ಧೂಳು ತಿಂದ ತಾಳೆಗರಿ, ಕೋರಿ ಕಾಗದ ಡಿಜಿಟಲೀಕರಣ!

| Published : Dec 02 2024, 01:18 AM IST

ಸಾರಾಂಶ

ಬರೀ ಶುದ್ಧೀಕರಣ ಮಾತ್ರವಲ್ಲದೇ, ತಾಳೆಗೆರೆಗಳ ಮಾಹಿತಿಯನ್ನು ಅರ್ಥೈಸಿಕೊಳ್ಳುವ ಹಿನ್ನೆಲೆಯಲ್ಲಿ ಹಳೆಗನ್ನಡ ಇರುವ ತಾಳೆಗೆರೆಗಳ ಸ್ಕ್ಯಾನ್‌ ಜತೆಗೆ ಹೊಸಗನ್ನಡಕ್ಕೆ ಅನುವಾದ ಕಾರ್ಯವೂ ನಡೆಯುತ್ತಿರುವುದು ವಿಶೇಷ.

ಬಸವರಾಜ ಹಿರೇಮಠ

ಧಾರವಾಡ: 1949ರಿಂದ ಇಲ್ಲಿಯ ವರೆಗೂ ಸಂಗ್ರಹಿಸಿದ ಭಾರತೀಯ ಪ್ರಾಚೀನ ಇತಿಹಾಸ, ಸಂಸ್ಕೃತಿ ಪ್ರತೀಕಗಳಾದ ಹಸ್ತಪ್ರತಿಗಳನ್ನು (ತಾಳೆಗೆರೆ ಹಾಗೂ ನೂರಾರು ವರ್ಷಗಳ ಕಾಗದದ ಪ್ರತಿಗಳ) ಶುದ್ಧೀಕರಿಸುವುದು ಹಾಗೂ ಮುಂದಿನ ಪೀಳಿಗೆಗೆ ಅವುಗಳನ್ನು ವರ್ಗಾಯಿಸಲು ಡಿಜಿಟಲೀಕರಣಗೊಳಿಸುವ ಮಹತ್ತರ ಕಾರ್ಯಕ್ಕೆ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್‌.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠ ಕೈ ಹಾಕಿದೆ.

ಡಾ. ಆರ್‌.ಸಿ. ಹಿರೇಮಠ, ಡಾ. ಎಂ.ಎಂ. ಕಲಬುರ್ಗಿ, ಡಾ. ವೀರಣ್ಣ ರಾಜೂರ ಸೇರಿದಂತೆ ವಿಭಾಗದ ಹಿರಿಯರು ಹಾಗೂ ಅವರ ಶಿಷ್ಯಂದಿರು ಸುಮಾರು 75 ವರ್ಷಗಳಿಂದ ಇಲ್ಲಿಯ ವರೆಗೆ ಸಂಗ್ರಹಿಸಿರುವ ಸುಮಾರು ಏಳು ಲಕ್ಷ ತಾಳೆಗೆರೆಗಳು, 3 ಸಾವಿರಕ್ಕೂ ಹೆಚ್ಚು ಕೋರಿ ಕಾಗದಗಳು ಧೂಳು ಹಿಡಿದು ನಶಿಸುವ ಹಂತಕ್ಕೆ ಬಂದಿದ್ದವು. ಕಳೆದ 15 ದಿನಗಳಿಂದ ಬೆಂಗಳೂರಿನ ಇ-ಸಾಹಿತ್ಯ ದಾಖಲೀಕರಣ ಕೇಂದ್ರದ ಅಶೋಕ ದೊಮ್ಮಲೂರ ನೇತೃತ್ವದಲ್ಲಿ ಅವುಗಳನ್ನು ರಾಸಾಯನಿಕ ಸಿಂಪರಣೆ ಮೂಲಕ ಶುಚಿಗೊಳಿಸಿ, ಸ್ಕ್ಯಾನಿಂಗ್‌ ಮಾಡಿ ಡಿಜಿಲೀಕರಣ ಕೆಲಸ ಮಾಡಲಾಗುತ್ತಿದೆ.

ಬರೀ ಶುದ್ಧೀಕರಣ ಮಾತ್ರವಲ್ಲದೇ, ತಾಳೆಗೆರೆಗಳ ಮಾಹಿತಿಯನ್ನು ಅರ್ಥೈಸಿಕೊಳ್ಳುವ ಹಿನ್ನೆಲೆಯಲ್ಲಿ ಹಳೆಗನ್ನಡ ಇರುವ ತಾಳೆಗೆರೆಗಳ ಸ್ಕ್ಯಾನ್‌ ಜತೆಗೆ ಹೊಸಗನ್ನಡಕ್ಕೆ ಅನುವಾದ ಕಾರ್ಯವೂ ನಡೆಯುತ್ತಿರುವುದು ವಿಶೇಷ. ಬಸವಕಲ್ಯಾಣದಲ್ಲಿ ಶಿವಯೋಗ ಸಾಧನೆ ಮಾಡುವ ಹತ್ತಕ್ಕೂ ಹೆಚ್ಚು ಶರಣರು ಹಸ್ತಪ್ರತಿಗಳ, ಕಾಗದಗಳ ಶುದ್ಧೀಕರಣ ಕಾರ್ಯದಲ್ಲಿ ಉಚಿತವಾಗಿ ಕೈ ಜೋಡಿಸಿದ್ದಾರೆ. ಶುದ್ಧೀಕರಣಗೊಂಡ ತಾಡೋಲೆ ಅಥವಾ ತಾಳೆಗೆರೆಗಳನ್ನು ಸಂಯೋಜಕ ವಿರೂಪಾಕ್ಷಿ ಮಟ್ಟಿ ಎಂಬುವರು ಈ ಎಲ್ಲವನ್ನು ಸ್ಕ್ಯಾನ್‌ ಮಾಡಿ ಡಿಜಟಲೀಕರಣ ಮಾಡುತ್ತಿದ್ದಾರೆ.

ಶಿವಯೋಗ ಸಾಧಕರಾದ ಗಂಗಾಧರ ದೇವರು ಹಾಗೂ ಗಾಯತ್ರಿ ತಾಯಿ ಹೇಳುವ ಪ್ರಕಾರ, 12 ಶತಮಾನದಿಂದ ಹಿಡಿದು ಈಚೆಗಿನ ವರೆಗಿನ ಸಾಹಿತ್ಯದ ಭಂಡಾರ ಇಲ್ಲಿದೆ. ತಾಡೋಲೆಗಳ (ಹಸ್ತಪ್ರತಿ) ಶುದ್ಧೀಕರಣ ಕಾರ್ಯ ನಮಗೆ ದೊರೆತಿರುವುದು ಜೀವನದ ಭಾಗ್ಯ ಎಂದರು.

ಏನೇನು ಸಾಹಿತ್ಯ?

ಕನ್ನಡ, ತೆಲುಗು, ತಮಿಳು, ಪ್ರಾಕೃತ, ಮಲಯಾಳಂ, ಮರಾಠಿ ಸಾಹಿತ್ಯ, ವಚನ ಸಾಹಿತ್ಯ ಅದರಲ್ಲಿ ಬಸವಣ್ಣ, ಚನ್ನಬಸವಣ್ಣ, ದೇವರ ದಾಸಿಮಯ್ಯ, ಕೆಳವರ್ಗದ ವಚನಕಾರರು, ಮಹಿಳಾ ವಚನಕಾರರು, ಅಲ್ಲಮಪ್ರಭು, ಜೇಡರ ದಾಸಿಮಯ್ಯ, ನಿರಂಜನವಂಶ ರತ್ನಾಕರ ಸೇರಿದಂತೆ ಶರಣರ, ಜೈನ ಸಾಹಿತ್ಯ, ಬ್ರಾಹ್ಮಣ ಸಾಹಿತ್ಯ, ಬೌದ್ಧ ಸಾಹಿತ್ಯ, ಲಿಂಗಾಯತರ ಸಾಹಿತ್ಯವೂ ಇದೆ. ಜತೆಗೆ ನಳಚರಿತ್ರೆ, ಪಂಚತಂತ್ರ, ಭಿಕ್ಷಾಟನೆ ಚರಿತ್ರೆ, ಕಾಲಜ್ಞಾನ ಪುಸ್ತಕ ಗಣಗೀತಾ, ಭಾಗವತ, ದಮಯಂತಿ, ಐರಾವತ (ಯಕ್ಷಗಾನ) ಹೀಗೆ ನೂರಾರು ಕಾವ್ಯ, ಸಾಹಿತ್ಯವಿದೆ. ಹಲವಾರು ವರ್ಷಗಳಿಂದ ಈ ಹಸ್ತಪ್ರತಿಗಳು ಪರಿಷ್ಕರಣೆ, ಶುದ್ಧೀಕರಣಗೊಳ್ಳದೇ ಹಾಳಾಗುವ ಸ್ಥಿತಿಯಲ್ಲಿದ್ದು ಇದೀಗ ಪರಿಷ್ಕರಣೆ ಮಾಡುತ್ತಿರುವುದು ಸಾಮಾನ್ಯ ಸಂಗತಿ ಏನಲ್ಲ.

ಕವಿವಿ ಕುಲಪತಿ, ಕುಲಸಚಿವರ ಮಾರ್ಗದರ್ಶನದಲ್ಲಿ ಮಹತ್ವದ ಈ ಕಾರ್ಯಕ್ಕೆ ಕೈ ಹಾಕಿದ್ದು, ಹಲವು ವರ್ಷಗಳಿಂದ ಪರಿಷ್ಕರಣೆ ಆಗದ ಲಕ್ಷಾಂತರ ಹಸ್ತಪ್ರತಿಗಳನ್ನು ಶುದ್ಧೀಕರಣಗೊಳಿಸಿ ಡಿಜಿಟಲೀಕರಣ ಮಾಡಲಾಗುತ್ತಿದೆ. ಜತೆಗೆ ಮುಂದಿನ ಪೀಳಿಗೆ ಈ ಸಾಹಿತ್ಯ ಸಂಪತ್ತು ಸರಳವಾಗಿ ಲಭಿಸುವಂತೆ ₹20 ಲಕ್ಷ ವೆಚ್ಚದಲ್ಲಿ ಮ್ಯೂಸಿಯಂ ನಿರ್ಮಿಸಿ ಸ್ಮೃತಿ ಭಂಡಾರವನ್ನು ಸಂರಕ್ಷಿಸಲಾಗುವುದು. ಅಗತ್ಯ ತಂತ್ರಜ್ಞಾನ ಬಳಸಿ ಹಸ್ತಪ್ರತಿಗಳನ್ನು ಕಾಪಿಟ್ಟುಕೊಳ್ಳಲು, ಓದುಗರಿಗೆ, ಸಂಶೋಧಕರಿಗೆ ಮುಂದಿನ ಪೀಳಿಗೆಗೆ ನೂರಾರು ವರ್ಷಗಳ ಕಾಲ ಉಳಿಯಲು ಆಧುನಿಕ ತಂತ್ರಜ್ಞಾನದ ಗ್ರಂಥಾಲಯ ನಿರ್ಮಿಸಲಾಗುತ್ತಿದೆ ಎಂದು ಡಾ.ಆರ್‌.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷರಾದ ಪ್ರೊ. ಕೃಷ್ಣ ನಾಯಕ ''''''''ಕನ್ನಡಪ್ರಭ''''''''ಕ್ಕೆ ಮಾಹಿತಿ ನೀಡಿದರು.

ಅನಾದಿ ಕಾಲದಲ್ಲಿ ತಾಳೆಗೆರೆಗಳನ್ನು ಕಾಗದಗಳನ್ನಾಗಿ ಮಾಡಿ ಅನೇಕ ಸಾಹಿತ್ಯ ರಚನೆ ಮಾಡಿದ್ದಾರೆ. ಈಗಿನ ಕಾಲಘಟ್ಟದ ಹಿರಿಯರು ನಮ್ಮ ಬಿಟ್ಟು ಹೋಗಿರುವ ಅಮೂಲ್ಯ ತಾಳೆಗೆರೆ ಜ್ಞಾನ ಸಂಪತ್ತನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಈ ಕಾರ್ಯ ಶ್ಲಾಘನೀಯವೇ ಸರಿ. ಸಂರಕ್ಷಣೆ

ಹಲವು ವರ್ಷಗಳಿಂದ ಶುದ್ಧೀಕರಣವಾಗದೇ ನಶಿಸುತ್ತಿದ್ದ ಲಕ್ಷಾಂತರ ಹಸ್ತಪ್ರತಿ, ಕಾಗದ ಪ್ರತಿಗಳನ್ನು ಸಂರಕ್ಷಣೆ ಮುಂಚೆಯೇ ಆಗಬೇಕಿತ್ತು. ತಡವಾದರೂ ಮುಂದಿನ ಪೀಳಿಗೆಗೆ ಈ ಸಂಪತ್ತು ವರ್ಗಾಯಿಸುವ ಜವಾಬ್ದಾರಿ ನಮ್ಮದು. ಆರೇಳು ತಿಂಗಳಲ್ಲಿ ಎಲ್ಲವೂ ಡಿಜಲೀಕರಣಗೊಳ್ಳಲಿವೆ. ಈ ಮೂಲಕ ಓದುಗರು, ಸಂಶೋಧಕರು ಹಾಗೂ ಮುಂದಿನ ಪೀಳಿಗೆ ಇವು ಲಭ್ಯವಾಗಲಿವೆ.

ಡಾ. ಬಿ.ಎಂ. ಪಾಟೀಲ, ಕವಿವಿ ಪ್ರಭಾರ ಕುಲಪತಿಗಳು