ಹೊರಡಿಸಿದೆ ಎಂದು ದೂರಿದರು.

ಸರ್ಕಾರದಲ್ಲಿ ಆರ್ಥಿಕ ಶಿಸ್ತು ಇಲ್ಲ:

ರೈತರಿಗೆ ಸಿಗುತ್ತಿದ್ದ ಸಬ್ಸಿಡಿ ಹಣದಲ್ಲಿ ಶೇ.75ರಿಂದ ಶೇ.45ಕ್ಕೆ ಇಳಿಕೆಯಾಗಿದೆ. ಇದರಿಂದ ರೈತರಿಗೆ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಹೊರೆ ಬೀಳಲಿದೆ. ಗ್ಯಾರಂಟಿ ಯೋಜನೆಗಳ ಪರಿಣಾಮ ಅವುಗಳಿಗೆ ಹಣ ಹೊಂದಿಸಲು ರಾಜ್ಯದ ಅಭಿವೃದ್ಧಿಯನ್ನೇ ಶೂನ್ಯ ಮಾಡಿ, ರೈತರಿಗೆ ಸಿಗಬೇಕಾದ ಸಹಾಯಧನ ಕಡಿಮೆ ಮಾಡುವಂತಹ ದುಸ್ಸಾಹಸಕ್ಕೆ ಕಾಂಗ್ರೆಸ್ ಸರ್ಕಾರ ಕೈ ಹಾಕಿದೆ. ರಾಜ್ಯ ಸರ್ಕಾರದಲ್ಲಿ ಆರ್ಥಿಕ ಶಿಸ್ತು ಇಲ್ಲವಾಗಿದ್ದು, ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಆರೋಪಿಸಿದರು.

ಹಾಲಿನ ಮಾರಾಟ ದರ ಹೆಚ್ಚಿಸಿ, ಗ್ರಾಹಕರಿಗೆ ಶಾಕ್ ನೀಡಿದ ಬೆನ್ನಲ್ಲೇ ಕೋಚಿಮುಲ್‌ (ಕೋಲಾರ-ಚಿಕ್ಕಬುಳ್ಳಾಪುರ) ಹಾಲು ಒಕ್ಕೂಟ ರೈತರಿಂದ ಖರೀದಿಸುವ ದರವನ್ನು ₹2 ಕಡಿಮೆ ಮಾಡಿ, ಆದೇಶ ಹೊರಡಿಸಿದೆ. ಹಾಲು ಉತ್ಪಾದನೆ ಹೆಚ್ಚಾಗಿದೆಯೆಂಬ ಕಾರಣವೊಡ್ಡಿ, ಇಂದು ಬೆಳಗ್ಗೆಯಿಂದಲೇ ಜಾರಿಗೆ ಬರುವಂತೆ ರೈತರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ ₹33.40 ದರದಿಂದ ₹31.40 ದರಕ್ಕೆ ಇಳಿಸಿ, ಆದೇಶಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರು ಹೆಚ್ಚು ಹಾಲು ಉತ್ಪಾದಿಸುತ್ತಿದ್ದು, ಹಾಲಿನ ಉತ್ಪಾದನಾ ಸಾಮರ್ಥ್ಯವನ್ನು ಕುಗ್ಗಿಸುವ ಕುತಂತ್ರದಿಂದ ಹಾಲು ಖರೀದಿ ದರ ಕಡಿತ ಮಾಡಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ ಪರಮಾವಧಿಯಾಗಿದೆ. ಇದು ರೈತರ ಸಾಮರ್ಥ್ಯದ ಕಗ್ಗೊಲೆಯಾಗಿದೆ. ಇಂತಹ ರೈತವಿರೋಧಿ, ಜನವಿರೋಧಿ ಸರ್ಕಾರ ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲೇ ಇರಲಿಲ್ಲ. ಹಾಲಿನ ದರ ಹೆಚ್ಚಿಸಿಲ್ಲ. ಪ್ರತಿ ಪಾಕೆಟ್‌ನಲ್ಲಿ 50 ಎಂಎಲ್ ಹೆಚ್ಚು ನೀಡಿ, ₹2.10 ಬದಲು ₹2 ದರ ಹೆಚ್ಚಿಸಿರುವುದಾಗಿ ಆರ್ಥಿಕ ತಜ್ಞರೆಂದು, 15 ಬಜೆಟ್‌ ಮಂಡಿಸಿದ ಅನುಭವಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಲಿನ ಉತ್ಪಾದನೆ ಹೆಚ್ಚಳದ ಕಾರಣ ನೀಡಿ, ರೈತರಿಂದ ಖರೀದಿಸುವ ದರ ಕಡಿಮೆ ಮಾಡಿದ್ದು ಏಕೆ ಎಂಬ ಬಗ್ಗೆ ರಾಜ್ಯದ ಜನತೆಗೆ ಉತ್ತರಿಸಲಿ ಎಂದು ಬಿ.ಎಂ.ಸತೀಶ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸದಾನಂದ, ಬಲ್ಲೂರು ಬಸವರಾಜ, ಕಬ್ಬೂರು ಶಿವಕುಮಾರ, ಆರನೇಕಲ್ಲು ವಿಜಯಕುಮಾರ, ಅಣಜಿ ಗುಡ್ಡೇಶ, ಬಾತಿ ಬಿ.ಕೆ.ಶಿವಕುಮಾರ, ಅಣಬೇರು ಶಿವಪ್ರಕಾಶ ಇತರರು ಇದ್ದರು.

- - - -5ಕೆಡಿವಿಜಿ1:

ದಾವಣಗೆರೆಯಲ್ಲಿ ಶುಕ್ರವಾರ ಬಿಜೆಪಿ ಜಿಲ್ಲಾ ವಕ್ತಾರ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.ಸತೀಶ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.