ಸಾಮೆತ್ತಡ್ಕ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿಗೆ ಚಾಲನೆ

| Published : Jul 04 2024, 01:02 AM IST

ಸಾಮೆತ್ತಡ್ಕ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿಗೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಆಂಗ್ಲ ಮಾಧ್ಯಮ ತರಗತಿಗೆ ಪುತ್ತೂರಿನಿಂದ ಎರಡು ಮತ್ತು ಬಂಟ್ವಾಳ ವ್ಯಾಪ್ತಿಯಿಂದ ಎರಡು ಅರ್ಜಿಗಳು ಮಾತ್ರ ಸಲ್ಲಿಸಲಾಗಿದೆ. ಆಂಗ್ಲ ಮಾಧ್ಯಮಕ್ಕೆ ಬೇಡಿಕೆಗಳು ಇದ್ದಲ್ಲಿ ಇನ್ನೂ ಹೆಚ್ಚಿನ ಶಾಲೆಗಳಿಗೆ ಅನುಮತಿ ಪಡೆದುಕೊಳ್ಳಲು ಅವಕಾಶಗಳಿವೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಕನ್ನಡದ ಜೊತೆ ಆಂಗ್ಲ ಭಾಷೆಯ ಜ್ಞಾನವೂ ಇಂದಿನ ಕಾಲದ ಅಗತ್ಯ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿಯನ್ನು ಆರಂಭಿಸುತ್ತಿದೆ, ಹಳ್ಳಿಯ ಕಟ್ಟ ಕಡೆಯ ವ್ಯಕ್ತಿಯ ಮಕ್ಕಳೂ ಇಂಗ್ಲಿಷ್ ಕಲಿತರೆ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯವಾಗಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.

ಅವರು ನಗರದ ಸಾಮೆತ್ತಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಚಾಲನೆ ನೀಡಿ ಮಾತನಾಡಿದರು. ಕರ್ನಾಟಕದಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲು ಸರ್ಕಾರ ಅನುಮತಿ ನೀಡುತ್ತಿದ್ದು, ಕೆಪಿಎಸ್ ಶಾಲೆಗಳಲ್ಲಿ ಮಾತ್ರ ಇದ್ದ ಈ ವ್ಯವಸ್ಥೆ ಇದೀಗ ಎಲ್ಲ ಸರ್ಕಾರಿ ಶಾಲೆಗಳಿಗೂ ವಿಸ್ತರಣೆಯಾಗುತ್ತಿದೆ. ಆಂಗ್ಲ ಮಾಧ್ಯಮ ತರಗತಿಗೆ ಪುತ್ತೂರಿನಿಂದ ಎರಡು ಮತ್ತು ಬಂಟ್ವಾಳ ವ್ಯಾಪ್ತಿಯಿಂದ ಎರಡು ಅರ್ಜಿಗಳು ಮಾತ್ರ ಸಲ್ಲಿಸಲಾಗಿದೆ. ಆಂಗ್ಲ ಮಾಧ್ಯಮಕ್ಕೆ ಬೇಡಿಕೆಗಳು ಇದ್ದಲ್ಲಿ ಇನ್ನೂ ಹೆಚ್ಚಿನ ಶಾಲೆಗಳಿಗೆ ಅನುಮತಿ ಪಡೆದುಕೊಳ್ಳಲು ಅವಕಾಶಗಳಿವೆ ಎಂದು ಹೇಳಿದರು.

ಸಾಮೆತ್ತಡ್ಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿಗೆ ಅನುಮತಿ ಬೇಕೆಂದು ಶಾಲಾ ಅಭಿವೃದ್ದಿ ಸಮಿತಿಯವರು ಅನೇಕ ವರ್ಷಗಳಿಂದ ತಮ್ಮ ಬೇಡಿಕೆಯನ್ನು ಇರಿಸಿದ್ದರು. ಹಲವು ಬಾರಿ ಕಳೆದ ಆರು ವರ್ಷಗಳಿಂದ ಬೆಂಗಳೂರಿನಲ್ಲಿ ಅಲೆದಾಟ ನಡೆಸಿದ್ದರು. ಜನಪ್ರತಿನಿಧಿಗಳ ಬಳಿಗೂ ತೆರಳಿ ಮನವಿ ಮಾಡಿದ್ದರು ಆದರೆ ಬೇಡಿಕೆ ಈಡೇರಿರಲಿಲ್ಲ. ಶಾಸಕನಾದ ಒಂದೇ ವರ್ಷದಲ್ಲಿ ಇಲ್ಲಿನ ಶಿಕ್ಷಣ ಪ್ರಿಯರ ಬೇಡಿಕೆಯನ್ನು ಈಡೇರಿಸಿದ್ದೇನೆ ಎಂದರು.ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿಲ್ಲ ಅದಕ್ಕಾಗಿ ಪೋಷಕರು ಖಾಸಗಿ ಶಾಲೆಗಳನ್ನು ಅವಲಂಬಿತರಾಗಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಇದೀಗ ಸರ್ಕಾರಿ ಶಾಲೆಗಳಲ್ಲಿ ಯಾವುದೇ ಕೊರತೆಗಳಿಲ್ಲ. ಶಿಕ್ಷಕರ ಕೊರತೆಯನ್ನೂ ನೀಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೊಠಡಿಗಳ ಕೊರತೆಗಳನ್ನೂ ಪರಿಹರಿಸಲಾಗುವುದು. ಸಾಮೆತ್ತಡ್ಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿ ಪ್ರಾರಂಭವಾಗಿರುವುದು ಈ ಭಾಗದ ಮಕ್ಕಳಿಗೆ ವರದಾನವಾಗಿ ಪರಿಣಮಿಸಲಿದೆ. ಉತ್ತಮ ಶಿಕ್ಷಕರ ನೇಮಕಾತಿಯೂ ನಡೆದಿದೆ ಎಂದು ಹೇಳಿದರು. ಸಾಮೆತ್ತಡ್ಕ ಶಾಲೆಯ ಸ್ಥಾಪಕಾಧ್ಯಕ್ಷರು ಹಾಗೂ ಸಾಮೆತ್ತಡ್ಕ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್ ಮಾತನಾಡಿ, ಹಲವು ವರ್ಷಗಳಿಂದ ನಾವು ಇಂತಹದ್ದೊಂದು ಕ್ಷಣಕ್ಕೆ ಕಾಯುತ್ತಿದ್ದೆವು ಈಗ ಕಾಲ ಕೂಡಿಬಂದಿದೆ. ಶಾಸಕರ ಮುತುವರ್ಜಿಯಿಂದ ನಮ್ಮ ಶಾಲೆಗೆ ಆಂಗ್ಲ ಮಾಧ್ಯಮಕ್ಕೆ ಅನುಮತಿ ದೊರಕಿದೆ ಶಾಸಕರಿಗೆ ಮನವಿ ನೀಡಿದ ಬಳಿಕ ನಾವು ಎಲ್ಲಿಗೂ ಹೋಗಲಿಲ್ಲ, ಕಚೇರಿಗೆ ಅಲೆದಾಟವೂ ಮಾಡಲಿಲ್ಲ ಎಲ್ಲವನ್ನೂ ಅವರೇ ಮಾಡಿಕೊಟ್ಟಿದ್ದು ಶಿಕ್ಷಣದ ಮೇಲಿನ ಕಾಳಜಿಗೆ ನಾನು ಅಬಾರಿಯಾಗಿದ್ದೇನೆ ಎಂದು ಹೇಳಿದ ಅವರು ಎಲ್ಲ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವಂತಾದರೆ ಬಡವರ ಮಕ್ಕಳೂ ಉನ್ನತಿಗೇರುತ್ತಾರೆ ಎಂದು ಹೇಳಿದರು.ನಗರಸಭಾ ಸದಸ್ಯ ಮನೋಹರ್, ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ,, ಸಾಮೆತ್ತಡ್ಕ ಟ್ರಸ್ಟ್ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಶೆಟ್ಟಿ, ಟ್ರಸ್ಟಿಗಳಾದ ವೆಂಕಟರಮಣ ಭಟ್, ನಳಿನಿ ಪಿ ಶೆಟ್ಟಿ, ವೆಂಕಟರಾಜ್, ಎಸ್‌ಡಿಎಂಸಿ ಅಧ್ಯಕ್ಷ ಶಿವ ಪ್ರಸಾದ್, ಸಮೂಹ ಸಂಪನ್ಮೂಲ ವ್ಯಕ್ತಿ ಶಶಿಕಲಾ, ಯುವಕ ಮಂಡಲದ ಅಧ್ಯಕ್ಷ ರೋಷನ್ ರೆಬೆಲ್ಲೋ, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಅಶೋಕ್ ಆಚಾರ್, ಉಪಾಧ್ಯಕ್ಷೆ ಪವಿತ್ರ ಮತ್ತಿತರರು ಇದ್ದರು. ಶಾಲಾ ಮುಖ್ಯ ಶಿಕ್ಷಕಿ ಮರಿಯಾ ಅಶ್ರಫ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.