ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ಖಾಸಗಿ ವಾಹನಗಳ ದರ್ಬಾರ್!

| Published : Jan 05 2025, 01:33 AM IST

ಸಾರಾಂಶ

ಹುಬ್ಬಳ್ಳಿ-ಧಾರವಾಡ ಮಧ್ಯೆ ₹ 1000 ಕೋಟಿ ವೆಚ್ಚದಲ್ಲಿ 22.5 ಕಿಲೋ ಮೀಟರ್ ನಿರ್ಮಿಸಿರುವ ಬಿಆರ್‌ಟಿಎಸ್‌ ಕಾರಿಡಾರ್ ಬರೋಬ್ಬರಿ 32 ನಿಲ್ದಾಣ ಹೊಂದಿದೆ. ಅವಳಿ ನಗರದ ಮಧ್ಯೆ ಸಂಚರಿಸುವ ಜನರಿಗೆ ಕ್ಷಿಪ್ರವಾಗಿ ಆರಾಮದಾಯಕ, ಸುರಕ್ಷಿತವಾಗಿ ತಮ್ಮ ಗಮ್ಯ ಸ್ಥಾನ ತಲುಪುವ ಉದ್ದೇಶದಿಂದ ಈ ಕಾರಿಡಾರ್ ಮಾಡಲಾಗಿದೆ.

ನಾಗರಾಜ ಮಾರೇರ

ಹುಬ್ಬಳ್ಳಿ:

ಅತ್ತ ಜಿಲ್ಲಾ ಉಸ್ತುವಾರಿ ಸಂತೋಷ ಲಾಡ್‌ ಬಿಆರ್‌ಟಿಎಸ್‌ ಸ್ಥಗಿತಗೊಳಿಸಿ, ಎಲ್‌ಆರ್‌ಟಿ (ಲೈಟ್‌ ರೈಲ್‌ ಟ್ರಾನ್ಸಿಟ್‌) ಅನುಷ್ಠಾನಗೊಳಿಸುವ ಕುರಿತಂತೆ ಯೋಚನೆ ನಡೆಸಿದ್ದಾರೆ. ಆದರೆ ಇದರ ಮಧ್ಯೆಯೇ ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲೀಗ ಬರೀ ಚಿಗರಿ ಬಸ್‌ಗಳಷ್ಟೇ ಅಲ್ಲ. ಖಾಸಗಿ ವಾಹನಗಳು ಓಡಾಡಲು ಆರಂಭಿಸಿದೆ. ಇದರಿಂದಾಗಿ ಕಾರಿಡಾರ್‌ನ್ನು ಖಾಸಗಿ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆಯೇ? ಅಥವಾ ಸಚಿವರ ಯೋಚನೆಯಂತೆ ಬಿಆರ್‌ಟಿಎಸ್‌ ಸೇವೆ ಸ್ಥಗಿತಗೊಳಿಸುವ ನಿರ್ಧಾರ ಮಾಡಿದೆಯಾ?

ಇಂತಹ ಪ್ರಶ್ನೆ ಜನರಲ್ಲಿ ಮೂಡುತ್ತಿದೆ. ಹುಬ್ಬಳ್ಳಿ-ಧಾರವಾಡ ಮಧ್ಯೆ ₹ 1000 ಕೋಟಿ ವೆಚ್ಚದಲ್ಲಿ 22.5 ಕಿಲೋ ಮೀಟರ್ ನಿರ್ಮಿಸಿರುವ ಬಿಆರ್‌ಟಿಎಸ್‌ ಕಾರಿಡಾರ್ ಬರೋಬ್ಬರಿ 32 ನಿಲ್ದಾಣ ಹೊಂದಿದೆ. ಅವಳಿ ನಗರದ ಮಧ್ಯೆ ಸಂಚರಿಸುವ ಜನರಿಗೆ ಕ್ಷಿಪ್ರವಾಗಿ ಆರಾಮದಾಯಕ, ಸುರಕ್ಷಿತವಾಗಿ ತಮ್ಮ ಗಮ್ಯ ಸ್ಥಾನ ತಲುಪುವ ಉದ್ದೇಶದಿಂದ ಈ ಕಾರಿಡಾರ್ ಮಾಡಲಾಗಿದೆ. ಆದರೇ ಮೊದಲಿದ್ದ ಸೇವೆ ಇದೀಗ ದೊರೆಯುತ್ತಿಲ್ಲ ಎಂಬ ಬೇಸರವೂ ಜನರಲ್ಲಿದೆ.

ಖಾಸಗಿ ವಾಹನಗಳ ದರ್ಬಾರ್:

ಈ ಕಾರಿಡಾರ್‌ನಲ್ಲಿ ಬಿಆರ್‌ಟಿಎಸ್‌ ಬಸ್ ಹೊರತುಪಡಿಸಿ ಆ್ಯಂಬುಲೆನ್ಸ್, ಮುಖ್ಯಮಂತ್ರಿ, ಸಚಿವರು ಸೇರಿದಂತೆ ವಿಐಪಿ ವಾಹನಗಳು ಸಂಚರಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಉಳಿದ ವಾಹನಗಳ ಸಂಚಾರಕ್ಕೆ ಅನುಮತಿ ಇಲ್ಲ. ಬೇರೆ ವಾಹನಗಳು ಕಾರಿಡಾರ್ ಪಕ್ಕದಲ್ಲಿರುವ ಮಿಶ್ರಪಥದಲ್ಲಿ ಸಾಗಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಬಿಆರ್‌ಟಿಎಸ್‌ ಬಸ್‌ಗಿಂತ ಖಾಸಗಿ ವಾಹನಗಳೆ ಹೆಚ್ಚು ಕಾರಿಡಾರ್‌ನಲ್ಲಿ ಸಂಚರಿಸುತ್ತಿವೆ. ಇದರಿಂದ ಕೆಲವು ವೇಳೆ ಚಿಗರಿ ಬಸ್‌ಗಳೆ ಅಪಘಾತಕ್ಕೆ ಒಳಗಾಗಿವೆ.

ದಂಡ ಪ್ರಯೋಗ ನಿಲ್ಲಿಸಿದರೇ:

ಆರಂಭದ ದಿನಗಳಲ್ಲಿ ಬಿಆರ್‌ಟಿಎಸ್‌ ಬಸ್ ಹೊರತುಪಡಿಸಿ ಖಾಸಗಿ ವಾಹನಗಳು ಕಾರಿಡಾರ್‌ನಲ್ಲಿ ಸಂಚರಿಸಿದರೆ ದಂಡ ವಿಧಿಸಲಾಗುತ್ತಿತ್ತು. ಖಾಸಗಿ ವಾಹನ ಕಾರಿಡಾರಿನಲ್ಲಿ ಬರುತ್ತಿದ್ದಂತೆ ಬಸ್ ನಿಲ್ದಾಣದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾ ಮೂಲಕ ಆ ವಾಹನಗಳಿಗೆ ಆನ್ಲೈನ್ ದಂಡ ವಿಧಿಸಲಾಗುತ್ತಿತ್ತು. ಹೀಗಾಗಿಯೇ ಖಾಸಗಿ ವಾಹನಗಳು ಕಾರಿಡಾರ್‌ನಲ್ಲಿ ಸಂಚರಿಸುತ್ತಿರಲಿಲ್ಲ. ನವನಗರದ ಯುವಕನೊಬ್ಬ ಪದೇ ಪದೇ ಕಾರಿಡಾರ್‌ನಲ್ಲಿ ಕಾರು ಚಲಾಯಿಸಿದ್ದಕ್ಕೆ ಬರೋಬ್ಬರಿ ₹ 25000 ದಂಡ ಪಾವತಿಸಿದ್ದ. ಆದರೆ, ಇದೀಗ ದಂಡ ವಿಧಿಸಲು ಬಿಆರ್‌ಟಿಎಸ್‌ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೋ ಅಥವಾ ಸಂಚರಿಸಿದರೆ ಸಂಚರಿಸಲಿ ಬಿಡಿ ಎಂದು ಕೈಕಟ್ಟಿ ಕುಳಿತಿದ್ದಾರೆಯೇ ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ಬೈಕ್, ಕಾರು, ಲಾರಿ ಸೇರಿದಂತೆ ಎಲ್ಲ ವಾಹನಗಳು ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ಸಂಚರಿಸಲು ಶುರು ಮಾಡಿವೆ.

ಬೂಮ್ ಬ್ಯಾರಿಕೇಡ್?

ಆರಂಭದಲ್ಲಿ ಬಿಆರ್‌ಟಿಎಸ್‌ ಸಿಗ್ನಲ್ ಬಳಿ ದ್ವಿಪಥದಲ್ಲೂ ಬೂಮ್ ಬ್ಯಾರಿಗೇಡ್ ಅಳವಡಿಸಿ ಖಾಸಗಿ ವಾಹನಗಳಿಗೆ ಬ್ರೇಕ್ ಹಾಕಲಾಗಿತ್ತು. ಬಿಆರ್‌ಟಿಎಸ್‌ ಬಸ್ ಬಂದರೆ ಅದು ಸ್ಕ್ಯಾನ್ ಮುಖಾಂತರ ಓಪನ್ ಆಗುತ್ತಿತ್ತು. ಆ್ಯಂಬುಲೆನ್ಸ್ ಸೇರಿದಂತೆ ತುರ್ತು ಸಂಬಂಧಲ್ಲಿ ಈ ಬ್ಯಾರಿಗೇಡ್‌ನ್ನು ನಿಲ್ದಾಣದ ಸಿಬ್ಬಂದಿ ಓಪನ್‌ ಮಾಡುತ್ತಿದ್ದರು. ಕೆಲ ಕಿಡಿಗೇಡಿಗಳು ಇವುಗಳು ತಂತ್ರಜ್ಞಾನ ಆಧಾರಿತ ಎಂಬುದನ್ನು ಅರಿಯದೆ ರಾತ್ರಿ ಮುರಿದು ಹಾಕಿ ಹೋಗಿದ್ದರು. ಇದರಿಂದ ಕೆಲವೇ ದಿನಗಳಲ್ಲಿ ಈ ಬೂಮ್ ಬ್ಯಾರಿಕೇಡ್ ಸೇವೆ ನಿಲ್ಲಿಸಿದವು.

ನಮಗೂ ಓಡಾಡಲು ಅವಕಾಶ ನೀಡಿ:

ನಾವು ಸಹ ಜನಪ್ರತಿನಿಧಿಗಳು. ನಮಗೇಕೆ ಬಿಆರ್‌ಟಿಎಸ್‌ ಮಾರ್ಗದಲ್ಲಿ ಸಂಚರಿಸಲು ಅವಕಾಶವಿಲ್ಲ. ನಮಗೂ ಸಂಚರಿಸಲು ಅವಕಾಶ ನೀಡಬೇಕು ಎಂದು ಮಹಾನಗರ ಪಾಲಿಕೆ ಸದಸ್ಯರು ಇತ್ತೀಚೆಗೆ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಒಕ್ಕೂರಲಿನಿಂದ ಒತ್ತಾಯಿಸಿದ್ದಾರೆ.ಬಿಆರ್‌ಟಿಎಸ್‌ ಬಸ್‌ನಲ್ಲಿ ಮೊದಲು ಹುಬ್ಬಳ್ಳಿಯಿಂದ ಧಾರವಾಡಕ್ಕೆ ಸಂಚರಿಸಲು 25ರಿಂದ 30 ನಿಮಿಷ ಬೇಕಾಗುತ್ತಿತ್ತು. ಇದೀಗ ಸಿಗ್ನಲ್ ಸಮಸ್ಯೆ, ಅಡ್ಡಾದಿಡ್ಡಿಯಾಗಿ ಬರುವ ಜಾನುವಾರು, ಖಾಸಗಿ ವಾಹನಗಳಿಂದ ವಿಳಂಬವಾಗುತ್ತಿದೆ. ಸಾಮಾನ್ಯ ಬಸ್‌ಗಳು ಬರುವ ಸಮಯಕ್ಕಿಂತ ಐದು ನಿಮಿಷ ಬೇಗ ಬರಬಹುದು ಅಷ್ಟೇ ಎಂದು ಪ್ರಯಾಣಿಕ ನೀಲಕಂಠ ಬಿ. ಹೇಳಿದರು.