ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕೆಆರ್‌ಎಸ್ ಅಣೆಕಟ್ಟೆ ಕೆಳಭಾಗದಲ್ಲಿ ರಾಜ್ಯಸರ್ಕಾರ ನಿರ್ಮಿಸಲುದ್ದೇಶಿಸಿರುವ ಬೃಂದಾವನ ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆಯನ್ನು ತಕ್ಷಣವೇ ಕೈಬಿಡುವಂತೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಆಗ್ರಹಿಸಿದರು.ನಗರಲ್ಲಿರುವ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಕೃಷಿಯನ್ನು ಮೂಲ ಉದ್ದೇಶವಾಗಿಟ್ಟುಕೊಂಡು ಕೆಆರ್‌ಎಸ್ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಅಣೆಕಟ್ಟೆಯ ನೀರು ಕೃಷಿ ಮತ್ತು ಕುಡಿಯುವ ಉದ್ದೇಶಕ್ಕೆ ಸೀಮಿತವಾಗಿರಬೇಕು. ಅಮ್ಯೂಸ್‌ಮೆಂಟ್ ಪಾರ್ಕ್‌ನಿಂದ ಅಣೆಕಟ್ಟು ಸುತ್ತಮುತ್ತಲ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.ಅಣೆಕಟ್ಟುಸುರಕ್ಷತೆ ದೃಷ್ಟಿಯಿಂದ ಸುತ್ತಮುತ್ತ ನಡೆಯುತ್ತಿದ್ದ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಗಣಿ ಗಂಡಾಂತರದಿಂದ ಪಾರಾದ ಅಣೆಕಟ್ಟೆಗೆ ಈಗ ಅಮ್ಯೂಸ್‌ಮೆಂಟ್ ಪಾರ್ಕ್ ಎಂಬ ಭೂತ ವಕ್ಕರಿಸಿದೆ. ಇದು ದುರದೃಷ್ಟಕರ ಎಂದು ಹೇಳಿದರು.
ಅಮ್ಯೂಸ್‌ಮೆಂಟ್ ಪಾರ್ಕ್‌ನಿಂದ ಉದ್ಯೋಗ ಸೃಷ್ಟಿಯಾಗುವುದಿರಲಿ ನಾವು ಜಲಾಶಯದಿಂದ ಹೊರಬಿಡುವ ನೀರು ಸಂಪೂರ್ಣ ಕಲುಷಿತವಾಗಲಿದೆ. ಪರಿಸರ ಹಾಳಾಗಲಿದೆ. ಈಗಲೇ ಕಾವೇರಿ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬ ವರದಿಗಳಿವೆ. ಅಮ್ಯೂಸ್ ಮೆಂಟ್ ಪಾರ್ಕ್‌ನಿಂದ ಗಂಭೀರ ರೀತಿಯಲ್ಲಿ ಜಲ ಮಲೀನವಾಗಲಿದೆ. ತಾಂತ್ರಿಕವಾಗಿ ಅಣೆಕಟ್ಟೆಗೆ ಅಪಾಯ ಎದುರಾಗಲಿದೆ ಎಂದು ಎಚ್ಚರಿಸಿದರು.ಹೊಸ ಯೋಜನೆ ಕುರಿತಂತೆ ತಾಂತ್ರಿಕ ತಜ್ಞರು, ವಿಜ್ಞಾನಿಗಳು, ಜಲತಜ್ಞರೊಂದಿಗೂ ಸಮಾಲೋಚನೆ ನಡೆಸಲಾಗಿದೆ. ಅದಕ್ಕೆ ಅವರೆಲ್ಲರೂ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಕೈಗೊಂಡಿರುವ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದ್ದು ಟೆಂಡರ್ ಕರೆಯುವ ಪ್ರಕ್ರಿಯೆ ಆರಂಭಗೊಂಡಿದೆ. ಮೊದಲ ಟೆಂಡರ್‌ಗೆ ಯಾರೂ ಬರಲಿಲ್ಲವೆಂಬ ಕಾರಣಕ್ಕೆ ಈಗ ಮತ್ತೊಮ್ಮೆ ಟೆಂಡರ್ ಕರೆಯಲು ಸಿದ್ಧತೆ ನಡೆದಿದೆ. ಇದಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ ಎಂದು ಹೇಳಿದರು.
ಸರ್ಕಾರ ಕೂಡಲೇ ಈ ಯೋಜನೆಯನ್ನು ಕೈಬಿಡಬೇಕು ಎನ್ನುವ ತೀರ್ಮಾನವನ್ನು ಸಭೆ ನಿರ್ಣಯ ಕೈಗೊಂಡಿದೆ. ಈ ವಿಚಾರ ಕುರಿತು ಕಾವೇರಿ ಕೊಳ್ಳದ ರೈತರಿಗೆ ಜಾಗೃತಿ ಮೂಡಿಲಾಗುವುದು. ಅಣೆಕಟ್ಟು ಸುತ್ತಲಿನ ೬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರನ್ನು ಎಚ್ಚರಿಸಲಾಗುವುದು. ಯೋಜನೆಯಿಂದ ಆಗುವ ತಾಂತ್ರಿಕ ತೊಂದರೆಗಳು ಹಾಗೂ ಪರಿಣಾಮಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಸಮಿತಿ ವತಿಯಿಂದಲೇ ಕರಪತ್ರಗಳನ್ನು ಹಂಚಲಾಗುವುದು. ಹೋರಾಟಕ್ಕೆ ಜನರನ್ನು ಸಂಘಟಿಸುವುದಾಗಿ ತಿಳಿಸಿದರು.ಪರಿಸರ ಹಾಗೂ ಜನರಿಗೆ ವಿರೋಧವಾಗಿರುವ ಇಂತಹ ಯೋಜನೆಗಳನ್ನು ಸರ್ಕಾರಗಳು ಅನುಷ್ಠಾನಗೊಳಿಸಬಾರದು. ತಕ್ಷಣವೇ ಟೆಂಡರ್‌ನ್ನು ರದ್ದುಗೊಳಿಸಬೇಕು. ಬೆಂಗಳೂರಿಗೆ ಆರನೇ ಹಂತದ ಕುಡಿಯುವ ಯೋಜನೆ ಜಾರಿಗೆ ಬಿಡಬಾರದು. ಏಕೆಂದರೆ ಅಣೆಕಟ್ಟೆ ಕಟ್ಟಿರುವ ಉದ್ದೇಶ ರೈತರ ಬೆಳೆಗೆ ನೀರು, ಸ್ಥಳೀಯರ ಜನ ಜಾನುವಾರುಗಳ ಕುಡಿಯಲು ಉಪಯೋಗಕ್ಕೆ ಮಾತ್ರ ಎನ್ನುವುದನ್ನು ಸರ್ಕಾರ ಮನಗಾಣಬೇಕಿದೆ ಎಂದರು.
ಸಭೆಯಲ್ಲಿ ರೈತಸಂಘದ ಇಂಡವಾಳು ಚಂದ್ರಶೇಖರ್, ಮುದ್ದೇಗೌಡ, ಕಮಲಾ, ಜಯಕರ್ನಾಟಕ ಪರಿಷತ್ತಿನ ರಾಜ್ಯಾಧ್ಯಕ್ಷ ಎಸ್.ನಾರಾಯಣ್, ಮಧುಸೂಧನ್, ಸಾತನೂರು ವೇಣುಗೋಪಾಲ, ಕನ್ನಡಸೇನೆ ಅಧ್ಯಕ್ಷ ಮಂಜುನಾಥ್, ಸುದೀರ್ ಮತ್ತಿತರರಿದ್ದರು.ಸಭೆಯ ನಿರ್ಣಯಗಳು:
1. ಕೆಆರ್‌ಎಸ್ ಅಣೆಕಟ್ಟೆ ನೀರು ಕೃಷಿ, ಕುಡಿಯುವ ನೀರಿನ ಉದ್ದೇಶಕ್ಕೆ ಬಳಕೆಯಾಗಬೇಕು.2. ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣಕ್ಕೆ ಕರೆದಿರುವ ಟೆಂಡರ್ ರದ್ದುಗೊಳಿಸಬೇಕು.
3. ನೂತನ ಯೋಜನೆಯಿಂದ ಪರಿಸರ, ಅಣೆಕಟ್ಟೆಗೆ ಅಪಾಯವಾಗುವುದನ್ನು ತಡೆಯುವುದು.4. ಯೋಜನೆ ವಿರುದ್ಧ ಅಣೆಕಟ್ಟೆಯ ಸುತ್ತಮುತ್ತಲಿನ ಜನರಲ್ಲಿ ಜಾಗೃತಿ, ತಿಳಿವಳಿಕೆ ಮೂಡಿಸುವುದು
5. ಬೆಂಗಳೂರಿಗೆ ಆರನೇ ಹಂತದ ಕುಡಿಯುವ ನೀರು ಯೋಜನೆಗೆ ಅವಕಾಶ ನೀಡದಿರುವುದು.