ಹೊಸಪೇಟೆ: ಕಾರ್ಗಿಲ್ ನಲ್ಲಿ ಸೈನಿಕರಿಗೆ ಪ್ರಕೃತಿಯೇ ದೊಡ್ಡ ವೈರಿಯಾಗಿತ್ತು, ಅದನ್ನು ಎದುರಿಸಿ ಪಾಕಿಸ್ತಾನಿ ಸೈನಿಕರನ್ನು ಹಿಮ್ಮೆಟ್ಟಿಸಿದ್ದು ಬಹಳ ದೊಡ್ಡ ಸಾಧನೆ. ಇದು ಯುವ ಪೀಳಿಗೆಗೆ ಒಂದು ಆದರ್ಶ ಹೋರಾಟದ ಕಥನವಾಗಬೇಕಿದೆ ಎಂದು ಬೆಂಗಳೂರಿನ ಭಯೋತ್ಪಾದಕ ನಿಗ್ರಹ ದಳದ ನಿರ್ದೇಶಕ ಬ್ರಿಗೇಡಿಯರ್ ಸಿ. ದಯಾಳನ್ ಹೇಳಿದರು.ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾ ಘಟಕದ ವತಿಯಿಂದ ಹೊಸಪೇಟೆ ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 27ನೇ ವರ್ಷದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ವಾರ್ಥಕ್ಕಿಂತ ಮೊದಲು ಕರ್ತವ್ಯ ಎಂಬುದೇ ಸೈನಿಕರ ಜೀವನ. ಅದನ್ನು ಪೂರ್ಣ ಪ್ರಮಾಣದಲ್ಲಿ ಮೈಗೂಡಿಸಿಕೊಂಡಿದ್ದರಿಂದಲೇ ಕಾರ್ಗಿಲ್‌ನಂತಹ ದುರ್ಗಮ ಬೆಟ್ಟ ಪ್ರದೇಶಗಳಲ್ಲಿ ಹೋರಾಡಿ ಪಾಕಿಸ್ತಾನದ ಸೇನೆಯನ್ನು ಬಗ್ಗುಬಡಿಯಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.
ಕೊಟ್ಟೂರು ಚಾನುಕೋಟಿ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ನಮ್ಮ ಭಾರತೀಯ ಸೈನಿಕರ ಹೋರಾಟ ನಡೆಸಿದ ಕೆಚ್ಚೆದೆಯನ್ನು ಇಡೀ ಜಗತ್ತಿಗೆ ಪರಿಚಯಿಸಿದೆ. ಗಾಲ್ವಾನ್‌ನಲ್ಲಿ ಸಹ ನಮ್ಮ ಸೈನಿಕರು ಬರಿಗೈಯಲ್ಲೇ ಚೀನಾ ಸೈನಿಕರನ್ನು ಬಗ್ಗು ಬಡಿದ ರೀತಿಯೂ ಅದ್ಭುತ. ಇಂದು ದೇಶದಲ್ಲಿ ರಕ್ಷಣಾ ಪಡೆಗಳಿಗೆ ಆಧುನಿಕ ಶಸ್ತ್ರಾಸ್ತ್ರ ಒದಗಿಸುವ ವ್ಯವಸ್ಥೆ ಇದ್ದು, ಇದು ಸೈನಿಕರ ಆತ್ಮಸ್ಥೈರ್ಯ ಇನ್ನಷ್ಟು ಹೆಚ್ಚಿಸಿದೆ ಎಂದರು.ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ. ಮಂಜುನಾಥ್, ವಾಯುಪಡೆಯ ನಿವೃತ್ತ ಗ್ರೂಪ್ ಕ್ಯಾಪ್ಟನ್ ಸಿ. ಭಾಸ್ಕರ್, ಪದವಿಪೂರ್ವ ಶಿಕ್ಷಣ ಇಲಾಖೆಯ ನೋಡಲ್ ಅಧಿಕಾರಿ ನಾಗರಾಜ ಹವಾಲ್ದಾರ್ ಮಾತನಾಡಿದರು.
ಸಂಘದ ಗೌರವಾಧ್ಯಕ್ಷ ಜಿ. ವಿಶ್ವನಾಥ್, ಅಧ್ಯಕ್ಷ ಮಂಜುನಾಥ್ ಉಪಸ್ಥಿತರಿದ್ದರು.ಸಾಧಕಿಗೆ ಸನ್ಮಾನ:
ಜರ್ಮನಿಯಲ್ಲಿ ಈಚೆಗೆ ನಡೆದ ವಿಶ್ವ ಜ್ಯೂನಿಯರ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಧಾರವಾಡದ ಮಾಜಿ ಸೈನಿಕರ ಪುತ್ರಿ ಐಶ್ವರ್ಯಾ ಅವರನ್ನು ಸನ್ಮಾನಿಸಲಾಯಿತು. ಜತೆಗೆ ಸಂಘದ ಎಲ್ಲ ತಾಲೂಕು ಅಧ್ಯಕ್ಷರನ್ನು, ನಿವೃತ್ತ ಸೈನಿಕರ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಹೊಸಪೇಟೆ ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾ ಘಟಕದಿಂದ ಆಯೋಜಿಸಿದ್ದ 27ನೇ ವರ್ಷದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮ ಉದ್ಘಾಟಿಸಲಾಯಿತು.