ಎಲ್ಲೆಡೆ ಜಾತ್ರೆ ಬ್ಯಾನರ್‌ಗಳ ದರ್ಬಾರ್‌!

| Published : Sep 26 2024, 10:12 AM IST

ಸಾರಾಂಶ

ಬನಹಟ್ಟಿಯ ಆರಾಧ್ಯ ದೈವ ಶ್ರೀಕಾಡಸಿದ್ಧೇಶ್ವರ ಜಾತ್ರೆ ಅಂಗವಾಗಿ ಪಟ್ಟಣದ ಎಲ್ಲೆಂದರಲ್ಲಿ ಬ್ಯಾನರ್ಗಳೇ ರಾರಾಜಿಸುತ್ತಿವೆ. ರಾಜಕೀಯ ಮುಖಂಡರಿಗಂತೂ ಉಚಿತ ಪ್ರಚಾರದ ನೆಪದಲ್ಲಿ ಪರಿಸರಕ್ಕಾಗುವ ಮಾಲಿನ್ಯವನ್ನೂ ಗಮನಿಸದೇ ನಾಯಿ ಕೊಡೆಗಳಂತೆ ನಗರದ ತುಂಬೆಲ್ಲಾ ಎಲ್ಲೆಂದರಲ್ಲಿ ಬೇಕಾಬಿಟ್ಟಿ ಜಾಹೀರಾತುಗಳನ್ನು ಅಂಟಿಸುತ್ತ ನಗರ ಸೌಂದರ್ಯಕ್ಕೆ ಧಕ್ಕೆ ತರುವಂತಹ ಕಾರ್ಯದಲ್ಲಿ ತೊಡಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಶಿವಾನಂದ ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬನಹಟ್ಟಿಯ ಆರಾಧ್ಯ ದೈವ ಶ್ರೀಕಾಡಸಿದ್ಧೇಶ್ವರ ಜಾತ್ರೆ ಅಂಗವಾಗಿ ಪಟ್ಟಣದ ಎಲ್ಲೆಂದರಲ್ಲಿ ಬ್ಯಾನರ್‌ಗಳೇ ರಾರಾಜಿಸುತ್ತಿವೆ. ರಾಜಕೀಯ ಮುಖಂಡರಿಗಂತೂ ಉಚಿತ ಪ್ರಚಾರದ ನೆಪದಲ್ಲಿ ಪರಿಸರಕ್ಕಾಗುವ ಮಾಲಿನ್ಯವನ್ನೂ ಗಮನಿಸದೇ ನಾಯಿ ಕೊಡೆಗಳಂತೆ ನಗರದ ತುಂಬೆಲ್ಲಾ ಎಲ್ಲೆಂದರಲ್ಲಿ ಬೇಕಾಬಿಟ್ಟಿ ಜಾಹೀರಾತುಗಳನ್ನು ಅಂಟಿಸುತ್ತ ನಗರ ಸೌಂದರ್ಯಕ್ಕೆ ಧಕ್ಕೆ ತರುವಂತಹ ಕಾರ್ಯದಲ್ಲಿ ತೊಡಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇತಿಹಾಸ ಕಾಲದಿಂದ ಆಧ್ಯಾತ್ಮಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೆರಗಿಗೆ ಜಾತ್ರೆಯ ವೈಶಿಷ್ಟ್ಯತೆಯನ್ನು ನೋಡಲು ಆಗಮಿಸುವ ಭಕ್ತರಿಗೆ ಕೇವಲ ರಾಜಕಾರಣಿಗಳ ಭಾವಚಿತ್ರದ ಫಲಕಗಳು ಬೇಸರ ಮೂಡಿಸುತ್ತಿವೆ.

ನಗರಸಭೆಯಲ್ಲಿ ಕಳೆದ ೨೦೧೨ ಏಪ್ರಿಲ್‌ನಲ್ಲಿನ ಸಾಮಾನ್ಯ ಸಭೆಯಲ್ಲಿ ಮಹತ್ವದ ನಿರ್ಣಯವನ್ನು ಕೈಗೊಂಡು ಅವಳಿ ನಗರದಾದ್ಯಂತ ಯಾವುದೇ ಕಾರಣಕ್ಕೂ ಅಕ್ರಮವಾಗಿ ಬ್ಯಾನರ್, ಬಂಟಿಂಗ್ಸ್ ಹಾಗೂ ಕಟೌಟ್‌ಗಳನ್ನು ಅಳವಡಿಸಬಾರದು ಎಂದು ಸಭೆ ಕಟ್ಟಾಜ್ಞೆ ಹೊರಡಿಸಿತು. ನಂತರದ ಕೆಲವು ದಿನಗಳಿಂದ ಚಾಚೂ ತಪ್ಪದೇ ಪಾಲಿಸಿದ ನಗರಸಭೆಯು ಯಶಸ್ಸು ಕಂಡಿತ್ತು. ಇದೀಗ ಜಾತ್ರೆಗಳಲ್ಲಿ ವಿನಾಕಾರಣ ರಾಜಕೀಯ ಪ್ರಚಾರಗಿಟ್ಟಿಸಿಕೊಳ್ಳುತ್ತಿರುವ ರಾಜಕಾರಣಿಗಳಿಗೆ ಮೂಗುದಾರ ಹಾಕುವಲ್ಲಿ ನಗರಸಭೆ ಪಾರದರ್ಶಕತೆಯಿಂದ ಸಜ್ಜಾಗಬೇಕಾಗಿದೆ.

ನಗರಸಭೆ ಬೊಕ್ಕಸಕ್ಕೆ ಹಾನಿ:

ಅಕ್ರಮ ಫಲಕಗಳನ್ನು ಹಾಕುವ ಮೂಲಕ ಚ.ಅಡಿಗೆ ಸೀಮಿತಗೊಳಿಸಿರುವ ಬೆಲೆಯನ್ನು ನಗರಸಭೆಗೆ ಭರಣಾ ಮಾಡದ ಕಾರಣ ಲಕ್ಷಾಂತರ ರುಪಾಯಿ ನಗರಸಭೆ ಬೊಕ್ಕಸಕ್ಕೆ ಹಾನಿಯುಂಟಾಗುತ್ತಿದೆ.

--

ಕೋಟ್‌

ನಗರಾದ್ಯಂತ ಇವಿರುವ ಬ್ಯಾನರ್, ಬಂಟಿಂಗ್ಸ್‌ಗಳನ್ನು ಗಮನಿಸಲಾಗಿದೆ. ಪರವಾಣಿಗೆ ಪಡೆಯದ ವ್ಯಕ್ತಿಗಳಿಗೆ ನೋಟಿಸ್ ನೀಡಿ, ತೆರಿಗೆ ತುಂಬಲು ದಂಡ ಸಹಿತ ವಸೂಲಿ ಮಾಡಲಾಗುವುದು. ಯಾರೂ ಪರವಾಣಿಗೆಯಿಲ್ಲದೆ ಬ್ಯಾನರ್ ಕಟ್ಟುವಂತಿಲ್ಲ.

-ಜಗದೀಶ ಈಟಿ, ಪೌರಾಯುಕ್ತರು, ನಗರಸಭೆ.