ಕ್ಷೀರೋದ್ಯಮಕ್ಕೆ ಹೊಡೆತ ನೀಡಿದ ಬರ, ಬಿಸಿಲು!

| Published : May 16 2024, 12:48 AM IST

ಕ್ಷೀರೋದ್ಯಮಕ್ಕೆ ಹೊಡೆತ ನೀಡಿದ ಬರ, ಬಿಸಿಲು!
Share this Article
  • FB
  • TW
  • Linkdin
  • Email

ಸಾರಾಂಶ

ಬರಗಾಲ, ರಣ ಬಿಸಿಲಿನಿಂದ ಜಾನುವಾರುಗಳಿಗೆ ಸಮರ್ಪಕವಾಗಿ ಮೇವು ಸಿಗದ ಹಿನ್ನೆಲೆಯಲ್ಲಿ ಕ್ಷೀರೋದ್ಯಮ ಕೂಡ ಕುಸಿತಗೊಂಡಿದೆ. ಉಪ ಕಸುಬಾಗಿ ಹಾಲನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿದ್ದ ಅನ್ನದಾರರಿಗೆ ತೀವ್ರ ಬರಗಾಲ ಕೂಡ ಪರೋಕ್ಷವಾಗಿ ಹೊಡೆತ ನೀಡಿದೆ.

ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿ

ಬರಗಾಲ, ರಣ ಬಿಸಿಲಿನಿಂದ ಜಾನುವಾರುಗಳಿಗೆ ಸಮರ್ಪಕವಾಗಿ ಮೇವು ಸಿಗದ ಹಿನ್ನೆಲೆಯಲ್ಲಿ ಕ್ಷೀರೋದ್ಯಮ ಕೂಡ ಕುಸಿತಗೊಂಡಿದೆ. ಉಪ ಕಸುಬಾಗಿ ಹಾಲನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿದ್ದ ಅನ್ನದಾರರಿಗೆ ತೀವ್ರ ಬರಗಾಲ ಕೂಡ ಪರೋಕ್ಷವಾಗಿ ಹೊಡೆತ ನೀಡಿದೆ.

ಬೇಸಿಗೆಯ ಕಾವು ಏರುತ್ತಿರುವುದು ಹೈನುಗಾರಿಕೆ ಉದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದೆ. ತೋಟದಲ್ಲಿ ಬೆಳೆಸಿದ ಹುಲ್ಲು ನೀರಿನ ಕೊರತೆಯಿಂದ, ಬಾರಿ ಬಿಸಿಲಿನ ತಾಪಕ್ಕೆ ಒಣಗಲಾರಂಭಿಸಿದೆ. ಜಾನುವಾರುಗಳಿಗೆ ಆಹಾರದ ಕೊರತೆ ಎದುರಾಗಿದೆ. ಬಿಸಿಲಿನ ಬೇಗೆಗೆ ಹಾಲಿನ ಪ್ರಮಾಣ ಕುಂಠಿತಗೊಂಡಿದೆ. ಹಸಿ ಹುಲ್ಲು ಇರುವ ಕಾಲಕ್ಕೆ 2 ಲೀಟರ್‌ ಹಾಲು ಕೊಡುತ್ತಿದ್ದ ಹಸು, ಎಮ್ಮೆ ಇಂದು 1ಲೀಟರ್‌ ಹಾಲು ನೀಡುವಂತಾಗಿದೆ. ಒಣಹುಲ್ಲು, ಪಶು ಆಹಾರದ ಬೆಲೆ ಏರಿಕೆ, ರೋಗ ಬಾಧೆ ಹೈನುಗಾರರನ್ನು ಸಂಕಷ್ಟದಲ್ಲಿ ಸಿಲುಕಿಸಿದೆ.ಬೇಸಿಗೆಯ ತಿಂಗಳು ಆರಂಭವಾಗುತ್ತಿದ್ದಂತೆ ಹೈನುಗಾರರ ಸಂಕಷ್ಟವೂ ಶುರುವಾಗಿದೆ. ಹಸಿ ಹುಲ್ಲಿನ ಕೊರತೆ ಒಂದು ಕಡೆಯಾದರೆ, ಕುಡಿಯಲು, ಸ್ನಾನ ಮಾಡಿಸಲು, ದನದ ಖೊಟ್ಟಿಗೆ ತೊಳೆಯಲು ನೀರಿನ ಕೊರತೆ ಎದುರಾಗಿದೆ. ಜಾನುವಾರುಗಳಿಗೆ ಬಿಸಿಲಿನ ತಾಪದಿಂದ ದೇಹದ ಉಷ್ಣತೆ ಹೆಚ್ಚಾದಂತೆ ಹಸಿವು ಕಡಿಮೆಯಾಗುತ್ತದೆ. ಹಸಿವು ಕಡಿಮೆಯಾದಾಗ ಜಾನುವಾರುಗಳು ಹಾಲು ಕಡಿಮೆ ನೀಡಲು ಆರಂಭಿಸುತ್ತವೆ.

ಹೈನುಗಾರಿಕೆಯಲ್ಲಿ ಸವಾಲುಗಳು ಜಾಸ್ತಿ, ಖರ್ಚು ಹೆಚ್ಚು. ಆದಾಯ ಕಡಿಮೆ. ಹಿಂದೆಂದೂ ಕಾಣದ ಬರಗಾಲ ತಾಲೂಕನ್ನು ಆವರಿಸಿದ್ದು, ಕುಡಿಯುವ ನೀರು, ಜಾನುವಾರುಗಳ ಮೇವಿಗೆ ಬರ ಆವರಿಸಿದೆ. ಬೇಸಿಗೆ ದಿನಗಳನ್ನು ನೆನೆದು ರೈತ ಆತಂಕದಲ್ಲಿ ದಿನ ದೂಡುತ್ತಿದ್ದಾನೆ.

ಮೇವಿನ ಬೆಲೆ ಗಗನಕ್ಕೆ:

ತಾಲೂಕಿನಾದ್ಯಂತ ಕೃಷಿ ಸಂಪೂರ್ಣ ಕುಸಿದಿರುವ ಪರಿಣಾಮ ಜಾನುವಾರುಗಳಿಗೆ ಬೇಕಾಗಿರುವ ಮೇವಿನ ಬೆಲೆ ಗಗನಕ್ಕೆ ಏರಿದೆ. ಮೇವು ಕೊಂಡುಕೊಳ್ಳಲು ಸಾಧ್ಯವಾಗದೆ ರೈತರು ಕಂಗಾಲಾಗಿದ್ದಾರೆ. ಅನಿವಾರ್ಯವಾಗಿ ಕೊಳ್ಳಲೇಬೇಕಾಗಿರುವ ಕಾರಣ ಸಾಲ ಮಾಡಿ ಮೇವನ್ನು ಕೊಂಡುಕೊಳ್ಳುತ್ತಿದ್ದಾರೆ. ಇದರಿಂದ ರೈತರಿಗೆ ರಾಸು, ಆಕಳು, ಎಮ್ಮೆಗಳಿಗೆ ಮೇವು ಹೊಂದಿಸುವುದೇ ದೊಡ್ಡ ಸಾಹಸದ ಕೆಲಸವಾಗಿ ಪರಿಣಮಿಸಿದೆ.

ಟ್ರ್ಯಾಕ್ಟರ್ ಒಣ ಕಣಕಿಗೆ(ಮೇವಿಗೆ) ₹8-10 ಸಾವಿರ:

ತಾಲೂಕಿನಲ್ಲಿ ಮೇವು ಬೆಳೆಗಳಾದ ಜೋಳ, ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳು ಮಳೆಯ ಕೊರತೆಯಿಂದ ಬಿತ್ತನೆಯಾಗಿದ್ದರೂ ಮೇಲೆಳದೆ ಒಣಗಿವೆ. ವರ್ಷವಿಡಿ ಜಾನುವಾರುಗಳ ಆಹಾರಕ್ಕೆ ಸಿಗಬೇಕಾದ ಜೋಳದ ಕಣಕಿ ಸಿಗದೇ ಇರುವುದರಿಂದ ಜಾನುವಾರುಗಳಿಗೂ ಮೇವಿನ ಬರ ಎದುರಾಗಿದೆ. ಹಿಂಗಾರು ಬಿತ್ತನೆಯ ವಾರ್ಷಿಕ ಗುರಿಯನ್ನು ತಲುಪಲು ಸಾಧ್ಯವಾಗಿರುವುದಿಲ್ಲ. ಒಂದು ಸೂಡು ಒಣ ಕಣಕಿ(ಜೋಳದ ದಂಟು) ₹15 ರಿಂದ 20ಗಳನ್ನು ಮಾರಾಟವಾದರೆ, ಒಂದು ಟ್ರ್ಯಾಕ್ಟರ್ ಒಣ ಕಣಕಿಗೆ(ಮೇವಿಗೆ) 8 ರಿಂದ 10 ಸಾವಿರ ರು.ಗಳ ವರೆಗೆ ಮಾರಾಟವಾಗುತ್ತಿದೆ. ಹಸಿ ಮೇವಂತೂ ಹುಡುಕಿದರೂ ಸಿಗುತ್ತಿಲ್ಲ. ಹೈನುಗಾರಿಕೆ ಮಾಡುವ ರೈತರು ತೋಟದಲ್ಲಿ ಬೆಳೆದಿದ್ದರೂ, ನೀರಿನ ಕೊರತೆಯಿಂದ ಅದು ಅಷ್ಟಕಷ್ಟೇ ಆಗಿದೆ. ಹೀಗಾಗಿ ಒಣ,ಹಸಿ ಮೇವಿನ ಸಮಸ್ಯೆಯಿಂದ ಹಾಗೂ ಭೀಕರ ಸುಡು ಬಿಸಿಲಿನ ತಾಪಕ್ಕೆ ಜಾನುವಾರುಗಳು ಹಾಲು ನೀಡುವುದು ಕಡಿಮೆಯಾಗಿದೆ. ಒಟ್ಟಿನಲ್ಲಿ ಬರಗಾರ, ಸುಡು ಬಿಸಿಲು ಬದುಕನ್ನೇ ಬರ್ಬಾದ ಮಾಡಿದೆ.

---

ಕೋಟ್

ಕೃಷಿಯ ಜೊತೆಗೆ ಹೈನುಗಾರಿಕೆ ಕೃಷಿ ಮಾಡಬೇಕು ಎಂಬ ಉದ್ದೇಶದಿಂದ ಕಳೆದ 10 ವರ್ಷದಿಂದ ಹಸು, ಎಮ್ಮೆಗಳನ್ನು ಖರೀದಿಸಿ, ಕೃಷಿಯ ಜೊತೆಗೆ ಹೈನುಗಾರಿಕೆ ಉದ್ಯೋಗ ಮಾಡುತ್ತಿದ್ದೇನೆ. ಪ್ರತಿವರ್ಷ ಮಳೆಯಿಂದ ಬೆಳೆ ಚೆನ್ನಾಗಿ ಬಂದು ಜಾನುವಾರುಗಳಿಗೂ ಮೇವಿನ ಅನುಕೂಲವಾಗುತ್ತಿತ್ತು. ಹೈನುಗಾರಿಕೆಯಿಂದ ಹಾಲು ಮಾರಾಟ ಮಾಡಿ, ಪ್ರತಿ ವರ್ಷ ಆರ್ಥಿಕವಾಗಿ ಅನುಕೂಲವಾಗುತ್ತಿತ್ತು. ಪ್ರಸಕ್ತ ವರ್ಷ ಮುಂಗಾರು ಹಾಗೂ ಹಿಂಗಾರು ಎರಡು ಮಳೆಗಳು ಬಾರದೇ ಇರುವುದರಿಂದ ಬಿತ್ತಿದ ಬೀಜ ಮೊಳಕೆ ಒಡೆಯುವ ಮುನ್ನವೇ ನೀರಿನ ಕೊರತೆಯಿಂದ ಮೇಲೆ ಎಳಲೇ ಇಲ್ಲ. ಹೀಗಾಗಿ ಜಾನುವಾರುಗಳಿಗೂ ಮೇವಿನ ಕೊರತೆ ಉಂಟಾಗಿದೆ. ಅಲ್ಲದೇ, ಬೀಕರ ಬಿಸಿಲಿನ ಹಿನ್ನೆಲೆಯಲ್ಲಿ ಹಸಿ ಮೇವು ಕೊರತೆ ಹಾಗೂ ಬಿಸಿಲಿನ ನಡುವೆ ಜಾನುವಾರುಗಳು ಹಾಲು ನೀಡುವುದು ಕಡಿಮೆ ಮಾಡಿವೆ.

-ಮಲ್ಲಿಕಾರ್ಜುನ ಗುಡ್ಲ, ಪ್ರಗತಿಪರ ರೈತ ಹಾಗೂ ಹೈನುಗಾರಿಕೆ ಕೃಷಿ ರೈತ.

--

ಬೇಸಿಗೆಯಲ್ಲಿ ಉಷ್ಣತೆ ಜಾಸ್ತಿ ಇರುವುದರಿಂದ ಹಾಲು ಉತ್ಪಾದನೆ ಕಡಿಮೆ ಆಗುತ್ತದೆ. ಒಂದು ಜಾನುವಾರುದಿಂದ ಒಂದು ಲೀಟರ್‌ ಹಾಲು ಉತ್ಪಾದನೆಯಲ್ಲಿ ಕಡಿಮೆಯಾಗುತ್ತದೆ. ಬೇಸಿಗೆಯಲ್ಲಿ ಉಷ್ಣತೆಯ ಸಮಸ್ಯೆಯ ಜೊತೆಗೆ ಜಾನುವಾರುಗಳಿಗೆ ಹಸಿ ಮೇವು ಸಿಗದೇ ಇರುವುದರಿಂದ ಹಾಲು ಉತ್ಪಾದನೆ ಕಡಿಮೆಯಾಗುತ್ತದೆ.

-ಡಾ.ಭೀಮಾಶಂಕರ ಕನ್ನೂರ, ಸಹಾಯಕ ನಿರ್ದೇಶಕರು, ಪಶುಸಂಗೋಪನೆ ಇಲಾಖೆ, ಇಂಡಿ.