ಹೊಸ ವರ್ಷ ಸನಿಹವಾಗುತ್ತಿರುವ ಬೆನ್ನಲ್ಲೇ ಡ್ರಗ್ಸ್ ಮಾಫಿಯಾ ವಿರುದ್ಧ ಸಿಸಿಬಿ ಕಾರ್ಯಾಚರಣೆ ಭರ್ಜರಿಯಾಗಿ ಸಾಗಿದ್ದು, ಇಬ್ಬರು ವಿದೇಶಿ ಪೆಡ್ಲರ್‌ಗಳನ್ನು ಸೆರೆ ಹಿಡಿದು ಮತ್ತೆ ನಗರದಲ್ಲಿ ₹28.75 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ಜಪ್ತಿ ಮಾಡಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಹೊಸ ವರ್ಷ ಸನಿಹವಾಗುತ್ತಿರುವ ಬೆನ್ನಲ್ಲೇ ಡ್ರಗ್ಸ್ ಮಾಫಿಯಾ ವಿರುದ್ಧ ಸಿಸಿಬಿ ಕಾರ್ಯಾಚರಣೆ ಭರ್ಜರಿಯಾಗಿ ಸಾಗಿದ್ದು, ಇಬ್ಬರು ವಿದೇಶಿ ಪೆಡ್ಲರ್‌ಗಳನ್ನು ಸೆರೆ ಹಿಡಿದು ಮತ್ತೆ ನಗರದಲ್ಲಿ ₹28.75 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ಜಪ್ತಿ ಮಾಡಿದೆ.ತಾಂಜೇನಿಯಾದ ನ್ಯಾನ್ಸಿ ಓಮಾರಿ ಹಾಗೂ ಇಮ್ಯಾನುಯೆಲ್ ಅರಿಜ್ನೆ ಬಂಧಿತರಾಗಿದ್ದು, ತಪ್ಪಿಸಿಕೊಂಡಿರುವ ಇತರೆ ಆರೋಪಿಗಳಿಗೆ ತನಿಖೆ ಮುಂದುವರೆದಿದೆ. ಆರೋಪಿಗಳಿಂದ 10.3 ಕೆ.ಜಿ. ಎಡಿಂಎಂಎ ಕ್ರಿಸ್ಟೆಲ್ ಹಾಗೂ 8 ಕೆಜಿ ಹೈಡ್ರೋ ಗಾಂಜಾ ಜಪ್ತಿಯಾಗಿದೆ. ಕೆಂಪೇಗೌಡ ನಗರ, ಸಿದ್ದಾಪುರ ಹಾಗೂ ಸಂಪಿಗೆಹಳ್ಳಿ ಠಾಣೆಗಳ ವ್ಯಾಪ್ತಿಯಲ್ಲಿ ಈ ದಾಳಿ ನಡೆದಿದೆ. ಡ್ರಗ್ಸ್ ಮಾರಾಟ ಜಾಲದ ವಿರುದ್ಧ ಸಿಸಿಬಿ ಡಿಸಿಪಿ-2 ರಾಜಾ ಇಮಾಮ್ ಕಾಸಿಮ್ ಸಾರಥ್ಯದಲ್ಲಿ ಮಾದಕ ವಸ್ತು ನಿಗ್ರಹ ದಳದ ಇನ್ಸ್‌ಪೆಕ್ಟರ್‌ಗಳಾದ ಕೆ.ಲಕ್ಷ್ಮೀನಾರಾಯಣ್, ವಿ.ಡಿ.ಶಿವರಾಜು ಹಾಗೂ ಎ.ಕೆ.ರಕ್ಷಿತ್ ಒಳಗೊಂಡ ತಂಡವು ಕಾರ್ಯಾಚರಣೆ ನಡೆಸಿದೆ ಎಂದು ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಕೇಶ ವಿನ್ಯಾಸಕಿ ಬಳಿ ಡ್ರಗ್ಸ್:ಡ್ರಗ್ಸ್ ದಂಧೆ ಬಗ್ಗೆ ಖಚಿತ ಮಾಹಿತಿ ಪಡೆದು ಸಂಪಿಗೆಹಳ್ಳಿಯ ಪಿ ಅಂಡ್ ಟಿ ಲೇಔಟ್‌ನಲ್ಲಿ ನ್ಯಾನ್ಸಿ ಮನೆ ಮೇಲೆ ಸಿಸಿಬಿ ದಾಳಿ ನಡೆಸಿತ್ತು. ಈ ವೇಳೆ ಆಕೆಯ ಮನೆಯಲ್ಲಿ 18.50 ಕೋಟಿ ರು ಮೌಲ್ಯದ 9.254 ಕೆಜಿ ಎಡಿಎಂಎ ಕ್ರಿಸ್ಟೆಲ್ ಜಪ್ತಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎರಡು ವರ್ಷಗಳ ಹಿಂದೆ ಪ್ರವಾಸದ ವೀಸಾ ಪಡೆದು ಭಾರತಕ್ಕೆ ತಾಂಜೇನಿಯಾ ಮೂಲದ ನ್ಯಾನ್ಸಿ ಬಂದಿದ್ದಳು. ಆನಂತರ ನಗರಕ್ಕೆ ಬಂದು ನೆಲೆಸಿದ್ದ ಆಕೆ, ಮೊದಲು ಕೇಶ ವಿನ್ಯಾಸಕಿಯಾಗಿ ಕೆಲಸ ಆರಂಭಿಸಿದ್ದಳು. ಆದರೆ ಹಣದಾಣಸೆಗೆ ಆಕೆ ಡ್ರಗ್ಸ್ ದಂಧೆಗಿಳಿದಿದ್ದಳು. ದೆಹಲಿಯ ಡ್ರಗ್ಸ್ ಮಾರಾಟ ಜಾಲದಿಂದ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸಿ ತಂದು ಬಳಿಕ ದುಬಾರಿ ಬೆಲೆಗೆ ನಗರದಲ್ಲಿ ಆಕೆ ಮಾರಾಟ ಮಾಡುತ್ತಿದ್ದಳು. ಈಕೆಯ ಡ್ರಗ್ಸ್ ದಂಧೆ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ದಾಳಿ ನಡೆಸಿದೆ.ಲಾಲ್‌ಬಾಗ್ ಗೇಟ್‌ನಲ್ಲಿಯೂ ಗಾಂಜಾ:
ಲಾಲ್ ಬಾಗ್ ದಕ್ಷಿಣ ಪ್ರವೇಶ ದ್ವಾರದ ಬಳಿ ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದಾಗ ನೈಜೀರಿಯಾ ಮೂಲದ ಇಮ್ಯಾನುಯೆಲ್ ಸಿಸಿಬಿ ಬಲೆಗೆ ಬಿದ್ದಿದ್ದಾನೆ. 2021ರಲ್ಲಿ ಬ್ಯುಸಿನೆಸ್ ವೀಸಾದಡಿ ಭಾರತಕ್ಕೆ ಇಮ್ಯಾನುಯೆಲ್, ಮರು ವರ್ಷ ನಗರಕ್ಕೆ ಬಂದು ನೆಲೆಸಿದ್ದ. ಗೋವಾ, ದೆಹಲಿ ಹಾಗೂ ಸ್ಥಳೀಯ ವಿದೇಶಿ ಡ್ರಗ್ಸ್ ಪೆಡ್ಲರ್‌ಗಳ ಜತೆ ಸಂಪರ್ಕ ಸಾಧಿಸಿದ್ದ ಆತ, ಸುಲಭವಾಗಿ ಹಣ ಸಂದಾಪನೆಗೆ ಡ್ರಗ್ಸ್ ಮಾರಾಟ ಶುರು ಮಾಡಿದ್ದ. ಕಳೆದ ವರ್ಷ ಆತನನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದರೆ ಜಾಮೀನು ಪಡೆದು ಹೊರಬಂದು ಆತ ಮತ್ತೆ ತನ್ನ ದಂಧೆ ಮುಂದುವರೆಸಿದ್ದ. ಇತ್ತೀಚಿಗೆ ಲಾಲ್ ಬಾಗ್ ಬಳಿ ವಿದೇಶಿ ಪೆಡ್ಲರ್ ಡ್ರಗ್ಸ್ ಮಾರಾಟದ ಬಗ್ಗೆ ಇನ್ಸ್‌ಪೆಕ್ಟರ್ ಮಂಜಪ್ಪ ಖಚಿತ ಮಾಹಿತಿ ಸಂಗ್ರಹಿಸಿದ್ದರು. ಈ ಸುಳಿವು ಆಧರಿಸಿ ಸಿಸಿಬಿ ದಾಳಿ ನಡೆಸಿದಾಗ ಆತನ ಬಳಿ 2.25 ಕೋಟಿ ರು ಮೌಲ್ಯದ 1.155 ಕೆಜಿ ಎಂಡಿಎಂಎ ಸಿಕ್ಕಿದೆ.ಚಹಾ ಡಬ್ಬಿಯಲ್ಲಿ ಡ್ರಗ್ಸ್ ಪಾರ್ಸಲ್
ವಿದೇಶದಿಂದ ಚಹಾ ಡಬ್ಬಿಯಲ್ಲಿ ಅಡಗಿಸಿಟ್ಟು ಕಳುಹಿಸಿದ್ದ ₹8 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ಸಿಸಿಬಿ ಜಪ್ತಿ ಮಾಡಿದೆ. ಕಸ್ಟಮ್ಸ್ ಅಧಿಕಾರಿಗಳ ಮಾಹಿತಿ ಮೇರೆಗೆ ಚಾಮರಾಜಪೇಟೆಯ ವಿದೇಶಿ ಅಂಚೆ ಕಚೇರಿ ಮೇಲೆ ಮತ್ತೆ ಸಿಸಿಬಿ ದಾಳಿ ನಡೆಸಿತು. ಈ ವೇಳೆ ಚಹಾ ಡಬ್ಬಿಗಳಲ್ಲಿ ಪ್ಯಾಕ್ ಮಾಡಿ ವಿದೇಶದಿಂದ ಬಂದಿದ್ದ 8 ಕೋಟಿ ರು. ಮೌಲ್ಯದ 8 ಕೆಜಿ ಹೈಡ್ರೋ ಗಾಂಜಾವನ್ನು ಜಪ್ತಿಯಾಗಿದೆ. ಈ ಡ್ರಗ್ಸ್ ಪಡೆಯಲು ಪೆಡ್ಲರ್ ನಕಲಿ ವಿಳಾಸ ಕೊಟ್ಟಿರುವುದು ಪತ್ತೆಯಾಗಿದೆ. ಈ ಡ್ರಗ್ಸ್ ತರಿಸಿಕೊಂಡ ಆರೋಪಿಗಳಿಗೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.1 ತಿಂಗಳ ಅವಧಿಯಲ್ಲಿ
₹142 ಕೋಟಿ ಡ್ರಗ್ಸ್ ಜಪ್ತಿಕಳೆದ 11 ತಿಂಗಳ ಅವಧಿಯಲ್ಲಿ ನಗರದಲ್ಲಿ ಸುಮಾರು 142 ಕೋಟಿ ರು ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಡ್ರಗ್ಸ್ ಮಾರಾಟ ಜಾಲದ ಮೇಲೆ ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹೊಸ ವರ್ಷಾಚರಣೆ ಪಾರ್ಟಿಗಳ ಬಗ್ಗೆ ಸಹ ಮಾಹಿತಿ ಪಡೆದು ನಿಗಾವಹಿಸಲಾಗಿದೆ. ಡ್ರಗ್ಸ್ ಮಾರಾಟ ಜಾಲದ ವಿರುದ್ಧ ಉತ್ತಮ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರಿಗೆ ₹50 ಸಾವಿರ ನಗದು ಬಹುಮಾನ ನೀಡಲಾಗುತ್ತದೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಮತ್ತೆ ಗಾಂಜಾ ಜಪ್ತಿ:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೆ 1.71 ಕೋಟಿ ರು. ಮೌಲ್ಯದ ಹೈಡ್ರೋ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮಲೇಷಿಯಾದ ಕೌಲಾಂಪುರದಿಂದ ಸೋಮವಾರ ರಾತ್ರಿ ಬಂದ ಪ್ರಯಾಣಿಕನನ್ನು ಬಂಧಿಸಿದ ಕಸ್ಟಮ್ಸ್ ಅಧಿಕಾರಿಗಳು, ಆತನ ಬಳಿ 1.71 ಕೋಟಿ ರು. ಮೌಲ್ಯದ 4.9 ಕೆಜಿ ಹೈಡ್ರೋ ಗಾಂಜಾ ಜಪ್ತಿ ಮಾಡಿದ್ದಾರೆ.