ಶಿಕಾರಿಪುರದಲ್ಲಿ ದಸರಾಗೆ ಚಾಲನೆ: ಹೊಳೆಪೂಜೆ ಸಂಪನ್ನ

| Published : Oct 16 2023, 01:45 AM IST

ಶಿಕಾರಿಪುರದಲ್ಲಿ ದಸರಾಗೆ ಚಾಲನೆ: ಹೊಳೆಪೂಜೆ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಬೀರಲಿಂಗೇಶ್ವರ, ಮಾರಿಕಾಂಬೆ, ಹುಚ್ಚುರಾಯಸ್ವಾಮಿ ದೇಗುಲಗಳಿಗೆ ಪೂಜೆ, ಡೊಳ್ಳು-ವಾದ್ಯಮೇಳದೊಂದಿಗೆ ಮೆರವಣಿಗೆ
ಕನ್ನಡಪ್ರಭ ವಾರ್ತೆ, ಶಿಕಾರಿಪುರ ನವರಾತ್ರಿ ಆರಂಭದ ಹಿನ್ನೆಲೆ ಭಾನುವಾರ ಪಟ್ಟಣದ ಗಿಡ್ಡೇಶ್ವರ ದೇವರು (ಬೀರಲಿಂಗೇಶ್ವರ ) ಹಾಗೂ ಶಿರಸಿ ಮಾರಿಕಾಂಬೆ ದೇವರ ಪಲ್ಲಕ್ಕಿ ಉತ್ಸವದ ಮೂಲಕ ಶ್ರೀ ಹುಚ್ಚುರಾಯಸ್ವಾಮಿ ದೇವಸ್ಥಾನದ ಸಮೀಪದ ಪುಷ್ಕರಿಣಿಗೆ ಬ್ರಾಹ್ಮಿ ಮುಹೂರ್ತದಲ್ಲಿ ತೆರಳಿ, ವಿಶೇಷ ಗಂಗಾಪೂಜೆ ನಡೆಸಲಾಯಿತು. ಹೊಳೆಪೂಜೆ ಮುಗಿಸಿಕೊಂಡು ವಿಜೃಂಭಣೆಯಿಂದ ಡೊಳ್ಳು ಮತ್ತಿತರ ವಾದ್ಯ ಮೇಳಗಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಬಳಿಕ ಗಿಡ್ಡೇಶ್ವರ ದೇವಸ್ಥಾನವನ್ನು ಮೆರವಣಿಗೆ ತಲುಪಿತು. ಮೆರವಣಿಗೆಯಲ್ಲಿ ಗೋರಪ್ಪನವರು ಅಲ್ಲಲ್ಲಿ ಹಣ್ಣು- ತುಪ್ಪ- ನೈವೇದ್ಯಗಳನ್ನು ಮಾಡುತ್ತಿದ್ದರು, ನವರಾತ್ರಿಯು ದೇವಿ ಕಾರ್ಯಕ್ರಮವಾದ ಕಾರಣ ಚೌಟಕಿಯ ಜೋಗಪ್ಪನವರು ಚೌಟಕಿ ಬಾರಿಸುತ್ತ ದೇವಿಯ ಹಾಡುಗಳನ್ನು ಹೇಳುತ್ತಿದ್ದರು, ಚಾಟಿ ಸೇವೆ ಮಾಡುತ್ತಿದ್ದ ಚಾಟಿ ಹೊರೆಯನ್ನು ಹೊತ್ತವರು ತಮ್ಮ ಕಾಲಿಗೆ ಚಾಟಿಗಳಿಂದ ಹೊಡೆದುಕೊಳ್ಳುತ್ತಿದ್ದರು. ಕೇಲನ್ನು ಹೊತ್ತ ಮಹಿಳೆಯರು ಶ್ರೀದೇವಿಯ ಹಾಡುಗಳನ್ನು ಹೇಳುತ್ತ ದೇವರ ಹಿಂದೆ ಸಾಗಿದರೆ, ಚೌರಿ ಬೀಸುವವರು ಚೌರಿ ಸೇವೆಯನ್ನು ಮಾಡುವವರು ದೇವರಿಗೆ ಚಾಮರ ಮತ್ತು ಚೌರಿಯನ್ನು ಬೀಸುತ್ತಿದ್ದರು, ಮೆರವಣಿಗೆಯ ಉದ್ದಕ್ಕೂ ಆಕರ್ಷಕವಾಗಿದ್ದ ಮಾಯನ ಮರೆತಪ್ಪ ಮೆರವಣಿಗೆ ಆಕರ್ಷಣೆಯ ಜತೆಗೆ ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ರೋಚಕವನ್ನು ಉಂಟುಮಾಡುವಂತಿತ್ತು. ದೇವರ ಸೇವೆಗೆ ಕಂಕಣ ಬದ್ಧರಾಗಿದ್ದ ಅಲಗಿನ ಸೇವೆಯವರು ಸಮವಸ್ತ್ರಧಾರಿಯಾಗಿ ದೇವರ ಮೆರವಣಿಗೆಯನ್ನು ಶಿಸ್ತುಬದ್ಧವಾಗಿ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಇಂದಿನಿಂದ 9 ದಿನಗಳ ಕಾಲ ದೇವಸ್ಥಾನದಲ್ಲಿ ದೀಪ ಹಾಕುವ ಕಾರ್ಯಕ್ರಮ ಆರಂಭಗೊಂಡಿದ್ದು, ದೇವಸ್ಥಾನದಲ್ಲಿ ದುರ್ಗಾಮಾತೆ ದೇವಿ ಪುರಾಣ ಕಾರ್ಯಕ್ರಮ ಆರಂಭಗೊಳ್ಳಲಿದೆ. ಪ್ರತಿದಿನ ರಾತ್ರಿ ದೇವಿ ಪಾರಾಯಣ ಮುಗಿದ ಮೇಲೆ ಮಹಾಮಂಗಳಾರತಿ ನಂತರ ಭಕ್ತರಿಂದ -ಭಕ್ತರಿಗಾಗಿ ಪ್ರಸಾದ ವಿನಿಯೋಗ ಕಾರ್ಯಕ್ರಮವು ನಡೆಯಲಿದೆ. ನವಮಿಯ ದಿನದಂದು ವಿಶೇಷ ಆಯುಧ ಪೂಜೆ ನಡೆಯಲಿದ್ದು, ಅಂದು ಗರಡಿ ಮನೆಯ ಯುವ ಪೈಲ್ವಾನರು ತಮ್ಮ ಗರಡಿ ಮನೆಯಲ್ಲಿ ಬಳಸುವ ದೇಹದಂಡನ ಸಾಧನಗಳೊಂದಿಗೆ ದೇವಸ್ಥಾನದ ಶಸ್ತ್ರಗಳನ್ನು ಹಿಡಿದು ಹೊಳೆಪೂಜೆ ಕಾರ್ಯಕ್ರಮವನ್ನು ನೆರವೇರಿಸುವರು. ಅನಂತರ ದಶಮಿಯಂದು ತಾಲೂಕು ಆಡಳಿತದ ವತಿಯಿಂದ ಬೇಗೂರು ಮರಡಿಯಲ್ಲಿ ನಡೆಯಲಿರುವ ತಾಲೂಕಿನ ವಿವಿಧ ಭಾಗದ ದೇವರ ಜತೆ ತೆರಳಿ ಸ್ಥಳದಲ್ಲಿ ನಡೆಯುವ ಬನ್ನಿ ಮುಡಿಯುವ ಕಾರ್ಯಕ್ರಮದೊಂದಿಗೆ ನವರಾತ್ರಿ ಉತ್ಸವದ ಕಾರ್ಯಕ್ರಮವು ಸಂಪನ್ನಗೊಳ್ಳಲಿದೆ. - - - -ಫೋಟೋ: ನವರಾತ್ರಿ ಆರಂಭದ ಹಿನ್ನೆಲೆ ಭಾನುವಾರ ಶಿಕಾರಿಪುರ ಪಟ್ಟಣದ ಪುಷ್ಕರಿಣಿಗೆ ಬ್ರಾಹ್ಮಿ ಮುಹೂರ್ತದಲ್ಲಿ ತೆರಳಿ ವಿಶೇಷ ಗಂಗೆಪೂಜೆ ನೆರವೇರಿಸಲಾಯಿತು.