ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 25ನೇ ಅವಧಿಗೆ 45ನೇ ಮೇಯರ್‌ ಆಗಿ 69ನೇ ವಾರ್ಡ್‌ನ ಸದಸ್ಯೆ ದುರ್ಗಮ್ಮ ಬಿಜವಾಡ, ಉಪಮೇಯರ್‌ ಆಗಿ 9ನೇ ವಾರ್ಡ್‌ನ ರತ್ನಾಬಾಯಿ ನಾಜರೆ ಚುನಾಯಿತರಾಗಿದ್ದಾರೆ.

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 25ನೇ ಅವಧಿಗೆ 45ನೇ ಮೇಯರ್‌ ಆಗಿ 69ನೇ ವಾರ್ಡ್‌ನ ಸದಸ್ಯೆ ದುರ್ಗಮ್ಮ ಬಿಜವಾಡ, ಉಪಮೇಯರ್‌ ಆಗಿ 9ನೇ ವಾರ್ಡ್‌ನ ರತ್ನಾಬಾಯಿ ನಾಜರೆ ಚುನಾಯಿತರಾಗಿದ್ದಾರೆ. ಬಹುಮತ ಇಲ್ಲದೇ ಇದ್ದರೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಸಿದ್ದ ಕಾಂಗ್ರೆಸ್‌ಗೆ ಮತ್ತೊಮ್ಮೆ ಮುಜುಗರವಾಗಿದೆ.

ಎಸ್ಸಿ ಮಹಿಳೆಗೆ ಮೀಸಲಿದ್ದ ಮೇಯರ್‌ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ್ದ ದುರ್ಗಮ್ಮ ಬಿಜವಾಡ 50 ಮತ ಪಡೆದರೆ, ಎದುರಾಳಿ ಕಾಂಗ್ರೆಸ್‌ ಅಭ್ಯರ್ಥಿ ಕವಿತಾ ಕಬ್ಬೇರ್‌ 35 ಮತ ಪಡೆದು ಪರಾಭವಗೊಂಡರು. ಇನ್ನು ಉಪಮೇಯರ್‌ ಸ್ಥಾನಕ್ಕೆ ಬಿಜೆಪಿಯಿಂದ ಸ್ಫರ್ಧಿಸಿದ್ದ ರತ್ನಾಬಾಯಿ ನಾಜರೆ 50 ಮತ ಪಡೆದರೆ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ದಿಲಾಷಾದ ಬೇಗಂ 35 ಹಾಗೂ ಎಐಎಂಐಎಂ ಪಕ್ಷದಿಂದ ಸ್ಪರ್ಧಿಸಿದ್ದ ವಹಿದಾಖಾನಂ ಅಲ್ಲಾಭಕ್ಷ ಕಿತ್ತೂರು 3 ಮತ ಪಡೆದು ಸೋಲು ಅನುಭವಿಸಿದರು. ಈ ಪ್ರಕ್ರಿಯೆಯನ್ನು ಸದಸ್ಯರು ತಮ್ಮ ಅಭ್ಯರ್ಥಿಗಳ ಪರ ಕೈ ಎತ್ತುವ ಮೂಲಕ ಪೂರ್ಣಗೊಳಿಸಿದರು.

ಚುನಾವಣಾಧಿಕಾರಿಯೂ ಆಗಿದ್ದ ಪ್ರಾದೇಶಿಕ ಆಯುಕ್ತೆ ಕೆ.ಎಂ. ಜಾನಕಿ ಅವರು ಅಭ್ಯರ್ಥಿ ಗೆಲುವು ಘೋಷಿಸಿ ಮೇಯರ್‌-ಉಪಮೇಯರ್‌ಗೆ ಹೂಗುಚ್ಚ ನೀಡಿ ಅಭಿನಂದಿಸಿದರು.

ಗಣ್ಯರು ಭಾಗಿ:

ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯಸಭೆ ಸದಸ್ಯ ಎಂ. ನಾಗರಾಜ, ವಿಧಾನಸಭೆ ವಿಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಶಾಸಕರಾದ ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಎಸ್‌.ವಿ. ಸಂಕನೂರ, ಪ್ರದೀಪ ಶೆಟ್ಟರ್‌, ಲಿಂಗರಾಜ ಪಾಟೀಲ, ಎಫ್‌.ಎಚ್‌. ಜಕ್ಕಪ್ಪನವರ ಭಾಗವಹಿಸಿದ್ದರು. ಇದರಲ್ಲಿ ಎಂ. ನಾಗರಾಜ, ಲಿಂಗರಾಜ ಪಾಟೀಲ, ಜಕ್ಕಪ್ಪನವರ ಮೊದಲ ಬಾರಿಗೆ ಮೇಯರ್‌-ಉಪಮೇಯರ್‌ಗೆ ಮತ ಚಲಾಯಿಸಿದರು. ಈ ನಡುವೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಜನಪ್ರತಿನಿಧಿಗಳ ಲೆಕ್ಕದಲ್ಲಿ ಮತದಾರರಾದರೂ ಚುನಾವಣೆಯಲ್ಲಿ ಪಾಲ್ಗೊಳ್ಳದೆ ಗೈರಾಗಿದ್ದರು.

ತಡವಾಗಿ ಬಂದ ಕಾಂಗ್ರೆಸ್‌ ಸದಸ್ಯರು:

ಕಾಂಗ್ರೆಸ್‌ನ ಇಲಿಯಾಸ್‌ ಮನಿಯಾರ್‌, ಶ್ರುತಿ ಚಲುವಾದಿ ಸಭೆಗೆ ತಡವಾಗಿ ಬಂದಿದ್ದರಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಇನ್ನು ದೀಪಾ ನೀರಲಕಟ್ಟಿ ಸಭೆಗೆ ಬಂದಿರಲಿಲ್ಲ. ಹೀಗಾಗಿ ಕಾಂಗ್ರೆಸ್‌ನ ಮೂವರು ಸದಸ್ಯರು ಚುನಾವಣೆಯಲ್ಲಿ ಗೈರಾಗಿದ್ದರು.

ವಿಜಯೋತ್ಸವ:

ಇತ್ತ ಚುನಾವಣೆಯಲ್ಲಿ ಬಿಜವಾಡ ಹಾಗೂ ನಾಜರೆ ಇಬ್ಬರು ಗೆಲವು ಸಾಧಿಸುತ್ತಿದ್ದಂತೆ ಅವರ ಬೆಂಬಲಿಗರು ಪಾಲಿಕೆ ಪ್ರಾಂಗಣದಲ್ಲಿ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ತಿನ್ನಿಸುವ ಮೂಲಕ ವಿಜಯೋತ್ಸವ ಆಚರಿಸಿದರು. ಬಳಿಕ ಮೇಯರ್‌- ಉಪಮೇಯರ್‌ ಇಬ್ಬರನ್ನು ಮೆರವಣಿಗೆ ಮೂಲಕ ಕರೆದು ಹೋಗಲಾಯಿತು.

ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಎಸ್.ಎಸ್. ಬಿರಾದಾರ, ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಅವರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಒಂದೇ ಅವಧಿಯಲ್ಲಿ ಮೇಯರ್‌- ಉಪಮೇಯರ್‌ ಪಟ್ಟ

5 ವರ್ಷದ ಅವಧಿಯಲ್ಲೇ ಮೇಯರ್‌- ಉಪಮೇಯರ್‌ ಆದ ಅದೃಷ್ಟ ದುರ್ಗಮ್ಮ ಬಿಜವಾಡ ಅವರದು. 23ರ ಅವಧಿಯಲ್ಲಿ ಎಸ್ಟಿ ಮಹಿಳೆಗೆ ಉಪಮೇಯರ್‌ ಸ್ಥಾನ ಮೀಸಲಾಗಿದ್ದರಿಂದ ದುರ್ಗಮ್ಮ ಲಕ್‌ ಸಿಕ್ಕರೆ, 25ನೇ ಅವಧಿಯಲ್ಲಿ ಮೇಯರ್‌ ಸ್ಥಾನವೂ ಎಸ್ಸಿಗೆ ಮೀಸಲಾಗಿದ್ದರಿಂದ ಮೇಯರ್‌ ಸ್ಥಾನಕ್ಕೆ ಬಿಜೆಪಿ ದುರ್ಗಮ್ಮನಿಗೆ ಮಣೆ ಹಾಕಿತು. ಹೀಗಾಗಿ ಒಂದೇ ಅವಧಿಯಲ್ಲಿ ಪಕ್ಷೇತರರಾಗಿ ಆಯ್ಕೆಯಾಗಿ ಬಂದು ಎರಡು ಹುದ್ದೆ ಅಲಂಕರಿಸಿದಂತಾಗಿದೆ. ಪಕ್ಷೇತರರಾಗಿ ಆಯ್ಕೆಯಾದ ಬಳಿಕ ಬಿಜೆಪಿ ಬೆಂಬಲಿಸಿದ್ದರು. ಹೀಗಾಗಿ ಬಿಜೆಪಿಯಲ್ಲಿ ಯಾರೂ ಎಸ್ಸಿ ಮಹಿಳೆ ಇಲ್ಲದೆ ಇರುವುದರಿಂದ ಇವರಿಗೆ ಸ್ಥಾನಮಾನ ಲಭಿಸಿದೆ.ಮೇಸ್ತ್ರಿಗೆ ಕೊನೆ ಕ್ಷಣದಲ್ಲಿ ತಪ್ಪಿದ ಮೇಯರ್‌

ಈ ನಡುವೆ ಚಂದ್ರಿಕಾ ಮೇಸ್ತ್ರಿ ಕೂಡ ಮೇಯರ್‌ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಶುಕ್ರವಾರ ಸಂಜೆ ವರೆಗೂ ಇವರ ಹೆಸರು ಮುಂಚೂಣಿಯಲ್ಲಿತ್ತು. ಇವರು ಸಹ ಪಕ್ಷೇತರರಾದರೂ ಮೊದಲು ಬಿಜೆಪಿಯಲ್ಲಿ ಇದ್ದರು. ಇವರ ಪತಿ ಬಿಜೆಪಿಯಿಂದಲೇ ಮೇಯರ್‌ ಆಗಿದ್ದರೂ ವಿವಿಧ ಕಾರಣಗಳಿಂದ ಬಿಜೆಪಿ ಬಿಟ್ಟು ಹೋಗಿದ್ದರು. ಇದು ಕೂಡ ಮೇಯರ್‌ ಸ್ಥಾನ ತಪ್ಪಲು ಒಂದು ಕಾರಣ ಎಂದು ಪಕ್ಷದ ಮೂಲಗಳು ತಿಳಿಸುತ್ತವೆ. ಪೂರ್ವ ಕ್ಷೇತ್ರಕ್ಕೆ ಕೊನೆಗೂ ಸಿಕ್ತು ಸ್ಥಾನ

ನಾಲ್ಕು ವರ್ಷದಿಂದ ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರಕ್ಕೆ ಮೇಯರ್‌ ಸ್ಥಾನ ಸಿಕ್ಕಿರಲಿಲ್ಲ. ಎರಡು ಬಾರಿ ಪಶ್ಚಿಮ ಕ್ಷೇತ್ರಕ್ಕೆ ಸಿಕ್ಕಿದ್ದರೆ, ಸೆಂಟ್ರಲ್‌, ಧಾರವಾಡ ಗ್ರಾಮೀಣಕ್ಕೆ ತಲಾ ಒಂದು ಬಾರಿ ಮೇಯರ್‌ ಪಟ್ಟ ಒಲಿದಿತ್ತು. ಹೀಗಾಗಿ ಪೂರ್ವ ಕ್ಷೇತ್ರಕ್ಕೆ ಕೊಡಿ. ಅಲ್ಲಿ ಪಕ್ಷ ಸಂಘಟನೆಗೆ ಅನುಕೂಲವಾಗುತ್ತದೆ ಎಂಬ ಬೇಡಿಕೆ ಬಹುದಿನಗಳಿಂದ ಇತ್ತು. ಪ್ರತಿಬಾರಿಯೂ ಅದೇನೋ ಕಾರಣದಿಂದ ಕೈ ತಪ್ಪುತ್ತಿತ್ತು. ಈ ಸಲದ ಕೊನೆಯ ಅವಧಿಗೆ ಮೇಯರ್‌ ಸ್ಥಾನ ಪೂರ್ವ ಕ್ಷೇತ್ರಕ್ಕೆ ಸಿಕ್ಕಂತಾಗಿದೆ. ಇನ್ನು ಮೇಯರ್‌ ಸ್ಥಾನ ಹುಬ್ಬಳ್ಳಿಗೆ ಸಿಕ್ಕಿರುವುದರಿಂದ ಸಹಜವಾಗಿ ಉಪಮೇಯರ್‌ ಸ್ಥಾನ ಧಾರವಾಡಕ್ಕೆ ಕೊಟ್ಟಿದೆ.ಸ್ವಚ್ಛತೆ, ನೀರಿಗೆ ಮೊದಲ ಆದ್ಯತೆ!

ಎಲ್ಲ ಸದಸ್ಯರು, ಪಕ್ಷದ ಮುಖಂಡರ ಸಹಕಾರದಿಂದ ಮಹಾನಗರದಲ್ಲಿ ಸ್ವಚ್ಛತೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳುತ್ತೇನೆ. 5 ವರ್ಷದಲ್ಲೇ ಮೇಯರ್‌-ಉಪಮೇಯರ್‌ ಆಗಿರುವುದು ಖುಷಿ ತಂದಿದೆ.

ದುರ್ಗಮ್ಮ ಬಿಜವಾಡ, ಮೇಯರ್‌