ಸಾರಾಂಶ
ದಸರಾ ಹಬ್ಬ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚುವ ಕಾರಣಕ್ಕಾಗಿ ಸೆ.26ರಿಂದ ಕೆಎಸ್ಸಾರ್ಟಿಸಿಯಿಂದ 2,300 ಹೆಚ್ಚುವರಿ ಬಸ್‌ಗಳ ಸೇವೆ ನೀಡಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ದಸರಾ ಹಬ್ಬ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚುವ ಕಾರಣಕ್ಕಾಗಿ ಸೆ.26ರಿಂದ ಕೆಎಸ್ಸಾರ್ಟಿಸಿಯಿಂದ 2,300 ಹೆಚ್ಚುವರಿ ಬಸ್‌ಗಳ ಸೇವೆ ನೀಡಲಾಗುತ್ತಿದೆ.ಆಯುಧ ಪೂಜೆ ಹಿನ್ನೆಲೆಯಲ್ಲಿ ಸಾಲುಸಾಲು ರಜೆಯಿರುವ ಕಾರಣ ಬೆಂಗಳೂರಿನಿಂದ ರಾಜ್ಯ ಮತ್ತು ಹೊರರಾಜ್ಯಗಳಿಗೆ ತೆರಳುವವರ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿ ಸೆ.26, 27 ಮತ್ತು ಸೆ.30ರಂದು 2,300 ಹೆಚ್ಚುವರಿ ಬಸ್‌ಗಳನ್ನು ಓಡಿಸಲಿದೆ. ಈ ಬಸ್‌ಗಳು ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಹಾಗೂ ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದಿಂದ ಕಾರ್ಯಾಚರಣೆಗಿಳಿಯಲಿವೆ. ಈ ಹೆಚ್ಚುವರಿ ಬಸ್‌ಗಳು ವಿವಿಧ ನಗರಗಳಿಂದ ಬೆಂಗಳೂರಿಗೆ ಅ.2 ಹಾಗೂ 5ರಂದು ಸೇವೆ ನೀಡಲಿವೆ.
ಇನ್ನು, ಮೈಸೂರು ದಸರಾ ವೀಕ್ಷಣೆಗೆ ಬರುವವರಿಗಾಗಿ ಕೆಎಸ್ಸಾರ್ಟಿಸಿ 610 ವಿಶೇಷ ಸಾರಿಗೆ ವ್ಯವಸ್ಥೆ ಮತ್ತು ವಿಶೇಷ ಪ್ಯಾಕೇಜ್ ವ್ಯವಸ್ಥೆ ಮಾಡುತ್ತಿದೆ. ಅದರಲ್ಲಿ ಬೆಂಗಳೂರಿನ ಮೈಸೂರು ರಸ್ತೆ ಬಸ್‌ನಿಲ್ದಾಣದಿಂದ ಮೈಸೂರಿಗೆ 260 ಹೆಚ್ಚುವರಿ ಬಸ್‌ಗಳು ಸೇವೆ ನೀಡಲಿವೆ. ಹಾಗೆಯೇ, ಮೈಸೂರು ಸುತ್ತಮುತ್ತಲ ಪ್ರದೇಶಗಳಾದ ಚಾಮುಂಡಿಬೆಟ್ಟ, ಕೆಆರ್‌ಎಸ್ ಅಣೆಕಟ್ಟು, ಶ್ರೀರಂಗಪಟ್ಟಣ, ನಂಜನಗೂಡು, ಮಡಿಕೇರಿ, ಮಂಡ್ಯ, ಮಳವಳ್ಳಿ, ಎಚ್.ಡಿ.ಕೋಟೆ, ಚಾಮರಾಜನಗರ, ಹುಣಸೂರು, ಕೆ.ಆರ್.ನಗರ ಹಾಗೂ ಗುಂಡ್ಲುಪೇಟೆ ಮತ್ತಿತರ ಸ್ಥಳಗಳಿಗೆ 350 ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆಗಿಳಿಸಲಾಗುತ್ತಿದೆ ಎಂದು ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.ಪ್ರವಾಸಿ ಪ್ಯಾಕೇಜ್:
ಮೈಸೂರು ಪ್ರವಾಸಕ್ಕೆ ಬರುವವರಿಗಾಗಿ ಸೆ.27ರಿಂದ ಅ.7ರವರೆಗೆ ಮೂರು ವಿಧದ ಪ್ರವಾಸಿ ಪ್ಯಾಕೇಜ್ ಸೇವೆ ನೀಡಲಾಗುತ್ತಿದೆ. ಗಿರಿದರ್ಶಿನಿ ಹೆಸರಿನ ಪ್ಯಾಕೇಜ್‌ನಲ್ಲಿ ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು ಮತ್ತು ಚಾಮುಂಡಿಬೆಟ್ಟಕ್ಕೆ ಪ್ರವಾಸ ಕೈಗೊಳ್ಳಲಾಗುತ್ತದೆ. ಜಲದರ್ಶಿನಿ ಅಡಿ ಬೈಲಕುಪ್ಪೆಯ ಗೋಲ್ಡನ್ ಟೆಂಪಲ್, ದುಬಾರೆ ಅರಣ್ಯ ನಿಸರ್ಗಧಾಮ, ರಾಜಾಸೀಟ್, ಹಾರಂಗಿ ಜಲಾಶಯ ಮತ್ತು ಕೆಆರ್‌ಎಸ್‌ಗೆ ಹಾಗೂ ದೇವದರ್ಶಿನಿ ಹೆಸರಿನಲ್ಲಿ ನಂಜನಗೂಡು, ಬ್ಲಫ್, ಮುಡುಕುತೊರೆ, ತಲಕಾಡು, ಸೋಮನಾಥಪುರ ಮತ್ತು ಶ್ರೀರಂಗಪಟ್ಟಣಕ್ಕೆ ಪ್ರವಾಸ ಕರೆದುಕೊಂಡು ಹೋಗಲಾಗುತ್ತದೆ. ಈ ಪ್ರವಾಸಿ ಪ್ಯಾಕೇಜ್‌ಗಳು ಮೈಸೂರಿನಿಂದ ಹೊರಡಲಿದೆ.ಈ ಎಲ್ಲ ಸೇವೆಗಳ ಕುರಿತು ಹೆಚ್ಚಿನ ಮಾಹಿತಿ ಹಾಗೂ ಮುಂಗಡ ಟಿಕೆಟ್ ಕಾಯ್ದಿರಿಸಲು ನಿಗಮದ ವೆಬ್‌ಸೈಟ್ www.ksrtc.karnataka.gov.inಗೆ ಭೇಟಿ ನೀಡಬಹುದು.