ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಮಾತ್ರ ಬರಗಾಲ ಬಂದಿಲ್ಲ. ಬಿಜೆಪಿ-ಜೆಡಿಎಸ್ ಕಾಲದಲ್ಲೂ ರಾಜ್ಯದಲ್ಲಿ ಬರಗಾಲ ಬಂದಿದೆ. ವಿಪಕ್ಷಗಳು ಸುಖಾಸುಮ್ಮನೆ ಟೀಕೆ ಮಾಡುತ್ತಾ ಜನರನ್ನು ನಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಒಳ್ಳೆಯದಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯದಲ್ಲಿ ಕಾವೇರಿ ಮಾತೆಗೆ ಪೂಜೆ ಮತ್ತು ಬಾಗಿನ ಸಲ್ಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿ ಪ್ರಕೃತಿ ವಿಕೋಪ ಯಾವಾಗ ಸಂಭವಿಸುತ್ತದೆ ಎಂದು ಹೇಳಲಾಗುವುದಿಲ್ಲ. ಒಂದೆರಡು ವರ್ಷ ಉತ್ತಮವಾಗಿ ಮಳೆ ಬಂದರೆ ಮತ್ತೆರಡು ವರ್ಷ ಬರ ಬರಬಹುದು. ಪ್ರಕೃತಿ ಯಾವಾಗಲೂ ಒಂದೇ ರೀತಿಯಾಗಿರುವುದಿಲ್ಲ. ಅದನ್ನು ಅಧಿಕಾರದಲ್ಲಿರುವವರ ತಲೆಗೆ ಕಟ್ಟುವುದು ಒಳ್ಳೆಯದೂ ಅಲ್ಲ. ಈ ಬಾರಿ ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾಗಿ ತುಂಬಿ ಹರಿಯುತ್ತಿದೆ. ಹಾಗಾದರೆ ನೀವು ಮಾಡಿರುವ ಟೀಕೆಗೆ ಬೆಲೆಯೇ ಇಲ್ಲದಂತಾಗಿದೆ ಎಂದು ಕುಟುಕಿದರು.
ಕಳೆದ ವರ್ಷ ಬರಗಾಲ ಎದುರಾದರೂ ಜನರು ಸಂಕಷ್ಟಕ್ಕೆ ಸಿಲುಕದಂತೆ ಎಚ್ಚರಿಕೆಯಿಂದ ನೋಡಿಕೊಂಡೆವು. ಗ್ಯಾರಂಟಿ ಯೋಜನೆಗಳನ್ನು ಕೊಟ್ಟೆವು. ಕೇಂದ್ರ ಸರ್ಕಾರ ತೆರಿಗೆ ವಂಚನೆ ಮಾಡಿದರೂ ಸುಪ್ರೀಂ ಕೋರ್ಟ್ ಮೊರೆ ಹೋಗಿ ಅನುದಾನ ಬಿಡುಗಡೆ ಮಾಡಿಸಿ ನೀಡಿದ್ದೇವೆ ಎಂದು ನುಡಿದರು.ಪ್ರಸ್ತುತ ಸನ್ನಿವೇಸದಲ್ಲಿ ಕಾವೇರಿ ಸಮಸ್ಯೆಯನ್ನು ಯಾರಿಂದಲೂ ಬಗೆಹರಿಸಲು ಸಾಧ್ಯವಿಲ್ಲ. ನ್ಯಾಯಾಧೀಕರಣ ರಚನೆಯಾಗಿ, ಸುಪ್ರೀಂ ಕೋರ್ಟ್‌ನಲ್ಲಿ ಅಂತಿಮ ತೀರ್ಪು ಪ್ರಕಟವಾಗಿದೆ. ಬಳಿಕ ಕೋರ್ಟ್ ಸೂಚನೆಯಂತೆ ನೀರು ನಿರ್ವಹಣಾ ಸಮಿತಿ ಮತ್ತು ಪ್ರಾಧಿಕಾರ ರಚನೆಯಾಗಿದೆ. ಈ ಹಂತದಲ್ಲಿ ಸಮಸ್ಯೆ ಬಗೆಹರಿಸುವುದು ಸುಲಭದ ಮಾತಲ್ಲ ಎಂದು ಕೇಂದ್ರಸಚಿವ ಎಚ್.ಡಿ.ಕುಮಾರಸ್ವಾಮಿ ಹೆಸರೇಳದೆ ಕಾಲೆಳೆದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಕೆಆರ್‌ಎಸ್ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬರುವ ಉಪಪನಾಲೆಗಳ ಅಭಿವೃದ್ಧಿಗೆ ೨.೫೦ ಕೋಟಿ ರು. ಬಿಡುಗಡೆ ಮಾಡುವಂತೆ ಹಾಗೂ ಪ್ರವಾಹದಿಂದ ಸೆಸ್ಕಾಂ ವಿದ್ಯುತ್ ಪೋಲ್‌ಗಳು ಹಾಳಾಗಿರುವುದರಿಂದ ಎನ್‌ಡಿಆರ್‌ಎಫ್ ನಿಧಿ ಅಥವಾ ಬೇರಾವ ಮೂಲದಿಂದಲಾದರೂ ಹಣಕಾಸಿನ ನೆರವು ಒದಗಿಸುವಂತೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದರು.