- ಅಂಬೇಡ್ಕರ್ ಪುತ್ಥಳಿಗೆ ಅವಮಾನ ವಿರುದ್ಧ ಕ್ರಮವಾಗಲಿ: ಜಿಗಳಿ ಹಾಲೇಶ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದ ವಿವಿಧೆಡೆ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ನಾಮಫಲಕಗಳಿಗೆ ಅವಮಾನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅತ್ಯಾಚಾರಿಗಳಿಗೆ ಎನ್‌ಕೌಂಟರ್ ಇಲ್ಲವೇ ಗಲ್ಲುಶಿಕ್ಷೆ ವಿಧಿಸುವ ಕಾನೂನು ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜು.24ರಂದು ನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಾಮಾಜಿಕ ನ್ಯಾಯಕ್ಕಾಗಿ) ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಡಿಎಸ್‌ಎಸ್ ಜಿಲ್ಲಾಧ್ಯಕ್ಷ ಜಿಗಳಿ ಹಾಲೇಶ ಮಾಹಿತಿ ನೀಡಿ, ಅಂದು ಬೆಳಗ್ಗೆ 11 ಗಂಟೆಗೆ ಡಾ.ಅಂಬೇಡ್ಕರ್ ವೃತ್ತದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಲಿದೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಅರ್ಪಿಸಲಾಗುವುದು. ಅದೇ ಮಧ್ಯಾಹ್ನ 2 ಗಂಟೆಗೆ ಹಳೇ ಪ್ರವಾಸಿ ಮಂದಿರದಲ್ಲಿ ಸಮಿತಿ ಸಭೆ ನಡೆಸಿ, ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸಲಾಗುವುದು ಎಂದರು.

ಕರ್ನಾಟಕದ ವಿವಿಧೆಡೆ ಕೆಲ ದುಷ್ಕರ್ಮಿಗಳು ಅಂಬೇಡ್ಕರ್ ಪ್ರತಿಮೆ, ನಾಮಫಲಕಗಳಿಗೆ ಅಪಮಾನಿಸಿದ ವರದಿಗಳು ಬರುತ್ತಿವೆ. ಅಂತಹ ದುಷ್ಕರ್ಮಿಗಳನ್ನು ಪತ್ತೆ ಮಾಡಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅತ್ಯಾಚಾರಿಗಳಿಗೆ ಯಾವುದೇ ಜಾತಿ, ಪಕ್ಷ, ಸಮುದಾಯಗಳ ಬೆಂಬಲವಿದ್ದರೂ ಲೆಕ್ಕಿಸದೇ ಎನ್‌ಕೌಂಟರ್ ಅಥವಾ ಗಲ್ಲುಶಿಕ್ಷೆ ವಿಧಿಸುವ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.


ಈಚೆಗೆ ಬಿ.ಸಿ. ರೋಡ್‌ನಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಗೆ ಗಲ್ಲುಶಿಕ್ಷೆ ವಿಧಿಸುವ ಮೂಲಕ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಅತ್ಯಾಚಾರ ಪ್ರಕರಣದ ಆರೋಪಿತರಿಗೆ ತಮಿಳುನಾಡು ಮಾದರಿಯ ಶಿಕ್ಷೆಯನ್ನೂ ಕರ್ನಾಟಕ ರಾಜ್ಯದಲ್ಲೂ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಹೋರಾಟ ನಡೆಯಲಿದೆ ಎಂದು ಜಿಗಳಿ ಹಾಲೇಶ್ ತಿಳಿಸಿದರು.

ಸಮಿತಿ ಮುಖಂಡರಾದ ಶಶಿಧರ, ಎಚ್.ಸಿ.ಸಿದ್ದಪ್ಪ ಬಾತಿ, ಬಿ.ಎಂ. ನಾಗರಾಜ, ಎನ್.ಮಲ್ಲೇಶ, ಎಚ್.ನಾಗರಾಜ, ಎಚ್.ಕನಕದಾಸ್, ಬಸವರಾಜ, ಅಂಬಾಜಿ ರಾವ್‌, ಇತರರು ಇದ್ದರು.

- - -

-23ಕೆಡಿವಿಜಿ7:

ದಾವಣಗೆರೆಯಲ್ಲಿ ಗುರುವಾರ ಡಿಎಸ್‌ಎಸ್‌ ಜಿಲ್ಲಾಧ್ಯಕ್ಷ ಜಿಗಳಿ ಹಾಲೇಶ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.