ಬರ ಪರಿಹಾರ: ಕೇಂದ್ರದ ನಿರ್ಲಕ್ಷ್ಯ ಧೋರಣೆಗೆ ಸಿಪಿಎಂ ಆಕ್ಷೇಪ

| Published : Mar 15 2024, 01:17 AM IST

ಬರ ಪರಿಹಾರ: ಕೇಂದ್ರದ ನಿರ್ಲಕ್ಷ್ಯ ಧೋರಣೆಗೆ ಸಿಪಿಎಂ ಆಕ್ಷೇಪ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ರಾಜ್ಯದ ಭೀಕರ ಬರಗಾಲವನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿ, ಕೂಡಲೇ ಅಗತ್ಯ ಹಣಕಾಸಿನ ನೆರವು ನೀಡಬೇಕು ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ ಒತ್ತಾಯಿಸಿದರು.

ದೊಡ್ಡಬಳ್ಳಾಪುರ: ರಾಜ್ಯದ ಭೀಕರ ಬರಗಾಲವನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿ, ಕೂಡಲೇ ಅಗತ್ಯ ಹಣಕಾಸಿನ ನೆರವು ನೀಡಬೇಕು ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ ಒತ್ತಾಯಿಸಿದರು.

ತಾಲೂಕಿನ ದೊಡ್ಡಬೆಳವಂಗಲ ನಾಡಕಚೇರಿ ಬಳಿ ಸಿಪಿಎಂ ಪಕ್ಷದ ವತಿಯಿಂದ ಸಾಂಕೇತಿಕ ಧರಣಿ ನಡೆಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಅವರು ಮಾತನಾಡಿದರು.

ಶತಮಾನದಲ್ಲಿಯೇ ಕಂಡರಿಯದ ಭೀಕರ ಬರಗಾಲ ಇಡೀ ಕರ್ನಾಟಕವನ್ನು ಆವರಿಸಿಕೊಂಡಿದೆ. ಒಂದು ಲಕ್ಷ ಕೋಟಿ ರುಗಳಿಗೂ ಹೆಚ್ಚಿನ ಮೌಲ್ಯದ ಬೆಳೆ ನಷ್ಟವಾಗಿದೆ. ಕೈಯಲ್ಲಿ ಇದ್ದ ಬಂಡವಾಳವನ್ನು ಭೂಮಿಗೆ ಹಾಕಿ ಬೆಳೆ ನಷ್ಟದಿಂದ ರೈತರು ಕಂಗಲಾಗಿದ್ದಾರೆ. ಕೃಷಿ ಕೂಲಿಕಾರರು, ಬಡವರು, ರೈತರು ಕೆಲಸಗಳಿಲ್ಲದೆ ಹಸಿವಿನಿಂದ ನರಳವಂತಾಗಿದೆ. ಜಾನುವಾರುಗಳಿಗೆ ಮೇವು, ಕುಡಿಯುವ ನೀರಿಲ್ಲದೆ ತೀವ್ರತರ ಸಂಕಷ್ಟವನ್ನು ಅನುಭವಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಬರಗಾಲದ ಅಧ್ಯಯನಕ್ಕೆಂದು ಒಕ್ಕೂಟ ಸರ್ಕಾರದ ತಂಡಗಳು ರಾಜ್ಯಕ್ಕೆ ಬಂದು ಹೋಗಿ, ತಿಂಗಳುಗಳು ಕಳೆದಿದೆ. ಕೇಂದ್ರ ಸರ್ಕಾರ ಇದುವರೆಗೂ ಬಿಡಿಗಾಸು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದ, ಅವರು, ಬಿಸಿಲು ಏರುತ್ತಾ ಏರುತ್ತಾ ಬರಗಾಲದ ಉಗ್ರ ಸ್ವರೂಪ ಮತ್ತಷ್ಟು ಅನಾವರಣಗೊಳ್ಳುತ್ತಿದೆ ಎಂದರು.

ಪಕ್ಷದ ತಾಲೂಕು ಪ್ರಧಾನ ಕಾರ್ಯದರ್ಶಿ ರುದ್ರಾರಾಧ್ಯ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ, ಒಂದಲ್ಲ ಹಲವು ಬಾರಿ ಒಕ್ಕೂಟ ಸರ್ಕಾರದಿಂದ ನೆರವನ್ನು ಕೇಳಿದರೂ ಒಕ್ಕೂಟ ಸರ್ಕಾರ ದಿವ್ಯ ನಿರ್ಲಕ್ಷತೆಯನ್ನು ವಹಿಸಿದೆ. ಆರಂಭದಲ್ಲಿಯೇ ರಾಜ್ಯ ಸರ್ಕಾರ, ಸುಮಾರು 31,000 ಕೋಟಿ ರು.ಗಳಷ್ಟು ಬೆಳೆ ನಷ್ಟವಾಗಿದೆ ಎಂದು ವರದಿಯನ್ನು ನೀಡಿ ಪರಿಹಾರವನ್ನು ಕೇಳಿತ್ತು. ಆ ನಂತರ ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿ ನಿಯಮಗಳಂತೆ ಕೂಡಲೇ 18,171 ಕೋಟಿ ರು.ಗಳನ್ನು ಬಿಡುಗಡೆ ಮಾಡಬೇಕೆಂದು ಆಗ್ರಹ ಮಾಡಿತು. ಆದರೆ ಒಕ್ಕೂಟ ಸರ್ಕಾರ ಈ ಬಗ್ಗೆ ತಲೆಕೆಡಿಸಿಕೊಳ್ಳದೇ ಮುಂದಿನ ಲೋಕಸಭೆಯ ಚುನಾವಣೆಗಳನ್ನು ಗೆಲ್ಲಲು ಅಡ್ಡ ದಾರಿಗಳನ್ನು ಹಿಡಿಯುವುದರಲ್ಲಿ ತೊಡಗಿದೆ ಎಂದು ಆರೋಪಿಸಿದರು.

ವಕೀಲರಾದ ರೇಣುಕಾರಾಧ್ಯ ಮಾತನಾಡಿ, ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಲೋಕಸಭಾ ಸದಸ್ಯರು, ಸಚಿವರು ರಾಜ್ಯದ ಬರಗಾಲ ನಿರ್ವಹಣೆಗೆ ಅಗತ್ಯವಿರುವ ಹಾಗೂ ರಾಜ್ಯಕ್ಕೆ ನ್ಯಾಯಯುತವಾಗಿ ನೀಡಬೇಕಿದ್ದ ಜಿ.ಎಸ್.ಟಿ ಮತ್ತಿತರ ತೆರಿಗೆಗಳಲ್ಲಿ ಪಾಲನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು ಪ್ರತಿಭಟನೆ ಮಾಡಿದರೆ ಇದು ಸರಿಯಿಲ್ಲವೆಂದು ಟೀಕೆ ಮಾಡುತ್ತಾ ಸಂವಿಧಾನ ಬದ್ಧ ಒಕ್ಕೂಟ ವ್ಯವಸ್ಥೆಯನ್ನು ಹಾಳುಮಾಡುವ ಪ್ರಯತ್ನಗಳು ನಡೆಸುತ್ತಿದ್ದಾರೆ ಎಂದರು.

ಕಾರ್ಮಿಕ ಮುಖಂಡ ಪಿ.ಎ.ವೆಂಕಟೇಶ್, ಮಾತನಾಡಿ 8 ಹಕ್ಕೊತ್ತಾಯಗಳ ವಿವರವನ್ನು ಮಂಡಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ರಘುಕುಮಾರ್, ಚೌಡಪ್ಪ, ಮಂಜುನಾಥ್, ಸಿಎಚ್.ರಾಮಕೃಷ್ಣ, ವಿಜಯ್ ಕುಮಾರ್, ಪ್ರಾಂತ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

14ಕೆಡಿಬಿಪಿ5- ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲದಲ್ಲಿ ಸಿಪಿಎಂ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹಕ್ಕೊತ್ತಾಯದ ಮನವಿ ಸಲ್ಲಿಕೆ, ಸಾಂಕೇತಿಕ ಧರಣಿ ನಡೆಯಿತು.