ಬರದಿಂದ ಹಗ್ಗ ಮಾರಾಟಕ್ಕೂ ಗರ

| Published : Nov 12 2023, 01:00 AM IST / Updated: Nov 12 2023, 01:01 AM IST

ಸಾರಾಂಶ

ದೀಪಾವಳಿ ಹಬ್ಬ ಹರುಷ ನೀಡದೇ, ರೈತರು ಖರೀದಿಗೆ ಹಿಂದೇಟು ಹಾಕುವ ದೃಶ್ಯ ಒಂದೆಡೆಯಾದರೆ, ಹೋರಿಗಳ ಅಲಂಕಾರ ವಸ್ತುಗಳ ವ್ಯಾಪಾರಸ್ಥರು ವ್ಯಾಪಾರವಿಲ್ಲದೆ ನಿರಾಶರಾಗಿದ್ದಾರೆ.

ಮಾರುತಿ ಶಿಡ್ಲಾಪೂರ

ಕನ್ನಡಪ್ರಭ ವಾರ್ತೆ ಹಾನಗಲ್ಲ

ದೀಪಾವಳಿ ಹಬ್ಬ ಹರುಷ ನೀಡದೇ, ರೈತರು ಖರೀದಿಗೆ ಹಿಂದೇಟು ಹಾಕುವ ದೃಶ್ಯ ಒಂದೆಡೆಯಾದರೆ, ಹೋರಿಗಳ ಅಲಂಕಾರ ವಸ್ತುಗಳ ವ್ಯಾಪಾರಸ್ಥರು ವ್ಯಾಪಾರವಿಲ್ಲದೆ ನಿರಾಶರಾಗಿದ್ದಾರೆ.

ದೀಪಾವಳಿ ಹಬ್ಬಕ್ಕೆ ಬರುವ ಸಂತೆಯ ದಿನ ಇತರ ದಿನಸಿಗಳಿಗಿಂತ ಹೋರಿ ಜಾನುವಾರುಗಳಿಗಾಗಿ ಹಗ್ಗ ಮೊದಲಾದ ಅಲಂಕಾರಿಕ ವಸ್ತುಗಳನ್ನು ಖರೀದಿಸಲು ರೈತರು ಮುಗಿಬಿದ್ದಿರುತ್ತಾರೆ. ಆದರೆ ಈ ವರ್ಷದ ಅಂತಹ ದೃಶ್ಯಗಳು ಕಂಡುಬರುತ್ತಿಲ್ಲ. ಮಳೆರಾಯನ ಅವಕೃಪೆಯಿಂದ ಬಂದ ಬರದಲ್ಲಿ ರೈತರ ಅತಿ ದೊಡ್ಡ ಹಬ್ಬ ಇದಾಗಿದ್ದು, ಹಾನಗಲ್ಲ ತಾಲೂಕಿನಲ್ಲಿ ಹೋರಿ ಬೆದರಿಸುವ ಹಬ್ಬಕ್ಕೆ ದೊಡ್ಡ ಮಹತ್ವವಿದೆ. ಹೋರಿಗಳಿಗಾಗಿ ವಿವಿಧ ಅಲಂಕಾರ, ಸಾಮಗ್ರಿ ವ್ಯಾಪಾರ ನಡೆಯಬೇಕು. ಆದರೆ ಸಾಲು ಸಂತೆಯಲ್ಲಿ ಮಾರುವವರು ವ್ಯಾಪಾರವೇ ಇಲ್ಲ ಎಂದು ಕೈಕಟ್ಟಿಕೊಂಡು ಕುಳಿತಿದ್ದಾರೆ. ಈ ಬಾರಿಯ ಶುಕ್ರವಾರದ ಸಂತೆಯಲ್ಲಿ ರೈತರು ಹಾಗೂ ವಿವಿಧ ಅಲಂಕಾರ ವಸ್ತುಗಳ ಮಾರಾಟಗಾರರ ನಡುವೆ ಚೌಕಾಸಿ ಹೆಚ್ಚು ನಡೆಯುತ್ತಿದೆ. ವ್ಯಾಪಾರ ಮಾತ್ರ ಅಷ್ಟಕಷ್ಟೇ.

ಬಣ್ಣ ಬಣ್ಣದ ಹಗ್ಗ, ಗೆಜ್ಜಿ ಸರ, ಕೋಡಣಸು, ಜತ್ತಿಗೆ, ಬಾರುಕೋಲು, ರಿಬ್ಬನ್, ಬಲೂನು, ಬಣ್ಣ ಸೇರಿದಂತೆ ಹತ್ತು ಹಲವು ಅಲಂಕಾರ ವಸ್ತುಗಳನ್ನು ಕೊಳ್ಳುವ ನೋಟ ಎಲ್ಲೆಡೆ ಸಹಜವಾಗಿತ್ತು. ಈ ಬಾರಿ ಶುಕ್ರವಾರ ಸಂತೆಯಲ್ಲಿ ಅಂದಾಜು ೫೦ಕ್ಕೂ ಹೆಚ್ಚು ಹಗ್ಗಗಳ ಅಂಗಡಿಗನ್ನು ಹಾಕಲಾಗಿದೆ. ಶಿಗ್ಗಾಂವಿ, ಮುಂಡಗೋಡ, ಆನವಟ್ಟಿ, ಸೇರಿದಂತೆ ವಿವಿಧ ತಾಲೂಕುಗಳಿಂದಲೂ ಹಗ್ಗಗಳನ್ನು ಮಾರಲು ವ್ಯಾಪಾರಸ್ಥರು ಬಂದಿದ್ದರು.

ಇಡೀ ದಿನ ಮಾರಿದರೂ ಏಳೆಂಟು ಸಾವಿರ ರೂಪಾಯಿ ವ್ಯಾಪಾರವಾಗಿಲ್ಲ. ಕನಿಷ್ಠ ₹೨೫ ರಿಂದ ೩೦ ಸಾವಿರ ವ್ಯಾಪಾರವಾಗುತ್ತದೆ ಎಂಬ ನಿರೀಕ್ಷೆ ಇತ್ತು. ಚೌಕಾಸಿ ಎಲ್ಲ ಕಾಲದಲ್ಲೂ ಇದೆ. ಆದರೆ ಹಿಂದಿನ ವರ್ಷಗಳಲ್ಲಿ ಚೌಕಾಸಿ ಮಾಡಿದರೂ ಖರೀದಿ ಮಾಡುತ್ತಿದ್ದರು. ಈಗ ಚೌಕಾಸಿ ಮಾಡಿದವರಲ್ಲಿ ಅರ್ಧಕ್ಕೂ ಕಡಿಮೆ ಜನ ಅತ್ಯಂತ ಕಡಿಮೆ ವಸ್ತುಗಳನ್ನು ಕೊಳ್ಳುತ್ತಿದ್ದಾರೆ. ಬರದ ಬರೆ ನಮಗೂ ಬಿದ್ದಿದೆ ಎನ್ನುತ್ತಾರೆ ವ್ಯಾಪಾರಸ್ಥರು.