ಪ್ರಸ್ತುತ ಸಂದರ್ಭದಲ್ಲಿ ತಂತ್ರಜ್ಞಾನವೇ ನಮ್ಮ ಭವಿಷ್ಯ ನಿರ್ಧರಿಸುತ್ತಿದೆ

ಕನ್ನಡಪ್ರಭ ವಾರ್ತೆ ಮೈಸೂರು

ನಿರ್ಮಾಣ ಕ್ಷೇತ್ರದಲ್ಲಿನ ಕೌಶಲ್ಯದ ಕೊರತೆಯನ್ನು ತಂತ್ರಜ್ಞಾನವೇ ನೀಗಿಸುತ್ತಿದೆ ಎಂದು ಬಿಎಐ ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರ ಸಿಂಗ್‌ ಕಾಂಭೋ ಅಭಿಪ್ರಾಯಪಟ್ಟರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಲ್ಡರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಮೈಸೂರು ಶಾಖೆಯು ಗುರುವಾರ ಆಯೋಜಿಸಿರುವ ಮೈಬಿಲ್ಡ್‌- 25ರ ಬೃಹತ್‌ ವಸ್ತು ಪ್ರದರ್ಶನ ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಸಂದರ್ಭದಲ್ಲಿ ತಂತ್ರಜ್ಞಾನವೇ ನಮ್ಮ ಭವಿಷ್ಯ ನಿರ್ಧರಿಸುತ್ತಿದೆ. ಆದ್ದರಿಂದ ಇಂತಹ ಬದಲಾವಣೆ ನಡುವೆ ನಿರ್ಮಾಣ ಕ್ಷೇತ್ರ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಮುನ್ನಡೆಯುತ್ತಿದೆ. ನಿರ್ಮಾಣ ಕ್ಷೇತ್ರದಲ್ಲಿನ ಕೌಶಲ್ಯಯುತ ಕೆಲಸಗಾರರ ಕೊರತೆಯನ್ನು ಈ ತಂತ್ರಜ್ಞಾನವೇ ತುಂಬುತ್ತಿದೆ ಇದಕ್ಕೆಲ್ಲ ಸಂಶೋಧನೆ, ವಿಜ್ಞಾನ, ತಂತ್ರಜ್ಞಾನ ಬಳಕೆಯೇ ಉತ್ತರ ನೀಡುತ್ತಿದೆ ಎಂದು ತಿಳಿಸಿದರು.

ಪಬ್ಲಿಕ್‌ ಟಿವಿ ಮುಖ್ಯಸ್ಥರಾದ ಎಚ್‌.ಆರ್‌. ರಂಗನಾಥ್‌ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಹೆಚ್ಚುತ್ತಿರುವ ಭ್ರಷ್ಟಾಚಾರದ ನಡುವೆ ಭವಿಷ್ಯದಲ್ಲಿ ನಿರ್ಮಾಣ ಕ್ಷೇತ್ರ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ ಎಂದರು.

ಬಿಎಐ ರಾಜ್ಯಾಧ್ಯಕ್ಷ ಬಿ.ವಿ.ಎನ್‌. ರೆಡ್ಡಿ ಮಾತನಾಡಿ, ಮೈಬಿಲ್ಡ್‌ ವಸ್ತು ಪ್ರದರ್ಶನವು 25 ವರ್ಷಕ್ಕೆ ಕಾಲಿರಿಸಲು ಈ ಸಂಘಟನೆಯ ಪದಾಧಿಕಾರಿಗಳ ನಡುವೆ ಇರುವ ಒಗ್ಗಟ್ಟೆ ಕಾರಣ ಎಂದರು.

ಬಿಎಐ ಮೈಸೂರು ಕೇಂದ್ರದ ಅಧ್ಯಕ್ಷ ವಿ. ಶ್ರೀನಾಥ್‌ ಮಾತನಾಡಿ, 80 ಮಳಿಗೆಗಳಿಂದ ಆರಂಭವಾದ ನಿರ್ಮಾಣ ಕ್ಷೇತ್ರದ ಈ ವಸ್ತುಪ್ರದರ್ಶನ ಈಗ 300ಕ್ಕೂ ಹೆಚ್ಚು ಮಳಿಗೆಗಳನ್ನು ಒಳಗೊಂಡಂತೆ ಆಯೋಜಿಸಲಾಗಿದೆ. ಇದೇ ಕಾರಣಕ್ಕೆ ಬಿಎಐ ಮೈಸೂರು ಶಾಖೆ ಪ್ರತಿ ವರ್ಷ ಉತ್ತಮ ಕೇಂದ್ರ ಪ್ರಶಸ್ತಿ ಪಡೆಯುತ್ತಿದೆ ಎಂದು ಹೇಳಿದರು.

ಬಿಎಇ ಮೈಸೂರು ಕೇಂದ್ರದ ಪದಾಧಿಕಾರಿಗಳಾದ ಸಿ.ಡಿ. ಕೃಷ್ಣ, ಆರ್‌. ರಮೇಶ್‌ ರಾವ್‌, ಎನ್‌. ಲೋಕೇಶ್‌ ಗೌಡ ಇದ್ದರು.

ವಸ್ತು ಪ್ರದರ್ಶನ

ವಸ್ತು ಪ್ರದರ್ಶನದಲ್ಲಿ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿನ ಇತ್ತೀಚಿನ ಆವಿಷ್ಕಾರ, ತಂತ್ರಜ್ಞಾನದ ಸಾಮಗ್ರಿಗಳ ಸಮಗ್ರ ಪರಿಚಯಕ್ಕೆ ಸಂಬಂಧಿದಂತೆ ಮಳಿಗೆಗಳು ಹೆಚ್ಚು ಗಮನ ಸೆಳೆಯುತ್ತಿವೆ. ನಿತ್ಯ ಬೆಳಗ್ಗೆ 10 ರಿಂದ ರಾತ್ರಿ 9 ರವರೆಗೆ ಪ್ರದರ್ಶನ ಇರಲಿದೆ.