ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಾಗತಿಕ ತಾಪಮಾನ ಕಡಿಮೆಗೊಳಿಸಿ ಜೀವಸಂಕುಲ ಉಸಿರಾಡಲು ಕೊಟ್ಯಾಂತರ ಗಿಡ ನೆಟ್ಟು ಸಸ್ಯ ಸಂರಕ್ಷಣೆ ಮಾಡುವುದು ಮಾನವನ ಕರ್ತವ್ಯ. ಆ ನಿಟ್ಟಿನಲ್ಲಿ ಪೂರಕವಾಗಿ ಕೆಲಸ ಮಾಡಲು ಇನ್ನೂ ಹಲವಾರು ಇಲಾಖೆಗಳು, ಸಂಘ ಸಂಸ್ಥೆಗಳು ಹುಟ್ಟಿಕೊಳ್ಳಬೇಕಿದೆ. ನೆಟ್ಟ ಗಿಡಗಳನ್ನು ಉಳಿಸಿ ಬೆಳೆಸಿಕೊಳ್ಳುವುದು ಮನುಷ್ಯರಿಗೆ ತಿಳಿದಿರಬೇಕು ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ನಾಗರಾಜ್ ಹೇಳಿದರು.ನಗರದ ಪೂರ್ಣ ಪ್ರಜ್ಞ ಶಾಲೆಯ ಮುಂಭಾಗದ ರಸ್ತೆಗೆ ಬುಧವಾರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ, ಸಾಮಾಜಿಕ ಅರಣ್ಯ ವಿಭಾಗ,ಸಮಾನ ಮನಸ್ಕರ ಪ್ರಕೃತಿ ಸಂರಕ್ಷಣಾ ವೇದಿಕೆ, ಕೆನರಾ ಬ್ಯಾಂಕ್, ಎಫ್ ಎಲ್ ಸಿ, ಪೂರ್ಣ ಪ್ರಜ್ಞ ಶಾಲೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವನಮಹೋತ್ಸವ - 2024 ಕಾರ್ಯಕ್ರಮದ ಅಂಗವಾಗಿ ರಸ್ತೆ ಪಕ್ಕ ಸಾಲು ಮರ- ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ದೇಶದಾದ್ಯಂತ ಕೋಟ್ಯಾಂತರ ಗಿಡಗಳನ್ನು ನೆಡುತ್ತಿದ್ದೇವೆ, ಇದರಿಂದ ಜಾಗತಿಕ ತಾಪಮಾನ ಹಾಗೂ ಪರಿಸರ ಮಾಲಿನ್ಯ ತಡೆಯಲು ಸಹಾಯವಾಗುತ್ತದೆ. ಪ್ರಕೃತಿ ಮಧ್ಯೆ ನಾವೆಲ್ಲ ಖುಷಿಯನ್ನು ಹಂಚಕೊಳ್ಳುತ್ತಿದ್ದೇವೆ ಎಂದರು.
ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟು ಪೋಷಿಸಿದರೆ ವನ ಮಹೋತ್ಸವ ಆಚರಣೆಗೆ ಅರ್ಥ ಕಲ್ಪಿಸಿದಂತಾಗುತ್ತದೆ. ಆ ನಿಟ್ಟಿನಲ್ಲಿ ಸಮಾನ ಮನಸ್ಕರ ಪ್ರಕೃತಿ ಸಂರಕ್ಷಣಾ ವೇದಿಕೆ, ಅರಣ್ಯ ಸಂರಕ್ಷಣಾ ಇಲಾಖೆ, ಸಾಮಾಜಿಕ ಅರಣ್ಯ ವಿಭಾಗ ಹಾಗೂ ಪೂರ್ಣ ಪ್ರಜ್ಞಾ ಶಾಲೆಗಳು ನಡೆಸಿದ ಈ ಪ್ರಯತ್ನಕ್ಕೂ ಬೆಲೆ ಕೊಟ್ಟಂತಾಗುತ್ತದೆ ತಿಳಿಸಿದರು.ಸಂಚಾರಿ ಪೊಲೀಸ್ ಠಾಣಾ ಪಿಎಸ್ಐ ಮಂಜುಳ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಹುಟ್ಟುಹಬ್ಬ, ಸಂತೋಷದ ಸಮಾರಂಭಗಳನ್ನು ಗಿಡ ನೆಡುವ ಮೂಲಕ ಮೂಲಕ ಆಚರಿಸಿಕೊಳ್ಳಬೇಕು. ರಸ್ತೆಯ ಅಕ್ಕ- ಪಕ್ಕ ಮರಗಿಡಗಳನ್ನು ಕತ್ತರಿಸುವ ಪರಿಪಾಠ ಬಿಡಬೇಕು, ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸಿ ಉತ್ತಮ ಸಂಚಾರಕ್ಕೆ ಅವಕಾಶ ಮಾಡಿಕೊಡೋಣ ಎಂದರು.
ಉಪ ಅರಣ್ಯ ಸಂರಕ್ಷಣಾ ಕಚೇರಿ ಡಿಆರ್ ಎಫ್ ವೇಣುಗೋಪಾಲ್ ವನಮಹೋತ್ಸವ ವಾರಾಚರಣೆ ಮಹತ್ವ ತಿಳಿಸಿದರು.ಸುಮಾರು ಮೂರು ಲಕ್ಷ ಗಿಡಗಳನ್ನು ನೆಟ್ಟು ರಾಜ್ಯ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನಾಗಿರುವ ಗುಂಪುಮರದ ಆನಂದ್ ಅವರಿಗೆ ಗೌರವ ಸನ್ಮಾನ ಮಾಡಲಾಯಿತು.
ನಗರಸಭಾ ಸದಸ್ಯ ಅಂಬರೀಶ್, ಸಮಾಜ ಸೇವಕ ಹೋಟೆಲ್ ರಾಮಣ್ಣ, ಪರಿಸರ ನಾಶದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ನೀಡಿದರು. ಖಾಸಗಿ ಶಾಲೆಗಳ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಹೆನ್ರಿ ಪ್ರಸನ್ನ, ಸರ್ ಎಂ. ವಿ. ಕಾರ್ಮಿಕ ಸೇವಾ ಸಂಘದ ಅಧ್ಯಕ್ಷ ಪ್ರಕಾಶ್, ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಅಭಿಲಾಷ್,ಗುಂಪು ಮರದ ಆನಂದ್, ರಸ್ತೆ ಪಕ್ಕ ಸಾಲು ಗಿಡಗಳ ರಕ್ಷಣಾ ತಂಡದ ನಾಯಕರಿಗೆ ಗಿಡ ನೀಡಿ ಸನ್ಮಾನಿಸಿದರು.ನಗರಸಭೆ ಪರಿಸರ ಅಭಿಯಂತರೆ ಉಮಾ ಶಂಕರ್, ಕೆನರಾ ಬ್ಯಾಂಕ್ ಎಫ್ ಎಲ್ ಸಿ ಸಲಹೆಗಾರ್ತಿ ಕವಿತ, ಪೂರ್ಣ ಪ್ರಜ್ಞ ಶಾಲೆಯ ಅಧ್ಯಕ್ಷ ಎನ್.ವೆಂಕಟೇಶ್, ಸಮಾನ ಮನಸ್ಕರ ಸಂಘದ ಸದಸ್ಯ ಕೆ .ಎಸ್.ನಾರಾಯಣಸ್ವಾಮಿ, ಮತ್ತಿತರರು ಇದ್ದರು.