ಸಹಾಯಕರಿಲ್ಲದೆ ಸೊರಗಿದ ಅಂಗನವಾಡಿ ಕೇಂದ್ರಗಳು

| Published : Feb 10 2025, 01:48 AM IST

ಸಾರಾಂಶ

ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ 1700ಕ್ಕೂ ಹೆಚ್ಚು ಅಂಗನವಾಡಿಗಳಲ್ಲಿ ಶಿಕ್ಷಕಿ ಮತ್ತು ಸಹಾಯಕರ ಹುದ್ದೆಗಳು ಖಾಲಿ ಇದ್ದು ಇದುವರೆಗೂ ನೇಮಕಾತಿ ನಡೆದಿಲ್ಲ. ಭದ್ರಾವತಿ ತಾಲೂಕಿನಲ್ಲಿಯೇ 28 ಕಾರ್ಯರ್ತೆಯರ ಹುದ್ದೆ, 88 ಸಹಾಯಕಿಯರ ಹುದ್ದೆ ಖಾಲಿ ಇವೆ. ಬಹಳ ದಿನಗಳಿಂದ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆ ಖಾಲಿ ಇರುವ ಅಂಗನವಾಡಿ ಕೇಂದ್ರಗಳಿಗೆ ಸಮೀಪವಿರುವ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರನ್ನು ನಿಯೋಜಿಸಿ ಪ್ರಭಾರ ವ್ಯವಸ್ಥೆ ಮಾಡಲಾಗಿದೆ.

ಅರಹತೊಳಲು ಕೆ.ರಂಗನಾಥ.ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ 1700ಕ್ಕೂ ಹೆಚ್ಚು ಅಂಗನವಾಡಿಗಳಲ್ಲಿ ಶಿಕ್ಷಕಿ ಮತ್ತು ಸಹಾಯಕರ ಹುದ್ದೆಗಳು ಖಾಲಿ ಇದ್ದು ಇದುವರೆಗೂ ನೇಮಕಾತಿ ನಡೆದಿಲ್ಲ. ಭದ್ರಾವತಿ ತಾಲೂಕಿನಲ್ಲಿಯೇ 28 ಕಾರ್ಯರ್ತೆಯರ ಹುದ್ದೆ, 88 ಸಹಾಯಕಿಯರ ಹುದ್ದೆ ಖಾಲಿ ಇವೆ. ಬಹಳ ದಿನಗಳಿಂದ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆ ಖಾಲಿ ಇರುವ ಅಂಗನವಾಡಿ ಕೇಂದ್ರಗಳಿಗೆ ಸಮೀಪವಿರುವ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರನ್ನು ನಿಯೋಜಿಸಿ ಪ್ರಭಾರ ವ್ಯವಸ್ಥೆ ಮಾಡಲಾಗಿದೆ.

ಇನ್ನೂ ಕೆಲವು ಅಂಗನವಾಡಿಗಳಲ್ಲಿ ಕಳೆದ ಮೂರು ವರ್ಷಗಳಿಂದ ಶಿಕ್ಷಕಿ ಮತ್ತು ಸಹಾಯಕಿಯರ ಹುದ್ದೆಗಳು ವಿವಿಧ ಕಾರಣಗಳಿಂದ ಖಾಲಿ ಇವೆ. ಕೆಲವು ಅಂಗನವಾಡಿಗಳಲ್ಲಿ ಶಿಕ್ಷಕಿಯರು ವಯೋಸಹಜ ನಿವೃತ್ತಿ ಹೊಂದಿದ್ದಾರೆ. ಇನ್ನೂ ಕೆಲವುಗಳಲ್ಲಿ ಸಹಾಯಕರಾಗಿದ್ದವರು ಬಡ್ತಿಯಿಂದ ಶಿಕ್ಷಕಿಯರಾಗಿ ಬೇರೆ ಅಗನವಾಡಿಗಳಿಗೆ ವರ್ಗಾವಣೆಗೊಂಡು ಹೋಗಿದ್ದಾರೆ. ಈ ರೀತಿಯಲ್ಲಿ ರಾಜ್ಯದ ಹಲವಾರು ಅಂಗನವಾಡಿಗಳು ಶಿಕ್ಷಕಿ ಮತ್ತು ಸಹಾಯಕಿಯರ ಕೊರತೆಯನ್ನು ಅನುಭವಿಸುತ್ತಿವೆ.ಪಾಲಕರ ಪರದಾಟ:ಅಂಗನಾಡಿಗಳಲ್ಲಿ ಶಿಕ್ಷಕಿ ಮತ್ತು ಸಹಾಯಕಿ ಇಲ್ಲದಿರುವುದರಿಂದ ಪ್ರತಿದಿನ ಮಕ್ಕಳನ್ನು ಕರೆದುಕೊಂಡು ಹೋಗುವುದು ಮತ್ತು ಮನೆಗೆ ವಾಪಾಸ್ಸು ಕರೆತರುವುದು ಪೋಷಕರಿಗೆ ದಿನನಿತ್ಯದ ಕೆಲಸವಾಗಿದೆ. ಸಾಮಾನ್ಯವಾಗಿ ಎಸ್ಸಿ, ಎಸ್ಟಿ ಮತ್ತು ಬಡ ಕೂಲಿಕಾರ್ಮಿಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳಿಸುತ್ತಿದ್ದಾರೆ. ಸ್ವಲ್ಪ ಮಟ್ಟಿನ ಅನುಕೂಲ ಹೊಂದಿರುವ ಪೋಷಕರು ಮಕ್ಕಳನ್ನು ಬೇಬಿ ಸಿಟಿಂಗ್, ಫ್ರೀ ಸ್ಕೂಲ್ ಸೇರಿದಂತೆ ಹಲವಾರು ಖಾಸಗೀ ಕೇಂದ್ರಗಳಿಗೆ ಮಕ್ಕಳನ್ನು ಸೇರಿಸಿರುವುದು ತೆರೆದ ಸತ್ಯವಾಗಿದೆ. ಆದರೆ ಬಡವರು ಒಪ್ಪೊತ್ತಿನ ಊಟಕ್ಕೂ ಕಷ್ಟಪಡುವರು. ದಿನನಿತ್ಯ ಕೂಲಿ ಕೆಲಸಕ್ಕೆ ಹೋಗಲೇ ಬೇಕು. ಹೀಗಿರುವಾಗ ಮಕ್ಕಳನ್ನು ಅಂಗನವಾಡಿಗೆ ಕರೆದುಕೊಂಡು ಹೋಗಿ ಬರುವುದು ಕಷ್ಟವಾಗುತ್ತಿದೆ ಎಂದು ಪೋಷಕರು ಹೇಳುತ್ತಿದ್ದಾರೆ.

ಎರಡು ಅಂಗನವಾಡಿ ಮರ್ಜ್:

ಒಂದೇ ಗ್ರಾಮದ, ಗ್ರಾಮ ಪಂಚಾತಿಯಿ ವ್ಯಾಪ್ತಿಯ ಎರಡು ಅಂಗನವಾಡಿಗಳನ್ನು ತಾತ್ಕಾಲಿಕವಾಗಿ ಮರ್ಜ್ ಮಾಡಿ ಮಕ್ಕಳ ಪೋಷಣೆ ಮಾಡುವಂತೆ ಇಲಾಖೆಯಿಂದ ಆದೇಶ ನೀಡಲಾಗುತ್ತಿದೆ. ಇದರ ಪ್ರಕಾರ ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿಯರು ಎರಡೂ ಅಂಗನವಾಡಿ ಮಕ್ಕಳನ್ನು ಒಂದೇ ಕಡೆ ಸೇರಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಶಿಕ್ಷಕಿ ಮತ್ತು ಸಹಾಯಕಿಯರಿಗೆ ಹೆಚ್ಚಿನ ಹೊರೆ :ಅಂಗನವಾಡಿ ಶಿಕ್ಷಕಿಯರು ಚುಣಾವಣೆಯಲ್ಲಿ ಬಿಎಲ್ಓಗಳಾಗಿ ಕೆಲಸ ಮಾಡಬೇಕು, ಗರ್ಭಿಣಿ ಬಾಣಂತಿಯರ ನೋಂದಣಿ ಮಾಡಬೇಕು, ಮಾತೃವಂದನಾ ಕಾರ್ಯಕ್ರಮದಡಿ ಅರ್ಜಿ ಸಲ್ಲಿಸಬೇಕು, ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮೀ ಫಲಾನಭವಿಯ ದಾಖಲೆ ಜೋಡಿಸಿ ತಾಲೂಕು ಕೇಂದ್ರದ ಕಚೇರಿಗೆ ನೀಡಬೇಕು. ತಿಂಗಳಲ್ಲಿ ಎರಡು ಬಾರಿ ಸಭೆ ನಡೆಸಬೇಕು. ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳ ಮಾಹಿತಿಯನ್ನು ನೀಡಬೇಕು. ಜನನ, ಮರಣ ಮಾಹಿತಿ, 18 ವರ್ಷದೊಳಗಿನ ಶಾಲೆಬಿಟ್ಟ ಮಕ್ಕಳ ಮಾಹಿತಿ ಸಂಗ್ರಹಿಸುವುದು, ಆಶಾ ಕಾರ್ಯಕರ್ತೆಯರೊಂದಿಗೆ ಸೇರಿ ಜಂತು ಹುಳು ಮತ್ತು ವಿಟಮಿನ್ ಮಾತ್ರೆ ನೀಡುವುದು ಸೇರಿದಂತೆ ಹಲವಾರು ಕಾರ್ಯಗಳನ್ನು ಶಿಕ್ಷಕಿಯರು ಮಾಡುತ್ತಿದ್ದಾರೆ.ಇನ್ನು ಸಹಾಯಕಿ ಎರಡೂ ಅಂಗನವಾಡಿಯ ಮಕ್ಕಳನ್ನು ಕರೆತರುವುದು, ಬೆಳಿಗ್ಗೆ ಮಕ್ಕಳಿಗೆ ಉಂಡೆ ಮಾಡಿಕೊಡುವುದು, ಮಧ್ಯಾಹ್ನ ಊಟ, 3:30ಕ್ಕೆ ಹಾಲು ಕಾಯಿಸಿ ಕೊಡುವುದು, ಪ್ರತೀ ಮಂಗಳವಾರ ಮತ್ತು ಶುಕ್ರವಾರ ಮೊಟ್ಟೆ ನೀಡುವುದು ಸೇರಿದಂತೆ ಪಾತ್ರೆ ತೊಳೆದಿಟ್ಟು ಮತ್ತೆ ಮಕ್ಕಳನ್ನು ಮನೆಗೆ ಬಿಡುವಷ್ಟರಲ್ಲಿ ಸಂಜೆ 5 ಗಂಟೆ ಆಗುವುದು. ಒಟ್ಟಿನಲ್ಲಿ 0 ಯಿಂದ 6 ವರ್ಷದ ವರೆಗೆ ಮಗುವಿನ ಸಂಪೂರ್ಣ ಆರೈಕೆ ಅಂಗನವಾಡಿ ಕಾರ್ಯಕರ್ತೆಯರ ಜವಾಬ್ದಾರಿ ಆಗಿರುತ್ತದೆ.

ಅಂಗನವಾಡಿ ಕಾರ್ಯಕರ್ತೆ ಸಹಾಯಕಿ ಖಾಲಿ ಹುದ್ದೆಯನ್ನು ಆನ್‌ಲೈನ್ ಮೂಲಕ ನೇಮಕಾತಿ ಮಾಡಲು ಕೇಂದ್ರ ಕಚೇರಿಯಿಂದ ಆನ್‌ಲೈನ್ ತಂತ್ರಾಂಶವನ್ನು ಅಭಿವೃದ್ಧಿಗೊಳಿಸಿ ನೇಮಕಾತಿ ಅಧಿಸೂಚನೆ ಹೊರಡಿಸಲು ಅನುಮತಿ ನೀಡಿ 2024 ಜುಲೈ 30ರಂದು ಪ್ರಕಟಣೆ ಹೊರಡಿಸಲಾಗಿದೆ. ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲಿಯೇ ನೇಮಕಾತಿ, ಪದೋನ್ನತಿ ಆದೇಶವನ್ನು ನೀಡುವ ಮೂಲಕ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸಲಾಗುವುದು.

- ಈರಪ್ಪ, ಸಿಡಿಪಿಓ ಭದ್ರಾವತಿ.

ನಮ್ಮ ಗ್ರಾಮದ ಅಂಗನವಾಡಿಯಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಕಾರ್ಯಕರ್ತೆ, 6 ತಿಂಗಳ ಹಿಂದೆ ಸಹಾಯಕಿ ನಿವೃತ್ತಿಯಾಗಿದ್ದಾರೆ. ಅಂದಿನಿಂದ ಮಕ್ಕಳನ್ನು ಅಂಗನವಾಡಿಗೆ ಕಳಿಸುವುದು ಕಷ್ಟವಾಗುತ್ತಿದೆ. ಆದಷ್ಟು ಬೇಗ ಕಾರ್ಯಕರ್ತೆ ಹಾಗೂ ಸಹಾಯಕಿಯ ನೇಮಕವಾಗಬೇಕು.

- ಎನ್.ಟಿ.ಸಂಗನಾಥ್. ಗ್ರಾಮ ಪಂಚಾಯಿತಿ ಸದಸ್ಯರು. ಅರಹತೊಳಲು.