ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಳೆಗೆ ಮರ ಬಿದ್ದು ಜಿಲ್ಲೆಯ ಕೆಲವು ಕಡೆಗಳಲ್ಲಿ ಬುಧವಾರ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಬಿದ್ದು, ಸುಮಾರು ಒಂದು ಗಂಟೆ ಕಾಲ ರಸ್ತೆಯ ಎರಡೂ ಬದಿ ವಾಹನಗಳು ಸಾಲು ಗಟ್ಟಿ ನಿಂತಿದ್ದವು. ದೇವರಕೊಲ್ಲಿ ಬಳಿ ರಸ್ತೆಗಡ್ಡ ಸಂಜೆ ಭಾರಿ ಗಾತ್ರದ ಮರ ಉರುಳಿ ಬಿದ್ದು ಕೆಲಕಾಲ ಸಂಚಾರಕ್ಕೆ ತೊಡಕಾಗಿತ್ತು. ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಚೆಸ್ಕಾಂ ಸಿಬ್ಬಂದಿ ಮರ ತೆರವುಗೊಳಿಸಿ, ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಮಾಕುಟ್ಟ-ಪೆರುಂಬಾಡಿ ರಸ್ತೆಯಲ್ಲಿ ಮರ ಬಿದ್ದು, ಸಂಚಾರಕ್ಕೆ ತೊಡಕುಂಟಾಯಿತು. ಅರಣ್ಯ ಇಲಾಖೆಯ ಸಿಬ್ಬಂದಿ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಕೊಡಗು ಜಿಲ್ಲೆಯಾದ್ಯಂತ ಬುಧವಾರ ಬಿಡುವು ನೀಡಿ ಆಗಾಗ್ಗೆ ಉತ್ತಮ ಮಳೆಯಾಯಿತು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲೂ ಮಳೆ ಸುರಿಯಿತು.
ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 17.55 ಮಿ.ಮೀ. ಮಳೆಯಾಗಿದೆ.ಮಡಿಕೇರಿ ತಾಲೂಕಿನಲ್ಲಿ 18.08 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 10.80 ಮಿ.ಮೀ.,
ಪೊನ್ನಂಪೇಟೆ ತಾಲೂಕಿನಲ್ಲಿ 24.46 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ 25.10 ಮಿ.ಮೀ., ಕುಶಾಲನಗರ ತಾಲೂಕಿನಲ್ಲಿ 9.30 ಮಿ.ಮೀ. ಮಳೆಯಾಗಿದೆ.ಹೋಬಳಿ ವಿವರ: ಮಡಿಕೇರಿ ಕಸಬಾ 12.40, ನಾಪೋಕ್ಲು 16.80, ಸಂಪಾಜೆ 1.50, ಭಾಗಮಂಡಲ 41.60, ವಿರಾಜಪೇಟೆ 13.60, ಅಮ್ಮತ್ತಿ 8, ಹುದಿಕೇರಿ 30, ಶ್ರೀಮಂಗಲ 22.80, ಪೊನ್ನಂಪೇಟೆ 28, ಬಾಳೆಲೆ 17.05, ಸೋಮವಾರಪೇಟೆ ಕಸಬಾ 14.40, ಶನಿವಾರಸಂತೆ 18, ಶಾಂತಳ್ಳಿ 54, ಕೊಡ್ಲಿಪೇಟೆ 14, ಕುಶಾಲನಗರ 0.60, ಸುಂಟಿಕೊಪ್ಪ 18 ಮಿ.ಮೀ.ಮಳೆಯಾಗಿದೆ.