ಕುಶಾಲನಗರ: ದುಬಾರೆ ಪ್ರವಾಸಿ ಕೇಂದ್ರದಲ್ಲಿ ಆನೆ ಶಿಬಿರಕ್ಕೆ ಆಗಮಿಸುವ ಪ್ರವಾಸಿಗರಿಗೆ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್ಓಪಿ) ನಿಯಮಗಳನ್ನು ರೂಪಿಸಿದ್ದು ಇದೀಗ ಅರಣ್ಯ ಅಧಿಕಾರಿಗಳಿಂದ ಶಿಬಿರದಲ್ಲಿ ಪೂರ್ವ ಸಿದ್ಧತೆ ನಡೆಯುತ್ತಿವೆ.
ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಅದರಲ್ಲೂ ವಾರಾಂತ್ಯದಲ್ಲಿ 5 ಸಾವಿರಕ್ಕೂ ಅಧಿಕ ಪ್ರವಾಸಿಗರನ್ನು ಆಗಮಿಸುತ್ತಿದ್ದ ದುಬಾರೆ ಪ್ರವಾಸಿ ಕೇಂದ್ರದಲ್ಲಿ ಮೇ ತಿಂಗಳ ಆರಂಭದಲ್ಲಿ ನಡೆದ ದುರಂತದಿಂದ ಆನೆ ಶಿಬಿರ ಪ್ರವಾಸಿಗರ ಭೇಟಿಗೆ ನಿರ್ಬಂಧ ಹಿನ್ನಲೆಯಲ್ಲಿ ಪ್ರವಾಸಿಗರ ಸಂಖ್ಯೆ ಇಳಿಕೆಯಾಗಿದೆ.ಎರಡು ಸಾಕಾನೆಗಳ ನಡುವೆ ನಡೆದ ಕಾಳಗದಲ್ಲಿ ಚೆನ್ನೈ ಮೂಲದ ಮಹಿಳೆ, ಆನೆ ಸಾವಿನ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯದ ಎಲ್ಲ ಆನೆ ಶಿಬಿರಗಳಿಗೆ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಿತ್ತು. ಅಲ್ಲದೆ ರಾಜ್ಯದ ಎಲ್ಲ ಆನೆ ಶಿಬಿರಗಳಲ್ಲಿ ಎಸ್ ಓ ಪಿ ಅನುಷ್ಠಾನಗೊಳಿಸಲು ಆದೇಶ ಹೊರಡಿಸಿತ್ತು.
ಇದೀಗ ಎಸ್ಓಪಿ ಸರ್ಕಾರದಿಂದ ಜಿಲ್ಲಾ ಅರಣ್ಯಾಧಿಕಾರಿಗಳ ಕಚೇರಿಗೆ ರವಾನೆಯಾಗಿದ್ದು ಅದನ್ನು ಅನುಷ್ಠಾನಗೊಳಿಸಲು ಹಲವು ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಶಿಬಿರದಲ್ಲಿ ಪೂರ್ವ ಸಿದ್ಧತೆಗಳು ನಡೆಯುತ್ತಿವೆ.ಆನೆಗಳ ಹತ್ತಿರ ಹೋಗುವಂತಿಲ್ಲ: ಯಾವುದೇ ಸಂದರ್ಭ ಪ್ರವಾಸಿಗರು ಆನೆಯ ಸಮೀಪ ಹೋಗದಂತೆ ಕಟ್ಟುನಿಟ್ಟಿನ ಸೂಚನೆಗಳು ಎಸ್ಓಪಿಯಲ್ಲಿ ನಿಯಮಗಳನ್ನು ಅಳವಡಿಸಲಾಗಿದ್ದು ಈ ಸಂಬಂಧ ಮಡಿಕೇರಿ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ಅಭಿಷೇಕ್ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.
10 ಮೀಟರ್ ಅಂತರ: ಇನ್ನು ಕೆಲವೇ ದಿನಗಳಲ್ಲಿ ದುಬಾರೆ ಶಿಬಿರವನ್ನು ಪ್ರವಾಸಿಗರಿಗೆ ಮುಕ್ತಗೊಳಿಸಲಾಗುವುದು. ಆದರೆ ಕಡ್ಡಾಯವಾಗಿ ಇಲಾಖೆಯ ನಿಯಮಗಳನ್ನು ಪ್ರವಾಸಿಗರು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ ಎಂದು ಅಭಿಷೇಕ್ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. ಆನೆಗಳ ಸಮೀಪ ಪ್ರವಾಸಿಗರು ತೆರಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರವಾಸಿಗರಿಗೂ ಆನೆಗೂ ನಡುವೆ 10 ಮೀಟರ್ ಅಂತರ ಇರಬೇಕು ಎಲ್ಲೆಡೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು. ಶಿಬಿರದಲ್ಲಿ ಪ್ರವಾಸಿಗರಿಗೆ ಕೆಲವೇ ಸಮಯಗಳಷ್ಟು ಮಾತ್ರ ಕಾಲಾವಕಾಶ ಕಲ್ಪಿಸಲಾಗುವುದು ಪ್ರವಾಸಿಗರ ಸಣ್ಣ ಸಣ್ಣ ಗುಂಪುಗಳನ್ನು ರಚಿಸಿ ಶಿಬಿರಕ್ಕೆ ಬಿಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ
ಕಳೆದ ಎರಡು ತಿಂಗಳಿನಿಂದ ದುಬಾರೆಯ ಪ್ರವಾಸಿ ಚಟುವಟಿಕೆಗಳು ಸಂಪೂರ್ಣ ಕುಸಿದಿದ್ದು ಶೇ. 30ರಷ್ಟು ಪ್ರವಾಸಿಗರು ಭೇಟಿ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಕುಸಿದಿದೆ ಎಂದು ಅಲ್ಲಿನ ಉದ್ಯಮಿ ಕೆ ಎಸ್ ರತೀಶ್ ತಿಳಿಸಿದ್ದಾರೆ.ಇದರೊಂದಿಗೆ ನದಿಯಲ್ಲಿ ನೀರಿನ ಹರಿವಿನ ಕೊರತೆ ಕಾರಣ ರಾಪ್ಟಿಂಗ್ ಸಾಹಸ ಕ್ರೀಡೆ ಕೂಡ ಆರಂಭಗೊಳ್ಳದೆ ಕೇವಲ ಸ್ಟಿಲ್ ವಾಟರ್ ರಾಪ್ಟಿಂಗ್ ಮಾತ್ರ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. 85 ರಾಫ್ಟರ್ ಗಳು ಪ್ರವಾಸಿಗರ ಕೊರತೆಯಿಂದ ನದಿಯ ತಟ ಸೇರಿವೆ ಎಂದು ತಿಳಿಸಿದ್ದಾರೆ.
ಕಳೆದ ಎರಡು ತಿಂಗಳಿಂದ ಶಿಬಿರ ಬಂದ್ ಆಗಿರೋದು ಮತ್ತು ನದಿಯಲ್ಲಿ ನೀರಿನ ಹರಿವಿನ ಕೊರತೆ ಇದರಿಂದ ನೂರಾರು ಸಂಖ್ಯೆಯ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಉದ್ಯಮಿ ನಂಗಾರು ಜಗ ತಿಳಿಸಿದ್ದಾರೆ.