ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಸರ್ಕರದ ಮಹತ್ವಾಕಾಂಕ್ಷಿ ಯೋಜನೆಯಾದ ಇ-ಪೌತಿ ಖಾತಾ ಆಂದೋಲನ ಜಿಲ್ಲೆಯಲ್ಲಿ ಪ್ರಾರಂಭವಾಗಿದ್ದು, ಸಾರ್ವಜನಿಕರು ಇನ್ನೂ ಮುಂದೆ ತಾಲೂಕು ಕಚೇರಿಗೆ ಅಲೆದಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಈಗಾಗಲೇ ಗದಗ ಜಿಲ್ಲೆಯಲ್ಲಿ ಪೈಲೆಟ್ ಪ್ರಾಜೆಕ್ಟ್ ಆಗಿ ಕಳೆದ ಎರಡು ತಿಂಗಳಿಂದ ಇ-ಪೌತಿ ಖಾತೆ ಕೆಲಸ ಪ್ರಾರಂಭವಾಗಿದೆ. ಜಿಲ್ಲೆಯಲ್ಲಿ ಗ್ರಾಮ ಆಡಳಿತಾಧಿಕಾರಿಗಳು, ಕಂದಾಯ ನಿರೀಕ್ಷಕರು, ಉಪ ತಹಸೀಲ್ದಾರ್ ಹಾಗೂ ತಹಸೀಲ್ದಾರ್‌ಗಳು ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದರು.
ಕೃಷಿ ಜಮೀನಿನ ಸ್ವಂತ ಇಡುವಳಿದಾರರು, ಖಾತೆದಾರರು ಮೃತಗೊಂಡ ನಂತರ ಹಲವಾರು ವರ್ಷಗಳಿಂದ ವಾರಸುದಾರರು ತಮ್ಮ ಹೆಸರಿಗೆ ಖಾತೆಯನ್ನು ವರ್ಗಾವಣೆ ಮಾಡಿಕೊಂಡಿರುವುದಿಲ್ಲ. ಆದರಿಂದ ಪಹಣಿಗಳಲ್ಲಿ ಮೃತ ಖಾತೆದಾರರ ಹೆಸರು ಮುಂದುವರೆದಿದೆ. ಇದನ್ನು ಸರಿಪಡಿಸಲು ಕಂದಾಯ ಇಲಾಖೆ ಸ್ವಯಂಪ್ರೇರಿತವಾಗಿ ಇ-ಖಾತಾ ಆಂದೋಲವನ್ನು ಪ್ರಾರಂಭಿಸಿದೆ ಎಂದು ವಿವರಿಸಿದರು.ಕಂದಾಯ ಇಲಾಖೆಯಿಂದ ಇತ್ತೀಚೆಗೆ ಪಹಣಿಗಳನ್ನು ಆಧಾರ್ ಜೋಡಣೆ ಮಾಡುವ ಸಂದರ್ಭದಲ್ಲಿ ಮೃತ ಖಾತೆದಾರರನ್ನು ಪತ್ತೆ ಹಚ್ಚಿ ವಿವರವನ್ನು ನಮೂದು ಮಾಡಲಾಗಿದೆ. ತಂತ್ರಾಂಶವನ್ನು ಬಳಸಿಕೊಂಡು ಇ-ಪೌತಿ ಖಾತೆ ಮಾಡಿಕೊಡಲಾಗುವುದು ಎಂದರು.
ಗ್ರಾಮ ಆಡಳಿತಾಧಿಕಾರಿಗಳು ನಿಖರ ಮಾಹಿತಿಗಳೊಂದಿಗೆ ತಂತ್ರಾಂಶದಲ್ಲಿ ವಾರಸುದಾರರು ಹಾಗೂ ಮೃತ ಖಾತೆದಾರರ ವಿವರವನ್ನು ಭರ್ತಿ ಮಾಡಬೇಕಿದ್ದು, ಸಾರ್ವಜನಿಕರು ಮೃತ ಖಾತೆದಾರರ ಮರಣ ಪ್ರಮಾಣ ಪತ್ರ, ವಂಶವೃಕ್ಷ, ಆಧಾರ್ ವಿವರವನ್ನು ಗ್ರಾಮ ಆಡಳಿತಾಧಿಕಾರಿಗಳಿಗೆ ನೀಡಿ ಸಹಕರಿಸುವಂತೆ ತಿಳಿಸಿದರು.ಇ-ಖಾತೆ ಕಾರ್ಯನಿರ್ವಹಣೆಯಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಕೆಲಸ ಪ್ರಮುಖವಾಗಿದ್ದು, ಈಗಾಗಲೇ ಜಿಲ್ಲೆಯ 185 ಗ್ರಾಮ ಆಡಳಿತಾಧಿಕಾರಿಗಳಿಗೆ ಇ.ಆಫೀಸ್‌ನಲ್ಲಿ ಕಾರ್ಯನಿರ್ವಹಿಸಲು ಲ್ಯಾಪ ಟಾಪ್ ನೀಡಲಾಗಿದ್ದು, ಅದನ್ನು ಇ-ಪೌತಿ ಖಾತಾ ಆಂದೋಲನಕ್ಕೆ ಬಳಸಿಕೊಳ್ಳುವಂತೆ ಹೇಳಿದರಲ್ಲದೆ, ಇ-ಪೌತಿ ಖಾತಾ ಆಂದೋಲನದ ಬಗ್ಗೆ ತಾತ್ಸಾರ ಭಾವನೆ ಕಂಡುಬಂದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಇ- ಪೌತಿ ಖಾತೆ ವೆಬ್ ಅಪ್ಲಿಕೇಷನ್‌ನಲ್ಲಿ ಭರ್ತಿ ಮಾಡಬೇಕಿರುವ ವಿವರಗಳ ಕುರಿತು ಆನ್ ಲೈನ್ ಮುಖಾಂತರ ಜಿಲ್ಲೆಯ ಎಲ್ಲಾ ತಾಲೂಕುಗಳ ಗ್ರಾಮ ಆಡಳಿತಾಧಿಕಾರಿಗಳಿಗೆ ತರಬೇತಿ ನೀಡಲಾಯಿತು.ಸಭೆಯಲ್ಲಿ ಉಪವಿಭಾಗಾಧಿಕಾರಿ ಶಿವಮೂರ್ತಿ, ಡಿ.ಡಿಎಲ್. ಆರ್ ವಿರೂಪಾಕ್ಷ, ತಹಸೀಲ್ದಾರ್ ಶಿವಕುಮಾರ್ ಬಿರಾದರ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.