ಶಿವಾನಂದ ಗೊಂಬಿ
ಹುಬ್ಬಳ್ಳಿ:ವಿಶೇಷ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಮುಗಿಯುತ್ತಾ ಬಂತು, ಸಚಿವ ಸಂಪುಟವೂ ವಿಸ್ತರಣೆಯಾಯ್ತು. ಇನ್ನಾದರೂ ರೈತರತ್ತ ಚಿತ್ತ ಹರಿಸಿ ಬರ ನಿರ್ವಹಣೆ ಕಾರ್ಯ ಸಮರೋಪಾದಿಯಲ್ಲಿ ನಡೆಯಲಿ!
ಇದು ರೈತರ ಒಕ್ಕೊರಲಿನ ಆಗ್ರಹ. ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಸರ್ಕಾರ ಅಧಿಕಾರಿಕ್ಕೆ ಬಂದು ಎರಡು ತಿಂಗಳಾಗುತ್ತಾ ಬಂದಿತು. ಶಾಸಕರು ನೂತನ ಸಂಪುಟದಲ್ಲಿ ಸಚಿವ ಸ್ಥಾನದ ಲಾಬಿಗಾಗಿ ಬೆಂಗಳೂರು, ದೆಹಲಿಗೆ ಪ್ರಯಾಣ ಬೆಳೆಸಿದರೆ ಹೊರತು ಮಳೆ ಕೊರತೆಯಿಂದ ನಲುಗಿದ ರೈತರತ್ತ ಚಿತ್ತ ಹರಿಸಲೇ ಇಲ್ಲ. ಇನ್ನೊಂದೆಡೆ ಅಧಿಕಾರಿಗಳು ಸಹ ಎಸ್‌ಐಆರ್‌ನಲ್ಲಿ ನಿರತರಾಗಿರುವುದರಿಂದ ರೈತರು ಗೋಳು ಆಲಿಸಲೇ ಇಲ್ಲ.ಮಳೆ ಕೊರತೆ:
ಈ ವರ್ಷ ರಾಜ್ಯದಲ್ಲಿ ಶೇ. 70ರಷ್ಟು ಮಳೆ ಕೊರತೆಯಾಗಿದೆ ಎಂಬ ಅಂಕಿ-ಅಂಶ ಸರ್ಕಾರದಿಂದಲೇ ಲಭ್ಯವಾಗಿದೆ. ಅತ್ತ ರೈತರು ಮುಂಗಾರು ಮಳೆ ನಂಬಿಕೊಂಡು ಬಿತ್ತಿದ್ದ ಬೆಳೆ ಮಳೆ ಇಲ್ಲದೆ ಭೂಮಿ ಬಿಟ್ಟು ಮೇಲೇಳುತ್ತಿಲ್ಲ. ಕೆರೆ-ಕಟ್ಟೆಗಳು ಬರಿದಾಗಿ ಬಾಯ್ತೆರೆದು ನಿಂತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರ ನೆರವಿಗೆ ಧಾವಿಸಿದ ಬೇಕಾದ ಜನಪ್ರತಿನಿಧಿಗಳು ದೂರ ಉಳಿದರು. ಇನ್ನು ಮೊದಲ ಹಂತದ ಸಂಪುಟ ರಚನೆಯಲ್ಲಿ ಸಚಿವರಾದ 13 ಜನರಿಗೆ ಎರಡ್ಮೂರು ಜಿಲ್ಲೆಗಳ ಜವಾಬ್ದಾರಿ ನೀಡಿದ್ದರೂ ಅವರು ಒಂದು ಬಾರಿ ಸಭೆ ನಡೆಸಿ ಹೋದವರು ಮತ್ತೆ ತಿರುಗಿ ನೋಡಲಿಲ್ಲ. ಇನ್ನು ಮುಖ್ಯಮಂತ್ರಿ ಸೇರಿದಂತೆ ಸಚಿವ ಆಕಾಂಕ್ಷಿಗಳು ಹೈಕಮಾಂಡ್ ಬಾಗಿಲು ತಟ್ಟುವುದರಲ್ಲಿಯೇ ಕಾಲಹರಣ ಮಾಡಿದರು. ಹೀಗಾಗಿ ಬರ ಪರಿಸ್ಥಿತಿ ಎದುರಾಗಿ ಎರಡು ತಿಂಗಳು ಕಳೆದರೂ ಬರಪೀಡಿತ ತಾಲೂಕುಗಳ ಘೋಷಣೆಯಾಗಿ ರೈತರಿಗೆ ಪರಿಹಾರವೂ ದೊರೆಯಲಿಲ್ಲ. ಇದೀಗ ಸಚಿವ ಸಂಪುಟ ವಿಸ್ತರಣೆ ಕಸರತ್ತು ಮುಗಿದಿದ್ದು ಇನ್ನಾದರೂ ರೈತರತ್ತ ಚಿತ್ತ ಹರಿಸುತ್ತಾರೋ ಅಥವಾ ತಮಗೆ ಸಚಿವ ಸ್ಥಾನ ದೊರಕಲಿಲ್ಲ ಎಂಬ ಅಸಮಾಧಾನದಲ್ಲಿಯೇ ಕಾಲ ಕಳೆಯುತ್ತಾರೆಯೋ ನೋಡಬೇಕು.
ಎಸ್‌ಐಆರ್ ನೆಪ:
ಜೂ.29ರಿಂದ ಆರಂಭವಾದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ತೊಡಗಿರುವ ಅಧಿಕಾರಿಗಳು ಸಹ ನೊಂದ ರೈತರ ಕಣ್ಣೀರು ಒರೆಸುವ ಕೈಗಳಾಗಿಲ್ಲ. ಆ. 8ರ ವರೆಗೆ ಎಸ್‌ಐಆರ್ ಪ್ರಕ್ರಿಯೆ ನಡೆಯಲಿದ್ದು ಆದಾದ ಬಳಿಕವಾದರು ಹೊಲಗಳತ್ತ ಹೆಜ್ಜೆ ಹಾಕುತ್ತಾರೆಯೇ ಎಂದು ರೈತರು ಎದುರು ನೋಡುತ್ತಿದ್ದಾರೆ.ಸಮರೋಪಾದಿಯಲ್ಲಿ ನಿರ್ವಹಿಸಿ:
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹಳ್ಳಿಗಳತ್ತ ಮುಖ ಮಾಡಿ ಸಮರೋಪಾದಿಯಲ್ಲಿ ಬರ ಪರಿಸ್ಥಿತಿ ನಿರ್ವಹಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ. ಹಣ ಕೊಡಿಸುವರೇ ಲಾಡ್95 ರೈತರಿಂದ ಬ್ಯಾಹಟ್ಟಿ ಕೃಷಿ ಪ್ರಾಥಮಿಕ ಸೊಸೈಟಿ (ಬೆಂಬಲ ಬೆಲೆ ಖರೀದಿ ಕೇಂದ್ರ) 997 ಕ್ವಿಂಟಲ್ ಹೆಸರು ಖರೀದಿಸಿ 9 ತಿಂಗಳವೇ ಗತಿಸಿದರೂ ಈ ವರೆಗೂ ದುಡ್ಡು ಕೊಡದ ಹಿನ್ನೆಲೆ 24 ದಿನಗಳಿಂದ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಈ ಹಿಂದೇ ಸಂತೋಷ ಲಾಡ್ ಅವರೇ ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗ ಪ್ರಕರಣ ತನಿಖೆಗೆ ಆದೇಶಿಸಿದ್ದರು. ಇದೀಗ ಮತ್ತೆ ಅವರೇ ಸಚಿವರಾಗಿದ್ದಾರೆ. ಸೊಸೈಟಿಯದ್ದೇ ತಪ್ಪು ಎಂದು ವರದಿ ಕೂಡ ಸಲ್ಲಿಕೆಯಾಗಿದೆ. ಇದೀಗ ರೈತರಿಗೆ ದುಡ್ಡು ಕೊಡಿಸುವ ಜವಾಬ್ದಾರಿ ಲಾಡ್ ಸಾಹೇಬ್ರ ಮೇಲಿದೆ. ಸಚಿವ ಸಂಪುಟ ವಿಸ್ತರಣೆ, ಎಸ್‌ಐಆರ್ ನೆಪದಿಂದ ಬರ ಪರಿಸ್ಥಿತಿ, ರೈತರ ಗೋಳು ಕೇಳುವವರೇ ಇಲ್ಲದಂತಾಗಿತ್ತು. ಇದೀಗ ಪೂರ್ಣ ಪ್ರಮಾಣದಲ್ಲಿ ಸಂಪುಟ ವಿಸ್ತರಣೆಯಾಗಿದೆ. ಎಸ್‌ಐಆರ್ ಕೂಡ ಮುಕ್ತಾಯದ ಹಂತಕ್ಕೆ ಬಂದಿದೆ. ಇನ್ನಾದರೂ ಬರ ಪರಿಸ್ಥಿತಿ ನಿಭಾಯಿಸಲು ಸಮರೋಪಾದಿಯಲ್ಲಿ ಸರ್ಕಾರ ಕೆಲಸ ಮಾಡಲಿ.
ಕಲ್ಮೇಶ್ವರ ಹುಲ್ಲತ್ತಿ, ರೈತ ಸುಳ್ಳ