ಬಾಲ್ಯದಲ್ಲಿ ನಾಟಕಗಳಲ್ಲಿ ಭಕ್ತಪ್ರಹ್ಲಾದ, ಕೃಷ್ಣನ ಪಾತ್ರ ಮಾಡುತ್ತಿದ್ದೆ: ಡಾ. ವೀರೇಂದ್ರ ಹೆಗ್ಗಡೆ

| Published : Nov 27 2023, 01:15 AM IST

ಬಾಲ್ಯದಲ್ಲಿ ನಾಟಕಗಳಲ್ಲಿ ಭಕ್ತಪ್ರಹ್ಲಾದ, ಕೃಷ್ಣನ ಪಾತ್ರ ಮಾಡುತ್ತಿದ್ದೆ: ಡಾ. ವೀರೇಂದ್ರ ಹೆಗ್ಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ನಾನು ಬಾಲ್ಯದಲ್ಲಿ ಭಕ್ತಪ್ರಹ್ಲಾದ ಮತ್ತು ಕೃಷ್ಣನ ಪಾತ್ರಗಳನ್ನು ಹಾಕಿ ನಾಟಕಗಳಲ್ಲಿ ನಟಿಸುತ್ತಿದೆ: ಜನ್ಮದಿನ ಪ್ರಯುಕ್ತ ನಡೆದ ನೆನಪಿನಂಗಳದಲ್ಲಿ ಕಾರ್ಯಕ್ರಮದಲ್ಲಿ ಢಾ. ವೀರೇಂದ್ರ ಹೆಗ್ಗೆಡೆ

ಕನ್ನಡಪ್ರಭ ವಾರ್ತೆ ಉಜಿರೆತನಗೆ ನಾಟಕದಲ್ಲಿ ವಿಶೇಷ ಆಸಕ್ತಿ ಇದ್ದು ಬಾಲ್ಯದಲ್ಲಿ ಭಕ್ತ ಪ್ರಹ್ಲಾದ ಮತ್ತು ಕೃಷ್ಣನ ಪಾತ್ರ ಮಾಡಿರುವುದನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಸ್ಮರಿಸಿಕೊಂಡರು.

ಧರ್ಮಸ್ಥಳದಲ್ಲಿ ಅವರ ೭೫ನೇ ವರ್ಷದ ಜನ್ಮದಿನಾಚರಣೆ ಅಂಗವಾಗಿ ಶನಿವಾರ ಸಂಜೆ ವಸಂತ ಮಹಲ್‌ನಲ್ಲಿ ಆಯೋಜಿಸಿದ ‘ನೆನಪಿನಂಗಳ’ ಕಾರ್ಯಕ್ರಮದಲ್ಲಿ ಮಾತನಾಡಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಹೆಗ್ಗಡೆ ಅವರು, ಬಾಲ್ಯದಲ್ಲಿ ತಾನು ಡಾ. ಸೋಮಸುಂದರ ಮತ್ತು ಬಾಬುರಾವ್ ಅವರಿಂದ ಪ್ರೇರಣೆಗೊಂಡು ನಾಟಕದಲ್ಲಿ ಭಾಗವಹಿಸುತ್ತಿದೆ ಎಂದರು.

೧೯೬೮ರ ಅಕ್ಟೋಬರ್ ತಿಂಗಳ ೨೪ರಂದು ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾದ ಬಳಿಕ ಕ್ಷೇತ್ರದ ಪ್ರಗತಿಯ ಹಂತಗಳ ಅವಲೋಕನ ಮಾಡಿದ ಅವರು, ಮಾತೃಶ್ರೀ ರತ್ನಮ್ಮನವರು, ಸಹೋದರರಾದ ಡಿ. ಸುರೇಂದ್ರ ಕುಮಾರ್ ಮತ್ತು ಹರ್ಷೇಂದ್ರ ಕುಮಾರ್, ದೇವಳದ ನೌಕರ ವೃಂದ, ಬೀಡಿನ ಸಿಬ್ಬಂದಿ ಹಾಗೂ ಕುಟುಂಬದ ಹಿರಿಯರ ಸಹಕಾರವನ್ನು ಸ್ಮರಿಸಿದರು. ದೇವಸ್ಥಾನದಲ್ಲಿ ಉತ್ಸವ, ಪೂಜಾದಿ ಕಾರ್ಯಕ್ರಮಗಳಲ್ಲದೆ ಅಂದು ಪ್ರತಿದಿನ ಸುದೀರ್ಘ ಪ್ರಯಾಣ ಮಾಡಿ ಹಲವಾರು ಸಭೆ-ಸಮಾರಂಭಗಳಲ್ಲಿ ಭಾಗವಹಿಸಿ ವಿಶೇಷ ಸಾರ್ವಜನಿಕ ಸಂಪರ್ಕ ಹಾಗೂ ಲೋಕಾನುಭವ ಪಡೆದಿದ್ದೇನೆ. ಪ್ರತಿವರ್ಷ ಕುಟುಂಬ ಸಮೇತ ಹೋಗುವ ಪ್ರವಾಸದ ಸವಿನೆನಪುಗಳನ್ನು ಹೆಗ್ಗಡೆಯವರು ವಿವರಿಸಿದರು. ಈ ಸಂದರ್ಭದಲ್ಲಿ ಹೆಗ್ಗಡೆಯವರ ಜೀವನ ಸಾಧನೆ ಬಗ್ಗೆ ವೀಡಿಯೊಪ್ರದರ್ಶನ ಹಾಗೂ ಛಾಯಾಚಿತ್ರಗಳ ಪ್ರದರ್ಶನ ಆಯೋಜಿಸಲಾಯಿತು.

ಹಿರಿಯ ನೌಕರರಾದ ಎನ್‌. ರಾಮಕೃಷ್ಣ ಉಡುಪ, ರತ್ನಾಕರ ಆಚಾರ್, ಭಾಸ್ಕರ ಶಾಸ್ತ್ರಿ ದೇಲಂಪಾಡಿತ್ತಾಯ, ಸೀತಾರಾಮ ತೋಳ್ಪಾಡಿತ್ತಾಯ, ಡಾ.ಎಲ್.ಎಚ್. ಮಂಜುನಾಥ್, ವಕೀಲ ರತ್ನವರ್ಮ ಬುಣ್ಣು, ಪುರಂದರ ಭಟ್, ಮಲ್ಲಿನಾಥ್ ಜೈನ್, ರಿತೇಶ್, ಬಾಲಕೃಷ್ಣ ಪೂಜಾರಿ ಮತ್ತು ಪುಷ್ಪದಂತ ಮೊದಲಾದವರು ತಮ್ಮ ಕರ್ತವ್ಯದ ಸಂದರ್ಭದಲ್ಲಿ ಆದ ಸ್ವಾನುಭವ ಮತ್ತು ರಸನಿಮಿಷಗಳ ಸೊಗಡನ್ನು ಹಂಚಿಕೊಂಡರು.

ಹೇಮಾವತಿ ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್, ಶ್ರೇಯಸ್ ಮತ್ತು ಅಮಿತ್ ಮೊದಲಾದವರು ಉಪಸ್ಥಿತರಿದ್ದರು.