ಸಾರಾಂಶ
ಮುಕುಂದ ರಾವಂದೂರು ಕನ್ನಡಪ್ರಭ ವಾರ್ತೆ ರಾವಂದೂರುವೈಜ್ಞಾನಿಕ ಪದ್ಧತಿ ಅನುಸರಿಸುವ ಮೂಲಕ ರೈತರು ಗುಣಮಟ್ಟದ ತಂಬಾಕು ಸಸಿ ಮಡಿಗಳ ಸಮರ್ಪಕ ಮಾಹಿತಿಗಾಗಿ ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.ಪಿರಿಯಾಪಟ್ಟಣ ತಾಲೂಕಿನ ರೈತರ ಜೀವನಾಡಿ ಬೆಳೆಯಾದ ತಂಬಾಕು ಗುಣಮಟ್ಟದ ತಂಬಾಕು ಉತ್ಪಾದನೆಗೆ ಹೆಸರು ವಾಸಿಯಾಗಿರುವ ರಾಜ್ಯದಲ್ಲಿ ಈ ಬಾರಿ ಅವಧಿಗೂ ಮುನ್ನವೇ ತಂಬಾಕು ನರ್ಸರಿ ಕಾರ್ಯ ಆರಂಭಗೊಂಡಿದೆ. ಪ್ರತಿ ವರ್ಷ ಫೆಬ್ರವರಿ ತಿಂಗಳ ಕೊನೆಯಲ್ಲಿ ನರ್ಸರಿ ಕೆಲಸ ಪ್ರಾರಂಭವಾಗುತ್ತಿತ್ತು. ಆದರೆ ಈ ಬಾರಿ ಶುಂಠಿ ಬೆಳೆ ಕೈಕೊಟ್ಟ ಪರಿಣಾಮವೋ ಅಥವಾ ಮಾರುಕಟ್ಟೆಯಲ್ಲಿ ತಂಬಾಕು ದರ 300 ಗಡಿ ದಾಟಿದ ತರುವಾಯ ತಂಬಾಕು ರೈತರ ಮುಖದಲ್ಲಿ ಹರ್ಷ ಕಂಡಿದೆ. ಈ ಸಾಲಿನಲ್ಲಿ ದೊರೆತ ದರದಿಂದ ಆಕರ್ಷಿತರಾಗಿ ರೈತರು ತಂಬಾಕು ಬೆಳೆಯ ವಿಸ್ತೀರ್ಣದಲ್ಲಿ ಹೆಚ್ಚಳ ಮಾಡುವ ನಿರೀಕ್ಷೆ ಇದೆ. ಈಗಾಗಲೇ ತಂಬಾಕು ನರ್ಸರಿ ಕಾರ್ಯಕ್ಕೆ ರೈತರು ಮುಂದಾಗಿರುವುದು ಗೋಚರವಾಗಿದೆ. ಬೆಡ್ ನಿರ್ವಹಣೆ ಕ್ರಮ ಬದ್ಧವಾಗಿರಲಿತಂಬಾಕು ಕೃಷಿ ಬೆಳೆಯಲಿ ಸಸಿಗಳ ಪಾಲನೆ ಬಹು ಮುಖ್ಯವಾದ ಕೆಲಸ. ಆಧುನಿಕ ಕೃಷಿ ಪದ್ಧತಿ ಅನುಸರಿಸಿ ಆರಂಭಿಕ ಹಂತದಿಂದಲೇ ಆರೋಗ್ಯಕರ ಮತ್ತು ರೋಗ ಮುಕ್ತವಾದ ಸಸಿಗಳ ಬೆಳವಣಿಗೆ ಮಾಡುವುದು ರೈತನ ಬಹುದೊಡ್ಡ ಕಾರ್ಯ. ಆದ್ದರಿಂದ ಪ್ರತಿಯೊಬ್ಬ ರೈತನು ಸಸಿ ಮಡಿಗೆ (ನರ್ಸರಿಗೆ) ಹೆಚ್ಚು ಒತ್ತು ನೀಡಬೇಕು. ರೈತರು ತಮ್ಮ ಜಮೀನಿನಲ್ಲಿ ನರ್ಸರಿ ಬೆಡ್ ನಿರ್ಮಿಸುವಾಗ 15 ಸೆಂ.ಮೀ. ಎತ್ತರ, ಒಂದು ಮೀಟರ್ ಅಗಲ,15 ಮೀಟರ್ ಉದ್ದವಿರಬೇಕು ಮತ್ತು ಬೆಡ್ ಗಳ ನಡುವೆ 30 ಸೆಂಟಿಮೀಟರ್ ಅಂತರದಲ್ಲಿ ನೀರು ಅರಿಯಲು ಕಾಲುವೆ ದಾರಿ ನಿರ್ಮಿಸಬೇಕು ಎಂದರು.ಬಳಿಕ ಪ್ರತಿ ಪಟಕ್ಕೆ 15 ರಿಂದ 20 ಕೆಜಿ ಕೊಟ್ಟಿಗೆ ಗೊಬ್ಬರದ ಜೊತೆಗೆ 110 ಗ್ರಾಂ. ಡಿಎಪಿ, 100 ಗ್ರಾಂ. ಅಮೋನಿಯಂ ಸಲ್ಫೇಟ್ ಮತ್ತು 50 ಗ್ರಾಂ. ಎಸ್.ಒ.ಪಿ ಹಾಕಬೇಕು. ಈ ವರ್ಷದ ಬೇಸಿಗೆಯಲ್ಲಿ ಉಷ್ಣಾಂಶದಲ್ಲಿ 4- 5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಂಭವ ಇರುವುದರಿಂದ ಸಸಿಗಳ ಬೇರುಗಳ ಮತ್ತು ಕಾಂಡದ ಬೆಳವಣಿಗೆ ಅತ್ಯವಶ್ಯಕ. ಆದ್ದರಿಂದ 15 ದಿನಗಳ ನಂತರ ನರ್ಸರಿ ಸಸಿಗಳಿಗೆ ಕಲ್ಪಾಕ್ 30 ಗ್ರಾಂ. ಅನ್ನು ಒಂದು ಹೂ ಕ್ಯಾನಿಗೆ ಹಾಕಿ ಸಿಂಪಡಿಸುವುದು ಉತ್ತಮ. 20 ದಿನಗಳ ನಂತರ ಕೊಳೆ ರೋಗದ ನಿಯಂತ್ರಣಕ್ಕಾಗಿ 15 ಲೀಟರ್ ನೀರಿಗೆ ಲೆಗಸ್ಸಿ ಒಂದು ಪ್ಯಾಕೆಟ್ (5 ಗ್ರಾಂ) ಜೊತೆಗೆ 15 ಗ್ರಾಂ. ರಿಡಾಮಿಲ್ ಗೋಲ್ಡ್ ಅನ್ನು ಸೇರಿಸಿ ಸಿಂಪಡಿಸಬೇಕು.ಕಳೆದ ವರ್ಷ ಕೊಳೆ ರೋಗ ಹೆಚ್ಚು ಕಂಡು ಬಂದ ಹಿನ್ನೆಲೆಯಲ್ಲಿ ಈ ಬಾರಿ ಸಿಟಿಆರ್ ಐ ಸಂಸ್ಥೆಯು ಎಫ್.ಸಿ.ಎಚ್ 222 ಮತ್ತು 248 ತಳಿಯನ್ನು ಪರಿಚಯಿಸಿದೆ. ಇದು ರೋಗ ಮುಕ್ತ ಮತ್ತು ಗ್ರೇಡ್ ಒನ್ ಎಲೆಯನ್ನು ಅತಿ ಹೆಚ್ಚು ನೀಡುವ ತಳಿಯಾಗಿದೆ. ಕೋಕಾಪಿಟ್ ಬಳಕೆಯಿಂದ ರೋಗ ನಿರ್ವಹಣೆಗೆ ಸಹಕಾರಿಸಸಿ ಬೆಳೆದು 30 ದಿನಗಳ ನಂತರ ಟ್ರೇಯಲ್ಲಿ ಸಸಿಗಳನ್ನು ಬೆಳೆಸುವುದು ಸೂಕ್ತ. ಇದಕ್ಕಾಗಿ ಶೇ. 90 ರಷ್ಟು ರೈತರು ಟ್ರೇ ಸಸಿಗಳತ್ತಾ ಹೆಚ್ಚು ಗಮನ ಹರಿಸುತ್ತಾರೆ. ಕಡಿಮೆ ತೇವಾಂಶದಲ್ಲಿಯೂ ಕೂಡ ಟ್ರೇ ಸಸಿಗಳು ಸಾಯುವುದಿಲ್ಲ. ಇದರಿಂದ ರೈತರಿಗೆ ಸಮಯ ಮತ್ತು ಹಣ ಉಳಿತಾಯವಾಗುತ್ತದೆ. ಕೋಕಾಪಿಟ್ ಗೊಬ್ಬರ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಪ್ರತಿ ಕೋಕಾಪಿಟ್ ಜೊತೆ ಜೈವಿಕ ಪೋಷಕಾಂಶಗಳಾದ ಪೆಸಿಲೋಮೈ ಸಿಸ್ ಲೀಲಾಸಿಯಂ , ಟ್ರೀಕೊಡರ್ಮ ಒಂದು ಕೆಜಿ ಮತ್ತು ಕಲ್ಪಾಕ್ 50 ಗ್ರಾಂ ಪೋಷಕಾಂಶ ಮಿಶ್ರಣ ಮಾಡಿ ಬಳಸಿದರೆ ಬಹಳ ಒಳ್ಳೆಯದು. 15 ದಿನಗಳ ನಂತರ ಕಪ್ಪು ಚುಕ್ಕಿ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಟಿಲ್ಟಾ ಅಥವಾ ಗ್ಲೋ ಹಿಟ್ ಔಷಧಿಗಳನ್ನು 15 ಲೀಟರ್ ಕ್ಯಾನಿಗೆ 7 ಎಂಎಲ್ ಮತ್ತು ನಿಕೋನ್ 2 ಎಂಎಲ್ ಅನ್ನು ಸೇರಿಸಿ ಸಿಂಪಡಿಸುವುದರಿಂದ ರೋಗ ತಡೆಗಟ್ಟಲು ಸಾಧ್ಯವಾಗುತ್ತದೆ. ಸಸಿ ಮಡಿಯಲ್ಲಿ ಕಾಂಡ ಕೊರಕ ಅಥವಾ ಎಲೆ ತಿನ್ನುವ ಹುಳದ ಸಮಸ್ಯೆಯಿದ್ದಲ್ಲಿ ಒಂದು ಪ್ಯಾಕೆಟ್ (5 ಗ್ರಾಂ) ಲೆಗಸ್ಸಿ ಜೊತೆಗೆ 5 ಗ್ರಾಂ. ಲಾರ್ವ ಅಥವಾ 5 ಎಂ.ಎಲ್‌ಕೊರಜಿನ್ ಅನ್ನು ಸಿಂಪಡಿಸಬೇಕು ಎನುತ್ತಾರೆ.---ಕೋಟ್9ಎಂವೈಎಸ್ 53 - ಬೀಜ ಹಾಕುವ ಹಿಂದಿನ ದಿನ 15- 20 ಗ್ರಾಂ. ರೆಡೋಮಿಲ್ ಗೋಲ್ಡ್ ಅನ್ನು 10 ಲೀಟರ್ ನೀರಿಗೆ ಹಾಕಿ ಪಟಕ್ಕೆ ಸಿಂಪಡಿಸುವುದರಿಂದ ಸೊರಗು ರೋಗ ತಡೆಗಟ್ಟಲು ಸಾಧ್ಯವಾಗುತ್ತದೆ. ಇದರ ಜೊತೆಗೆ 70 ರಿಂದ 80 ಗ್ರಾಂ. ಪುರಾಡಾನ್ ಕಾಳು ಹಾಕುವುದರಿಂದ ಬೇರು ಗಂಟು ರೋಗವನ್ನು ನಿಯಂತ್ರಿಸಬಹುದು. ರೈತರು ಸಾಧ್ಯವಾದಷ್ಟು ಮರಳಿನಲ್ಲಿ ಬೀಜವನ್ನು ಮಿಶ್ರಣ ಮಾಡಿ ಹಾಕಬೇಕು. ತಳಿ ಬದಲಾವಣೆಯಿಂದಲೂ ಸಹ ರೋಗ ನಿಯಂತ್ರಿಸಬಹುದು.- ಡಾ.ಎಸ್. ರಾಮಕೃಷ್ಣನ್, ಮುಖ್ಯಸ್ಥರು, ಸಿ.ಟಿ.ಆರ್.ಐ ಹುಣಸೂರು.