ಸಾರಾಂಶ
ಮಹದೇವಪ್ಪ ಎಂ. ಸ್ವಾಮಿ ಶಿರಹಟ್ಟಿ
ತಾಲೂಕಿನ ಮಾಗಡಿ ಗ್ರಾಪಂ ವ್ಯಾಪ್ತಿಯಲ್ಲಿ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ ನರೇಗಾ ಕುರಿತಂತೆ ಸಾರ್ವಜನಿಕರಿಗೆ ತಿಳಿವಳಿಕೆ, ಜಾಗೃತಿ ಮೂಡಿಸುವ ಕಾರ್ಯ ಮಾಡಿಲ್ಲ. ಹೆಚ್ಚು ಕೂಲಿ ಕೆಲಸಗಾರರೇ ವಾಸವಿರುವ ಈ ಪಂಚಾಯತಿ ವ್ಯಾಪ್ತಿಯಲ್ಲಿ ಎಲ್ಲೂ ನರೇಗಾ ಕಾಮಗಾರಿ ಕೈಗೊಂಡಿಲ್ಲ.ವಿಶ್ವದಲ್ಲೇ ಅತಿ ದೊಡ್ಡ ಉದ್ಯೋಗ ಯೋಜನೆ ಎಂಬ ಹೆಗ್ಗಳಿಕೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ಪಾತ್ರವಾಗಿದೆ. ಗುಳೆ ತಪ್ಪಿಸಿ ಗ್ರಾಮದಲ್ಲಿಯೇ ಎಲ್ಲ ವಯಸ್ಕ ಜನರಿಗೆ ಉದ್ಯೋಗ ಒದಗಿಸುವುದು ಈ ಯೋಜನೆಯ ಗುರಿಯಾಗಿದ್ದು, ಅಧಿಕಾರಿಗಳ ಅಸಡ್ಡೆತನದಿಂದ ಮಾಗಡಿ ಗ್ರಾಪಂನಲ್ಲಿ ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ.
ಈ ಯೋಜನೆಯಡಿ ಒಂದು ಕುಟುಂಬದ ವಯಸ್ಕ ಸದಸ್ಯರು ಸ್ವಯಂ ಪ್ರೇರಿತರಾಗಿ ನೋಂದಣಿಯಾದರೆ ಅಂತಹವರಿಗೆ ಆರ್ಥಿಕ ವರ್ಷವೊಂದಕ್ಕೆ ನೂರು ದಿನಗಳ ಉದ್ಯೋಗ ನೀಡಲಾಗುತ್ತದೆ. ಈ ಯೋಜನೆಯು ಬಡ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸುವಲ್ಲಿ ಮಹತ್ವದ್ದಾಗಿದೆ. ಆದರೆ ಈ ಪಂಚಾಯತಿಯಲ್ಲಿ ನರೇಗಾ ಯೋಜನೆಯ ಜಾಗೃತಿ ಕಾರ್ಯವೇ ನಡೆದಿಲ್ಲ ಎಂದರೆ ಬಡ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಣೆ ಹೇಗೆ ಆಗಲು ಸಾಧ್ಯ ಎಂಬ ಪ್ರಶ್ನೆ ಜನರಲ್ಲಿ ಕಾಡುತ್ತಿದೆ.ಮಾಗಡಿ ಗ್ರಾಪಂ ವ್ಯಾಪ್ತಿ ಹೊಳಲಾಪುರ, ಪರಸಾಪುರ, ಚೆನ್ನಪಟ್ಟಣ ಗ್ರಾಮಗಳು ಬರುತ್ತಿದ್ದು, ಒಟ್ಟು ೬.೯೬೯ ಜನಸಂಖ್ಯೆ ಇದ್ದು, ೧೬ ಜನ ಸದಸ್ಯರನ್ನು ಹೊಂದಿದೆ. ಮಾಗಡಿ ಗ್ರಾಮದಲ್ಲಿ ೨ ಶುದ್ದ ನೀರಿನ ಘಟಕಗಳಿದ್ದು, ಜೆಜೆಎಂ ಕಾಮಗಾರಿ ಸಂಪೂರ್ಣ ಹಳ್ಳ ಹಿಡಿದಿದೆ. ಕಾಮಗಾರಿ ಅಪೂರ್ಣವಾಗಿದ್ದು, ಜನ ನೀರಿಗೆ ಪರದಾಡುವಂತಾಗಿದೆ.
ಗ್ರಾಮದಲ್ಲಿ ಸಮರ್ಪಕ ಸಿಸಿ ರಸ್ತೆಗಳಿಲ್ಲ. ಎಲ್ಲೆಂದರಲ್ಲಿ ತಗ್ಗು ಗುಂಡಿಗಳು ಬಿದ್ದಿವೆ. ಗ್ರಾಪಂ ಕಾರ್ಯಾಲಯದ ಎದುರೇ ರಸ್ತೆ ಮೇಲೆ ದೊಡ್ಡ ಗುಂಡಿಗಳು ಬಿದ್ದರೂ ರಸ್ತೆ ಸುಧಾರಣೆಗೆ ಗಮನ ಹರಿಸಿಲ್ಲ. ಚರಂಡಿ ವ್ಯವಸ್ಥೆ ಇಲ್ಲದೇ ಕೊಳಚೆ ನೀರಿನಿಂದ ಗ್ರಾಮ ಗಬ್ಬೆದ್ದು ನಾರುತ್ತಿದೆ. ರಸ್ತೆಯುದ್ದಕ್ಕೂ ತಿಪ್ಪೆ ಗುಂಡಿಗಳ ಸಾಲೇ ಕಾಣುತ್ತಿವೆ.ಜಿಪಂ ಸಿಇಒ ಭೇಟಿ:
ಶನಿವಾರ ಸೆ. ೨೧ರಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್.,ಶಿರಹಟ್ಟಿ ತಾಪಂ ಇಒ ಎಸ್.ಎಸ್. ಕಲ್ಮನಿ, ನರೇಗಾ ಎಡಿ ರಾಮಪ್ಪ ದೊಡ್ಡಮನಿ ತಾಲೂಕಿನ ಮಾಗಡಿ ಗ್ರಾಪಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮದ ಎಸ್ಸಿ,ಎಸ್ಟಿ ಕಾಲನಿಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ತಲೆದೋರಿದ್ದು, ಇದನ್ನು ಗಮನಿಸದೇ ಹಿಂತಿರುಗಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.ಶಿರಹಟ್ಟಿ ತಾಪಂ ಐಇಸಿ ಸಂಯೋಜಕ ಮಂಜುನಾಥ ಸ್ವಾಮಿ ನರೇಗಾ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಿ ಯೋಜನೆಯ ಯಶಸ್ಸಿಗೆ ಕ್ರಮ ವಹಿಸಬೇಕಿದ್ದು, ತಿರುಗಿ ನೋಡಿಲ್ಲ ಎಂಬ ದೂರುಗಳಿವೆ. ಪ್ರಸಕ್ತ ವರ್ಷದಲ್ಲಿ ೯ ತಿಂಗಳು ಕಳೆದರೂ ನರೇಗಾ ಕಾಮಗಾರಿ ಆರಂಭಗೊಂಡಿಲ್ಲ. ದುಡಿಯುವ ಕೈಗಳಿಗೆ ಕೆಲಸ ನೀಡಿಲ್ಲ. ಸಂಪೂರ್ಣ ಮೂಲಭೂತ ಸೌಲಭ್ಯಗಳಿಂದ ಗ್ರಾಮದ ಜನತೆ ವಂಚಿತರಾಗಿದ್ದು, ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ನರೇಗಾ ಯೋಜನೆಯಡಿಯಲ್ಲಿ ಕೇವಲ ೧೫ ಮನೆ ನಿರ್ಮಾಣ ಕಾರ್ಯ ಮಾತ್ರ ನಡೆದಿದೆ. ಸಿವಿಲ್ ಕಾಮಗಾರಿ ನಡೆದಿಲ್ಲ. ವರ್ಷದಲ್ಲಿ ₹೨೫.೮೦ ಲಕ್ಷ ತೆರಿಗೆ ಗುರಿ ಇದ್ದು, ಇಲ್ಲಿಯವರೆಗೆ ₹ ೫.೬೦ ಲಕ್ಷ ವಸೂಲು ಆಗಿದೆ. ನರೇಗಾ ಯೋಜನೆ ಕುರಿತಂತೆ ಜನರಲ್ಲಿ ಪಂಚಾಯತಿ ವತಿಯಿಂದಲೇ ೪ ಬಾರಿ ಜಾಗೃತಿ ಕಾರ್ಯಕ್ರಮ ಮಾಡಲಾಗಿದೆ ಎಂದು ಮಾಗಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಸ್.ವೈ. ಕುಂಬಾರ ತಿಳಿಸಿದ್ದಾರೆ.ಗ್ರಾಮದ ಎಸ್ಸಿ, ಎಸ್ಟಿ ಕಾಲನಿಯಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಇದೆ. ಜೆಜೆಎಂ ಕಾಮಗಾರಿ ಅಪೂರ್ಣವಾಗಿದ್ದು ಕುಡಿಯುವ ನೀರಿನ ಸಮಸ್ಯೆಗೆ ಕಾರಣವಾಗಿದೆ. ಸಿಸಿ ರಸ್ತೆ, ಚರಂಡಿ ಕಾಮಗಾರಿಗಳ ಅವಶ್ಯವಿದ್ದು, ಸರ್ಕಾರ ಅನುದಾನ ಬಿಡುಗಡೆ ಮಾಡಿ ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಗ್ರಾಪಂ ಸದಸ್ಯ ಹಾಗೂ ಪಂಚ ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ವೀರಯ್ಯ ಮಠಪತಿ ತಿಳಿಸಿದ್ದಾರೆ.