ಸಾರಾಂಶ
ಕನ್ನಡ ಪ್ರಭ ವಾರ್ತೆ ಕೊರಟಗೆರೆ
ತಾಲೂಕಿನ ಕೋಳಾಲ ಹೋಬಳಿಯ ದುಡ್ಡನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ವತಿಯಿಂದ ಶಿಕ್ಷಕರ ನಡೆ ವಿದ್ಯಾರ್ಥಿಗಳ ಕಡೆ ಕಾರ್ಯಕ್ರಮ ವಜ್ಜನಕುರಿಕೆ ಗ್ರಾಮದಲ್ಲಿ ನಡೆಯಿತು.ಶಾಲೆಯಲ್ಲಿ ಪೋಷಕರ ಸಭೆಗೆ ತಾಯಂದಿರು ಮತ್ತು ಪೋಷಕರು ಸಭೆಗೆ ಹೆಚ್ಚು ಬಾರದ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕ ಹೊಸಕೆರೆ ರಿಜ್ವಾನ್ ಬಾಷ ಶಾಲೆಯ ಎಸ್.ಡಿ.ಎಂಸಿ.ಅಧ್ಯಕ್ಷರು, ಶಿಕ್ಷಕರನ್ನೊಳಗೊಂಡಂತೆ ಎಲ್ಲರೂ ಬೆಳ್ಳಂಬೆಳಗ್ಗೆ ವಜ್ಜನಕುರಿಕೆ ಗ್ರಾಮದ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಸುರಿವ ಮಳೆಯಲ್ಲೇ ಭೇಟಿ ಕೊಟ್ಟರು. ಮಕ್ಕಳ ಶೈಕ್ಷಣಿಕ ಪ್ರಗತಿ ಪರಿಶೀಲನೆಗಾಗಿ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಈಗಿನಿಂದಲೇ ಸಿದ್ಧಗೊಳಿಸುವ ಉದ್ದೇಶದಿಂದ ತಾಯಂದಿರ ಸಭೆಯನ್ನು ಆಯೋಜಿಸಲಾಗಿತ್ತು. ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆ ಶಿಕ್ಷಕರೊಂದಿಗೆ ಸಹಕರಿಸಬೇಕಾದ ಪೋಷಕರು ಶಾಲೆಯ ಸಭೆಗಳಿಗೆ ಬರದೇ ಇದ್ದಾಗ ಇಡೀ ಶಾಲೆಯ ಶಿಕ್ಷಕರು ಮಕ್ಕಳ ಮನೆ ಬಾಗಿಲಿಗೆ ಭೇಟಿಕೊಟ್ಟು ಪೋಷಕರೊಂದಿಗೆ ಚರ್ಚಿಸುವುದೇ ಸೂಕ್ತ ಎಂದು ಮಕ್ಕಳ ಶೈಕ್ಷಣಿಕ ದಾಖಲೆಗಳೊಂದಿಗೆ ಪೋಷಕರ ಮನೆಗೆ ನಡೆದು ಅಲ್ಲೇ ಪೋಷಕರ ಸಭೆ ನಡೆಸಿ ಮಕ್ಕಳು ಮತ್ತು ಪೋಷಕರ ನಡುವೆ ಸಂವಾದ ನಡೆಸಿದರು. ಮುಂಗಾರಿನ ಮಳೆಗಾಲದ ಸಮಯವಾದ್ದರಿಂದ ಪೋಷಕರು ಬಿತ್ತನೆ ಕಾರ್ಯಕ್ಕೆ, ಕಾರ್ಖಾನೆಗಳಿಗೆ ಕೆಲಸಕ್ಕೆ ಹೋಗುವುದರಿಂದ ಸಹಜವಾಗಿಯೇ ಅವರಿಗೆ ಬಿಡುವಿಲ್ಲದೆ ಶಾಲೆಯಲ್ಲಿ ಆಯೋಜಿಸುವ ಪೋಷಕರ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿರಲಿಲ್ಲ. ಮುಖ್ಯಶಿಕ್ಷಕರು, ಸಹಶಿಕ್ಷಕರು ತಮ್ಮ ಮನೆಯ ಬಳಿ ಬರುವುದನ್ನು ಕಂಡ ಪೋಷಕರು ಅತ್ಯಂತ ಆತ್ಮೀಯತೆಯಿಂದ ಕರೆದು ಮಕ್ಕಳ ಪ್ರಗತಿಯ ಬಗ್ಗೆ ತಿಳಿದುಕೊಂಡರು. ಗ್ರಾಮಸ್ಥರು ಶಿಕ್ಷಕರ ಈ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಈ ವೇಳೆ ಮಾತನಾಡಿದ ಶಿಕ್ಷಕರು, ಸರ್ಕಾರ ಮಕ್ಕಳ ಶೈಕ್ಷಣಿಕ ಅಬ್ಯುದಯಕ್ಕಾಗಿ ಕೋಟಿ ಕೋಟಿ ಹಣ ಖರ್ಚು ಮಾಡುತ್ತಿದೆ. ಎಲ್ಲ ಸೌಲಭ್ಯಗಳನ್ನು ಒದಗಿಸುತ್ತಿದೆ. ಪೋಷಕರು ಶಿಕ್ಷಕರೊಂದಿಗೆ ಸಹಕರಿಸದಿದ್ದರೆ ನಿಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಲು ಹೇಗೆ ಸಾಧ್ಯ? ಶಾಲೆಗೆ ನಿತ್ಯ ಹಾಜರಾಗದ ಮಕ್ಕಳ ಬಗ್ಗೆ ಪೋಷಕರು ಜಾಗೃತಿ ವಹಿಸಬೇಕಿದೆ. ಬಡತನ ವಿದ್ಯೆಗೆ ಎಂದೂ ಅಡ್ಡಿಯಾಗದು ಮಕ್ಕಳಿಗೆ ಮನೆಯಲ್ಲಿ ಶೈಕ್ಷಣಿಕ ವಾತಾವರಣ ಕಲ್ಪಿಸಬೇಕಿದೆ ಎಂದು ಪೋಷಕರಿಗೆ ಕಿವಿಮಾತು ಹೇಳಿದರು. ಎಸ್.ಡಿ.ಎಂ.ಸಿ ಅಧ್ಯಕ್ಷೆ ಅನುಸೂಯಮ್ಮ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾಗರಾಜಯ್ಯ, ಗ್ರಾಮಸ್ಥರು, ಪೋಷಕರು, ತಾಯಂದಿರು, ಶಾಲೆಯ ಶಿಕ್ಷಕರಾದ ಅಶ್ವತ್ಥನಾರಾಯಣ, ಸುಜಾತ, ಚಿಕ್ಕಪ್ಪಯ್ಯ, ಎಲ್. ಕೃಷ್ಣಪ್ಪ, ಟಿ. ರಾಜಶೇಖರಯ್ಯ ಹಾಜರಿದ್ದರು.