ಇಲ್ಲಿನ ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ನ ಉಡುಪಿ ತಾಲೂಕು ಘಟಕದ ಆಶ್ರಯದಲ್ಲಿ ಶಾಲೆಯ ಅಡಿಟೋರಿಯಂನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬ್ರಹ್ಮಾವರ: ಇಲ್ಲಿನ ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ನ ಉಡುಪಿ ತಾಲೂಕು ಘಟಕದ ಆಶ್ರಯದಲ್ಲಿ ಶಾಲೆಯ ಅಡಿಟೋರಿಯಂನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಉತ್ತಮ ಭವಿಷ್ಯದ ಕನಸಿಗಿಂತ ಮಿಗಿಲಾದದ್ದು ಯಾವುದು ಇಲ್ಲ. ಮಕ್ಕಳೆಲ್ಲರೂ ಮಾದಕ ವಸ್ತುವಿನಿಂದ ದೂರವಿದ್ದು ಸದೃಢ ಹಾಗೂ ಸ್ವಸ್ಥ ಸಮಾಜವನ್ನು ಕಟ್ಟಬೇಕು ಎಂದು ಕರೆ ನೀಡಿದರು.

ಉಡುಪಿ ಜನಜಾಗೃತಿ ವೇದಿಕೆಯ ಅಧ್ಯಕ್ಷ ರಾಜು ಪೂಜಾರಿ ಅವರು ಅಧ್ಯಕ್ಷತೆ ವಹಿಸಿದ್ದು, ಜಿ. ಎಂ. ಸಂಸ್ಥೆಯ ಮಕ್ಕಳಲ್ಲಿ ಸಂಸ್ಕಾರವು ಎದ್ದು ಕಾಣುತ್ತಿದೆ. ನಮ್ಮ ದೇಶದ ಭವಿಷ್ಯವು ಇಂತಹ ಯುವಜನಾಂಗದ ಮೇಲೆ ನಿಂತಿದೆ ಎಂದರು. ಜನಜಾಗೃತಿ ವೇದಿಕೆ ಯೋಜನಾಧಿಕಾರಿ ಗಣೇಶ್ ಆಚಾರ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ನಂತರ ಆನ್‌ಲೈನ್ ಸೆಷನ್‌ನಲ್ಲಿ ವಿದ್ಯಾರ್ಥಿಗಳು ಮಾದಕ ದ್ರವ್ಯ, ಡ್ರಗ್ಸ್‌ನ ಬಳಕೆ, ಆರೋಗ್ಯದ ಮೇಲೆ ಅದರ ದುಷ್ಪರಿಣಾಮಗಳು, ಮಾದಕ ವಸ್ತುವಿನ ಬಳಕೆಯ ಅಪರಾಧ, ಅದರ ಮೇಲೆ ಕೈಗೊಳ್ಳಬಹುದಾದ ಕಾನೂನು ಕ್ರಮಗಳ ಕುರಿತು ಮಾಹಿತಿಯನ್ನು ಪಡೆದರು. ಶಾಲಾ ವಿದ್ಯಾರ್ಥಿಗಳು ಮಾದಕ ವಸ್ತುವನ್ನು ಬಳಸದಂತೆ ಪ್ರತಿಜ್ಞೆಯನ್ನು ಮಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲ ಜಾರ್ಜ್ ಕುರಿಯನ್, ಉಡುಪಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕ್ಷೇತ್ರ ಮೇಲ್ವಿಚಾರಕಿ ನಾಗರತ್ನ, ಸಂಸ್ಥೆಯ ಶಿಕ್ಷಕವೃಂದ ಹಾಗೂ ವಿದ್ಯಾರ್ಥಿವೃಂದ ಉಪಸ್ಥಿತರಿದ್ದರು.