ಕೋಲಾಹಲ ಸೃಷ್ಟಿಸಿದ ಪ್ರತಿ ಸ್ಟಿಕ್ಕರ್‌ ಮುದ್ರಣ, ಅಂಟಿಸಲು 7.47 ರು. ವೆಚ್ಚ!

| N/A | Published : Jul 05 2025, 01:48 AM IST / Updated: Jul 05 2025, 08:15 AM IST

ಕೋಲಾಹಲ ಸೃಷ್ಟಿಸಿದ ಪ್ರತಿ ಸ್ಟಿಕ್ಕರ್‌ ಮುದ್ರಣ, ಅಂಟಿಸಲು 7.47 ರು. ವೆಚ್ಚ!
Share this Article
  • FB
  • TW
  • Linkdin
  • Email

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಪರಿಶಿಷ್ಟ ಜಾತಿ ಸಮೀಕ್ಷೆ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಸಮೀಕ್ಷೆ ಖಾತರಿಪಡಿಸಿಕೊಳ್ಳುವ ಉದ್ದೇಶದಿಂದ ಮನೆ ಮನೆಗಳಿಗೆ ಸ್ಟಿಕ್ಕರ್‌ ಅಂಟಿಸಲು 3.60 ಕೋಟಿ ರು. ವೆಚ್ಚ ಮಾಡಲಾಗಿದ್ದರೂ, ಸಮೀಕ್ಷೆ ಸರಿಯಾಗಿ ಮಾಡಿಲ್ಲ ಎಂಬ ದೂರುಗಳು ಮಾತ್ರ ನಿಂತಿಲ್ಲ.

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು :  ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಪರಿಶಿಷ್ಟ ಜಾತಿ ಸಮೀಕ್ಷೆ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಸಮೀಕ್ಷೆ ಖಾತರಿಪಡಿಸಿಕೊಳ್ಳುವ ಉದ್ದೇಶದಿಂದ ಮನೆ ಮನೆಗಳಿಗೆ ಸ್ಟಿಕ್ಕರ್‌ ಅಂಟಿಸಲು 3.60 ಕೋಟಿ ರು. ವೆಚ್ಚ ಮಾಡಲಾಗಿದ್ದರೂ, ಸಮೀಕ್ಷೆ ಸರಿಯಾಗಿ ಮಾಡಿಲ್ಲ ಎಂಬ ದೂರುಗಳು ಮಾತ್ರ ನಿಂತಿಲ್ಲ.

ತಲಾ ಒಂದು ಸ್ಟಿಕ್ಕರ್‌ ಬೆಲೆ 2.47 ರು.ಗಳಾಗಿದ್ದು, ಸಿಬ್ಬಂದಿ ಒಂದು ಸ್ಟಿಕ್ಕರ್‌ ಅಂಟಿಸಲು 5 ರು. ಹಾಗೂ ಭಿತ್ತಿಪತ್ರಕ್ಕೆ 6 ರು. ಮತ್ತು ಸಾಮಾಜಿಕ ಜಾಲತಾಣದಲ್ಲಿ ಜಾಗೃತಿಗೆ ಎರಡು ಕಿರು ಚಿತ್ರಗಳನ್ನು ಪ್ರತಿ ಸೆಕೆಂಡ್‌ಗೆ 35 ಸಾವಿರ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಒಟ್ಟಾರೆ 3.60 ಕೋಟಿ ರು. ವೆಚ್ಚ ಮಾಡಿರುವ ಬಗ್ಗೆ ‘ಕನ್ನಡಪ್ರಭ’ಕ್ಕೆ ದಾಖಲೆಗಳು ಲಭ್ಯವಾಗಿವೆ.

ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ ಶೇ.95 ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ.60 ರಷ್ಟು ಸಮೀಕ್ಷೆ ಆಗದ ಹಿನ್ನೆಲೆಯಲ್ಲಿ ಸಮೀಕ್ಷೆದಾರರು ಪ್ರತಿ ಮನೆಗೆ ಭೇಟಿ ನೀಡಿರುವ ಕುರಿತು ಖಾತರಿ ಪಡಿಸಿಕೊಳ್ಳಲು ಸ್ಟಿಕ್ಕರ್‌ ಅಂಟಿಸುವ ಯೋಜನೆ ಹಾಕಿಕೊಳ್ಳಲಾಗಿದ್ದು, ಜೂ.23 ರಿಂದ ದಿನಕ್ಕೆ 2 ಲಕ್ಷ ಮನೆಗಳಿಗೆ ಸ್ಟಿಕ್ಕರ್‌ ಅಂಟಿಸಲಾಗುತ್ತಿದೆ.

ಈ ಸ್ಟಿಕ್ಕರ್‌ ಅಂಟಿಸುವ ವಿಚಾರಕ್ಕೆ ನಗರದ ಹಲವು ಕಡೆ ಸಾಕಷ್ಟು ಗಲಾಟೆ, ಗೊಂದಲ ಸೃಷ್ಟಿಯಾಗುತ್ತಿವೆ. ಜತೆಗೆ, ಸ್ಟಿಕ್ಕರ್‌ ಅಂಟಿಸುವ ವಿಚಾರದಲ್ಲಿ ಕರ್ತವ್ಯಲೋಪದಡಿ ಪಾಲಿಕೆ ಕಂದಾಯ ವಿಭಾಗದ ನಾಲ್ವರು ಅಮಾನತು ಸಹ ಆಗಿದ್ದಾರೆ. ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿರುವ ಸ್ಟಿಕ್ಕರ್‌ ಮುದ್ರಣ ಮತ್ತು ಮನೆಗೆ ಅಂಟಿಸಲು ಬಿಬಿಎಂಪಿ ತಲಾ ಒಂದು ಸ್ಟಿಕ್ಕರ್‌ಗೆ 7.47 ರು. ವೆಚ್ಚ ಮಾಡುತ್ತಿದೆ.

ಸ್ಟಿಕ್ಕರ್‌ಗೆ 2.61 ಕೋಟಿ ರು. ವೆಚ್ಚ

ನಗರದಲ್ಲಿ 35 ಲಕ್ಷ ಮನೆಗಳಿವೆ ಎಂದು ಅಂದಾಜಿನಂಕೆ 35 ಲಕ್ಷ ಸ್ಟಿಕ್ಕರ್‌ ಮುದ್ರಣ ಮಾಡಲಾಗಿದೆ. ಮುದ್ರಣಕ್ಕೆ ತಲಾ 2 ರು.ನಂತೆ 70 ಲಕ್ಷ ರು, ಕೆಎಸ್‌ಎಂಸಿಎ ಸೇವಾ ಶುಲ್ಕ 3.50 ಲಕ್ಷ, 13.33 ಲಕ್ಷ ರು. ಜಿಎಸ್‌ಟಿ ಸೇರಿ ಒಟ್ಟು 86.73 ಲಕ್ಷ ರು. ಮುದ್ರಣಕ್ಕೆ ವೆಚ್ಚ ಮಾಡಲಾಗುತ್ತಿದೆ. 35 ಲಕ್ಷ ಸ್ಟಿಕ್ಕರ್‌ ಗಳನ್ನು ಪ್ರತಿ ಮನೆಗೆ ಅಂಟಿಸಲು ಬಿಬಿಎಂಪಿಯ ಆಶಾ ಕಾರ್ಯಕರ್ತೆಯರು, ಅಂಗನವಾಡಿ, ಜೂನಿಯರ್‌ ಹೆಲ್ತ್‌ ಇನ್ಸ್‌ಪೆಕ್ಟರ್ ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಅವರಿಗೆ ತಲಾ ಒಂದು ಸ್ಟಿಕ್ಕರ್‌ ಅಂಟಿಸಲು 5 ರು. ನಂತೆ ಒಟ್ಟು 1.75 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ.

2 ಶಾರ್ಟ್‌ ಫಿಲ್ಮ್‌ಗೆ 49.56 ಲಕ್ಷ ರು.ವೆಚ್ಚ

ಸಮೀಕ್ಷೆ ಬಗ್ಗೆ ಜಾಗೃತಿ ಮೂಡಿಸಲು 80 ಹಾಗೂ 60 ಸೆಕೆಂಡ್‌ನ ಎರಡು ಕಿರು ಚಿತ್ರ ನಿರ್ಮಿಸಲು 5 ಲಕ್ಷ ರು. ವೆಚ್ಚದಲ್ಲಿ 2 ಕ್ಯಾಮೆರಾ ಖರೀದಿ ಮಾಡಲಾಗಿದೆ. ನಿರ್ದೇಶಕ, ಸಹಾಯಕ ನಿರ್ದೇಶಕ, ಕ್ಯಾಮೆರಾ ಮ್ಯಾನ್‌ ಸೇರಿ ಚಿತ್ರೀಕರಣದ ಸಾಧನಕ್ಕೆ 4 ಲಕ್ಷ ರು. ಕಲಾವಿದರಿಗೆ 2.98 ಲಕ್ಷ ರು. ಎಸ್‌ಎಸ್‌ಡಿ ಕಾರ್ಡ್‌ಗೆ ಒಂದು ಸಾವಿರ, ಡಿವಿಡಿ, ಪೆನ್‌ಡ್ರೈವ್‌ಗೆ 500 ರು. ವೆಚ್ಚ ಮಾಡಲಾಗಿದೆ. ಇನ್ನೂ ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್‌, ಇನ್ಸ್ಟಾಗ್ರಾಂನಲ್ಲಿ ಪ್ರಚಾರಕ್ಕೆ 28 ಲಕ್ಷ ರು. ವೆಚ್ಚ ಮಾಡಿರುವುದಾಗಿ ದಾಖಲೆಗಳಿಂದ ಬೆಳಕಿಗೆ ಬಂದಿದೆ.

ಜಾಗೃತಿಗೆ 49.59 ಲಕ್ಷ ವೆಚ್ಚ:

7 ದಿನ 14 ಆಟೋ ಬಾಡಿಗೆ ಪಡೆದು ಧ್ವನಿ ವರ್ಧಕದ ಮೂಲಕ 28 ವಿಧಾನಸಭಾ ಕ್ಷೇತ್ರದಲ್ಲಿ ಜಾಗೃತಿ ಮೂಡಿಸಲು ಆಟೋ ಬಾಡಿಗೆ ಸೇರಿ 11.07 ಲಕ್ಷ ರು. ವೆಚ್ಚ ಮಾಡಲಾಗಿದೆ. ಜಾಗೃತಿಗೆ 6 ರು. ವೆಚ್ಚದಲ್ಲಿ 3.70 ಭಿತ್ತಿ ಪತ್ರಕ್ಕೆ 22.20 ಲಕ್ಷ ರು., 1 ರು. ವೆಚ್ಚದಲ್ಲಿ 5 ಲಕ್ಷ ಕರಪತ್ರ ಮುದ್ರಣಕ್ಕೆ5 ಲಕ್ಷ ರು. ವೆಚ್ಚ ಮಾಡಲಾಗಿದೆ. ಈ ಭಿತ್ತಿಪತ್ರ ಅಂಟಿಸಲು ಮತ್ತು ಕರ ಪತ್ರ ಅಂಟಿಸುವ ಸಿಬ್ಬಂದಿಗೆ 1.75 ಲಕ್ಷ ರು. ವೆಚ್ಚ ಮಾಡಲಾಗಿದೆ. ಒಟ್ಟಾರೆ, 49.59 ಲಕ್ಷ ರು. ವ್ಯಯ ಮಾಡಲಾಗಿದೆ. ಇದಲ್ಲದೇ ಸಮೀಕ್ಷೆಯಲ್ಲಿ ಭಾಗವಹಿಸುವ ಸಿಬ್ಬಂದಿಗೆ ತರಬೇತಿ, ಗೌರವ ಧನ, ಇತರೆ ವೆಚ್ಚ ಸೇರಿ ಕೋಟ್ಯಂತರ ರು. ವೆಚ್ಚ ಮಾಡಿರುವುದಾಗಿ ತಿಳಿದು ಬಂದಿದೆ.

ಪರಿಶಿಷ್ಟ ಜಾತಿ ಕುಟುಂಬದ ಸಮೀಕ್ಷೆ ಕಾರ್ಯಕ್ಕೆ ಈವರೆಗೆ ಸುಮಾರು 3 ಕೋಟಿ ರು. ವೆಚ್ಚ ಮಾಡಲಾಗಿದೆ. ಸಮಾಜಕಲ್ಯಾಣ ಇಲಾಖೆಯಿಂದ 1.8 ಕೋಟಿ ರು. ನೀಡುವುದಾಗಿ ತಿಳಿಸಿದ್ದಾರೆ. ಉಳಿದ ಮೊತ್ತವನ್ನು ಬಿಬಿಎಂಪಿಯಿಂದ ವೆಚ್ಚ ಮಾಡಲಾಗಿದೆ.

- ಸುರಳ್ಕರ್ ವಿಕಾಸ್ ಕಿಶೋರ್, ವಿಶೇಷ ಆಯುಕ್ತ, ಬಿಬಿಎಂಪಿ ಕಲ್ಯಾಣ ವಿಭಾಗ

Read more Articles on