ಸಾರಾಂಶ
ಕನ್ನಡಪ್ರಭ ವಾರ್ತೆ ಸಂಡೂರು
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಭಾನುವಾರ ತಾಲೂಕಿನ ಅಂತಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರುಟ್ಲ ಹಾಗೂ ಲಿಂಗದಹಳ್ಳಿ ಗ್ರಾಮಗಳಲ್ಲಿ ಮಳೆ ಕೊರತೆಯಿಂದ ಬೆಳೆ ಹಾನಿಗೀಡಾದ ಜಮೀನುಗಳನ್ನು ವೀಕ್ಷಿಸಿ, ಬೆಳೆ ಹಾನಿ ಸಂಭವಿಸಿದ ರೈತರಿಂದ ಅಹವಾಲುಗಳನ್ನು ಆಲಿಸಿದರು.ಮರುಟ್ಲ ಗ್ರಾಮದ ರೈತ ರಾಮಪ್ಪ ಮಾತನಾಡಿ, ೪.೯೫ ಎಕರೆ ಪ್ರದೇಶದಲ್ಲಿ ಹಿಂಗಾರಿನಲ್ಲಿ ಮೆಕ್ಕೆಜೋಳ ಬೆಳೆದಿದ್ದೆ. ಮಳೆ ಕೊರತೆಯಿಂದ ಬೆಳೆ ಸಂಪೂರ್ಣ ಹಾಳಾಗಿದೆ. ವಿದ್ಯುತ್ ಸಮಸ್ಯೆಯೂ ಹೆಚ್ಚಿದೆ. ರಾತ್ರಿ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡುತ್ತಾರೆ. ಈ ಭಾಗದಲ್ಲಿ ಕರಡಿಗಳ ಹಾವಳಿ ಹೆಚ್ಚಿದೆ. ರಾತ್ರಿ ಹೊತ್ತಿನಲ್ಲಿ ಹೊಲಗಳಿಗೆ ಹೋಗಲು ತೊಂದರೆಯಾಗುತ್ತಿದೆ. ಟಿಸಿ ಸುಟ್ಟು ಹೋದರೆ, ರೈತರೆ ಖರ್ಚು ಮಾಡಿಕೊಂಡು ಟಿಸಿ ಹಾಕಿಸಿಕೊಳ್ಳಬೇಕು ಎಂದು ತಮ್ಮ ಅಳಲನ್ನು ತೋಡಿಕೊಂಡರು. ಲಿಂಗದಹಳ್ಳಿಯಲ್ಲಿ ರೈತ ಬಸವರಾಜ ಮಾತನಾಡಿ, ನಮ್ಮ ಹೊಲದಲ್ಲಿ ಮೆಣಸಿನಕಾಯಿ ಬೆಳೆದಿದ್ದೆವು. ಕೊಳವೆ ಬಾಯಿಯಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿ, ಬೆಳೆ ನಷ್ಟವಾಗಿದೆ ಎಂದರು. ರೈತರು ಹಾಗೂ ಅಧಿಕಾರಿಗಳಿಂದ ಮಳೆ ಕೊರತೆಯಿಂದ ಆಗಿರುವ ಬೆಳೆ ನಷ್ಟದ ಕುರಿತು ಮಾಹಿತಿ ಪಡೆದ ಆರ್. ಅಶೋಕ್ ಅವರು, ರೈತರ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು ಎಂದರು. ಸಿರುಗುಪ್ಪ ಕ್ಷೇತ್ರದ ಮಾಜಿ ಶಾಸಕ ಸೋಮಲಿಂಗಪ್ಪ, ಬಿಜೆಪಿ ಮುಖಂಡರಾದ ಮುರಹರಗೌಡ, ತಾಲೂಕು ಘಟಕದ ಅಧ್ಯಕ್ಷ ಜಿ.ಟಿ. ಪಂಪಾಪತಿ, ರೈತ ಮೋರ್ಚಾ ಮುಖಂಡ ವಿ.ಎಸ್. ಶಂಕರ್, ಮಾಜಿ ವಾಡಾ ಅಧ್ಯಕ್ಷ ಕರಡಿ ಯರಿಸ್ವಾಮಿ, ಜಂಟಿ ಕೃಷಿ ನಿರ್ದೇಶಕ ಡಾ. ಕೆ. ಮಲ್ಲಿಕಾರ್ಜುನ, ಸಹಾಯಕ ಕೃಷಿ ನಿರ್ದೇಶಕ ಮಂಜುನಾಥರೆಡ್ಡಿ, ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಹನುಮಪ್ಪ ನಾಯಕ ಉಪಸ್ಥಿತರಿದ್ದರು. .