ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ರಾಜ್ಯ ಸಚಿವ ಸಂಪುಟದ ಸಚಿವರು ಸಿಎಂ ಡಿ.ಕೆ.ಶಿವಕುಮಾರ್ ಅವರ ಸೂಚನೆ ಮೇರೆಗೆ ರಾಜ್ಯದ ವಿವಿಧೆಡೆ ಬರ ಅಧ್ಯಯನ ಪ್ರವಾಸ ಆರಂಭಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ರಾಜ್ಯ ಸಚಿವ ಸಂಪುಟದ ಸಚಿವರು ಸಿಎಂ ಡಿ.ಕೆ.ಶಿವಕುಮಾರ್ ಅವರ ಸೂಚನೆ ಮೇರೆಗೆ ರಾಜ್ಯದ ವಿವಿಧೆಡೆ ಬರ ಅಧ್ಯಯನ ಪ್ರವಾಸ ಆರಂಭಿಸಿದ್ದಾರೆ.ಸಚಿವ ವಿಜಯಾನಂದ ಕಾಶಪ್ಪನವರ ಅವರು ಬಾಗಲಕೋಟೆ, ಹಾಸನದಲ್ಲಿ ಕೆ.ಎಂ.ಶಿವಲಿಂಗೇಗೌಡ, ಭೈರತಿ ಸುರೇಶ್ ಚಿಕ್ಕಬಳ್ಳಾಪುರದಲ್ಲಿ, ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಸಂತೋಷ ಲಾಡ್, ಟಿ.ರಘುಮೂರ್ತಿ ಚಿತ್ರದುರ್ಗದಲ್ಲಿ, ಸಚಿವ ಶಿವರಾಜ ತಂಗಡಗಿಯವರು ಕೊಪ್ಪಳದಲ್ಲಿ ಬರ ಪರಿಶೀಲನೆ ನಡೆಸಿದರು.ಸಚಿವರಾಗುತ್ತಿದ್ದಂತೆ ಅಖಾಡಕ್ಕಿಳಿದ ಸಚಿವ ವಿಜಯಾನಂದ ಕಾಶಪ್ಪನವರ ಅವರು ಬುಧವಾರ ಬಾಗಲಕೋಟೆ ಜಿಲ್ಲೆಯ ವಿವಿಧೆಡೆ ಬರ ವೀಕ್ಷಣೆ ನಡೆಸಿದರು. ಜಿಲ್ಲೆಯ ಇಳಕಲ್ ತಾಲೂಕಿನ ಹೆರೂರ, ಅಮರಾವತಿ, ಹುನಗುಂದ ತಾಲೂಕಿನ ಹಿರೆಬಾದವಾಡಗಿ, ರಕ್ಕಸಗಿ, ಕಮತಗಿ, ಗುಳೇದಗುಡ್ಡ ತಾಲೂಕಿನ ಇಂಜಿನವಾರಿ, ಬೂದನಗಡ, ಬಾಗಲಕೋಟೆ ತಾಲೂಕಿನ ಶಿರೂರ, ಬೇವಿನಮಟ್ಟಿ ಗ್ರಾಮಗಳಲ್ಲಿ ಬರ ವೀಕ್ಷಣೆ ನಡೆಸಿದರು. ರೈತರ ಜಮೀನುಗಳಿಗೆ ಭೇಟಿ ನೀಡಿ, ಹಾನಿಗೀಡಾದ ಬೆಳೆಗಳ ಪರಿಶೀಲನೆ ನಡೆಸಿದರು. ಈ ವೇಳೆ, ಜಿಲ್ಲಾಧಿಕಾರಿ, ಕೃಷಿ ಇಲಾಖೆ ಅಧಿಕಾರಿಗಳು ಸೇರಿ ಜಿಲ್ಲೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಚಿವರಿಗೆ ಸಾಥ್ ನೀಡಿದರು.
ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಹಾಸನ ಜಿಲ್ಲೆ ಚನ್ನರಾಯಪಟ್ಟಣಕ್ಕೆ ಆಗಮಿಸಿದ ಸಚಿವ ಕೆ.ಎಂ.ಶಿವಲಿಂಗೇಗೌಡ, ಚನ್ನರಾಯಪಟ್ಟಣ ತಾಲೂಕಿನ ಕಲ್ಲಹಳ್ಳಿ, ಕಿರಿಸಾವೆ, ಬೂಕನಬೆಟ್ಟ ಸುತ್ತಮುತ್ತಲ ಹಳ್ಳಿಗಳಲ್ಲಿ ಬರ ಅಧ್ಯಯನ ನಡೆಸಿದರು. ಶ್ರವಣಬೆಳಗೊಳ ಶಾಸಕ ಸಿ.ಎನ್ ಬಾಲಕೃಷ್ಣ, ಡಿಸಿ ಲತಾಕುಮಾರಿ, ಕೃಷಿ, ತೋಟಗಾರಿಕಾ ಅಧಿಕಾರಿಗಳು ಸಾಥ್ ನೀಡಿದರು.ಇನ್ನು ಸಚಿವ ಶಿವರಾಜ ತಂಗಡಗಿಯವರು ಕೊಪ್ಪಳ ಜಿಲ್ಲೆಯ ಗಂಗಾವತಿ, ಕನಕಗಿರಿ ಭಾಗದಲ್ಲಿ ಬರ ವೀಕ್ಷಣೆ ಮಾಡಿ, ವಸ್ತುಸ್ಥಿತಿಯ ಅಧ್ಯಯನ ನಡೆಸಿದರು.
ಸಚಿವ ಭೈರತಿ ಸುರೇಶ್ ಅವರು ಶಾಸಕ ಪ್ರದೀಪ್ ಈಶ್ವರ್, ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳೊಂದಿಗೆ ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ ಗ್ರಾಮದ ಹೊಲಗಳಿಗೆ ಭೇಟಿ ನೀಡಿ ಮಳೆಯ ಕೊರತೆಯಿಂದ ಒಣಗಿ ಹೋಗಿರುವ ಬೆಳೆಗಳನ್ನು ಪರಿಶೀಲಿಸಿದರು.ಧಾರವಾಡ ಉಸ್ತುವಾರಿ ಸಚಿವ ಸಂತೋಷ ಲಾಡ್, ಹುಬ್ಬಳ್ಳಿ ತಾಲೂಕಿನ ವಿವಿಧೆಡೆ ಬರ ಅಧ್ಯಯನ ನಡೆಸಿದರು. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿ, ಜಿಲ್ಲೆಯಲ್ಲಿ ವಾಡಿಕೆ ಮಳೆಯಾಗದೆ ಬೆಳೆಗಳು ನಿರೀಕ್ಷಿತ ಬೆಳವಣಿಗೆ ಕಂಡಿಲ್ಲ. ಆದ್ದರಿಂದ ಈ ಬಗ್ಗೆ ಸರ್ವೇ ನಂಬರ್ ಪ್ರಕಾರ ಸಮೀಕ್ಷೆ ನಡೆಸಿದ ನಂತರ ಬೆಳೆಹಾನಿ ಪರಿಹಾರ ಮೊತ್ತವನ್ನು ನಿರ್ಧರಿಸಲಾಗುವುದು ಎಂದರು.
ಸಚಿವ ಟಿ.ರಘುಮೂರ್ತಿ ಅವರು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವಿವಿಧ ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಬರ ವೀಕ್ಷಣೆ ಮಾಡಿದರು. ರೈತರ ಅಳಲು ಆಲಿಸಿದರು. ಹಿರಿಯೂರು ತಾಲೂಕಿನ ಆನೆಸಿದ್ರಿ ಗ್ರಾಮದ ವ್ಯಾಪ್ತಿಯಲ್ಲಿ ರೈತ ಜಯರಾಮಯ್ಯ ಅವರ ಜಮೀನಿಗೆ ಭೇಟಿ ನೀಡಿ, ಬೆಳೆ ಹಾಗೂ ಕೃಷಿ ಭೂಮಿಯನ್ನು ಪರಿಶೀಲಿಸಿದರು.ಬಳಿಕ, ಚಿತ್ರದುರ್ಗದ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಪ್ರಕೃತಿ ವಿಕೋಪ ನಿರ್ವಹಣಾ ಸಭೆ ನಡೆಸಿದರು. ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇದ್ದು ಅಧಿಕಾರಿಗಳು ಬರದ ತೊಂದರೆಯ ಖಚಿತ ಮಾಹಿತಿ ಒದಗಿಸಬೇಕು. ಇದು ನಾಮ್ಕೆವಾಸ್ತೆ ಪ್ರಕೃತಿ ವಿಕೋಪ ನಿರ್ವಹಣೆ ಸಭೆ ಆಗಬಾರದು. ಜನರ ನಿರೀಕ್ಷೆ ಹೆಚ್ಚಿದ್ದು ಅವರಿಗೆ ಸಿಗಬೇಕಾದ ಸೌಲಭ್ಯ ದೊರಕಿಸಿಕೊಡಲು ಪ್ರಾಮಾಣಿಕವಾಗಿ ಅಧಿಕಾರಿಗಳು ಕೆಲಸ ಮಾಡಬೇಕು ಇಲ್ಲವೇ ನಿಮ್ಮ ದಾರಿ ನೀವು ನೋಡಿಕೊಂಡು ಹೊರಟು ಬಿಡಬೇಕು ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.