ಇಂದಿರಾಗಾಂಧಿ ಮಕ್ಕಳ ಅಸ್ಪತ್ರೆಗೆ ಶೀಘ್ರ ಅಡಿಗಲ್ಲು

| Published : Jun 24 2024, 01:36 AM IST

ಇಂದಿರಾಗಾಂಧಿ ಮಕ್ಕಳ ಅಸ್ಪತ್ರೆಗೆ ಶೀಘ್ರ ಅಡಿಗಲ್ಲು
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ತೀವ್ರ ನಿಗಾ ಘಟಕ, ಸುಟ್ಟ ಗಾಯಗಳ ಘಟಕಕ್ಕೆ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವಶರಣಪ್ರಕಾಶ ಪಾಟೀಲರು ಅಡಿಗಲ್ಲು ನೆರವೇರಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಿಗೆ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆ‌ ನೀಡುವ ದೃಷ್ಟಿಯಿಂದ ಪ್ರತಿಷ್ಠಿತ ಇಂದಿರಾ ಗಾಂಧಿ‌ ಮಕ್ಕಳ ಆಸ್ಪತ್ರೆಯ ಶಾಖೆ ಕಲಬುರಗಿಯಲ್ಲಿ ನಿರ್ಮಾಣಕ್ಕೆ ಮುಂದಿನ 3-4 ತಿಂಗಳಿನಲ್ಲಿ ಅಡಿಗಲ್ಲು ಹಾಕಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ಇಲ್ಲಿನ ಕಲಬುರಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ 30.14 ಕೋಟಿ ರು. ವೆಚ್ಚದ 50 ಹಾಸಿಗೆಗಳ ತೀವ್ರ ನಿಗಾ ಘಟಕ ಮತ್ತು 15.57 ಕೋಟಿ ರು. ಮೊತ್ತದ 30 ಹಾಸಿಗೆಗಳ ಸಾಮರ್ಥ್ಯದ ಸುಟ್ಟ ಗಾಯಗಳ ಚಿಕಿತ್ಸಾ ಘಟಕ ನಿರ್ಮಾಣ ಕಾಮಗಾರಿಯ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಲಬುರಗಿ ಜಿಮ್ಸ್ ಆವರಣದಲ್ಲಿ ಕ್ರಿಟಿಕಲ್ ಕೇರ್ ಯೂನಿಟ್ ಮತ್ತು ಬರ್ನ್ ಯೂನಿಟ್ ಗಳಿಗೆ ಇಂದು ಶಂಕುಸ್ಥಾಪನೆ ನೆರವೇರಿಸಿದ್ದು, ಮುಂದಿನ ಒಂದೂವರೆ ವರ್ಷದಲ್ಲಿ ಈ ಕಟ್ಟಡಗಳು ತಲೆ ಎತ್ತಲಿವೆ ಎಂದರು.

ಬಡಜನರ ಕಲ್ಯಾಣಕ್ಕೆ ಕಲಬುರಗಿಯಲ್ಲಿ ಹೆಚ್ಚಿನ ವೈದ್ಯಕೀಯ ಸೇವೆ ನಮ್ಮ ಸರ್ಕಾರ ಕಲ್ಪಿಸಿದೆ. ಸರ್ಕಾರದ ಮೂಲಸೌಕರ್ಯ ಬಳಸಿಕೊಂಡು ಜಿಮ್ಸ್ ವೈದ್ಯರು, ಸಿಬ್ಬಂದಿ ರೋಗಿಗಳನ್ನು ತುಂಬಾ ಕಾಳಜಿಯಿಂದ ಆರೈಕೆ ಮಾಡಬೇಕು ಎಂದು ವೈದ್ಯರಿಗೆ ಕಿವಿಮಾತು ಹೇಳಿದರು.

3 ತಿಂಗಳಿನಲ್ಲಿ ಸೂಪರ್ ಸ್ಪೆಷಾಲಿಟಿ, ಜಯದೇವ ಆಸ್ಪತ್ರೆ ಉದ್ಘಾಟನೆ:

ಕಲಬುರಗಿ‌ ನಗರದ ಜಿಮ್ಸ್ ಆವರಣದಲ್ಲಿ ನಿರ್ಮಾಣದ ಅಂತಿಮ ಹಂತದಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು 371 ಹಾಸಿಗೆಯ ಜಯದೇವ ಹೃದ್ರೋಗ ಆಸ್ಪತ್ರೆ ಮುಂದಿನ 3 ತಿಂಗಳಿನಲ್ಲಿ ಲೋಕಾರ್ಪಣೆ ಮಾಡಲಾಗುವುದು. ಪೀಠೋಪಕರಣಕ್ಕೆ ಟೆಂಡರ್ ಕರೆಯಲಾಗಿದೆ. ನೇಮಕಾತಿ ಸಹ ಮಾಡಲಾಗುವುದು ಎಂದರು.

ಜಿಮ್ಸ್ ಆವರಣದಲ್ಲಿ ಹಳೇ ಆಸ್ಪತ್ರೆ ಕೆಡವಿ ಅಲ್ಲಿ 92 ಕೋಟಿ ರು. ವೆಚ್ಚದಲ್ಲಿ 200 ಹಾಸಿಗೆಯ ತಾಯಿ-ಮಗು ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಅಲ್ಲದೆ ಜಿಮ್ಸ್ ಹಿಂಭಾಗ ಕಿದ್ವಾಯಿ ಆಸ್ಪತ್ರೆಗೆ ಹೆಚ್ಚುವರಿಯಾಗಿ 72 ಕೋಟಿ ರು. ವೆಚ್ಚದಲ್ಲಿ 150 ಹಾಸಿಗೆಯ ವಿಸ್ತರಣಾ ಕಟ್ಟಡಕ್ಕೂ ಅಡಿಗಲ್ಲು ಹಾಕಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, 371ಜೆ ಪರಿಣಾಮ ವೈದ್ಯಕೀಯ ಆಸ್ಪತ್ರೆ ಹಾಗೂ ಇನ್ನಿತರ ಸಂಸ್ಥೆಗಳು ಇಲ್ಲಿಗೆ ಬರಲು ಸಾಧ್ಯವಾಗಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಜೊತೆಗೆ ಹೆಚ್ಚಿನ‌ ಅನುದಾನ ಸಹ ಹರಿದು ಬರುತ್ತಿದೆ. ನಮ್ಮ ಸರ್ಕಾರ ಕೇವಲ ಕಟ್ಟಡ ಕಟ್ಟುತ್ತಿಲ್ಲ, ಬದಲಾಗಿ ಮಾನವ ಸಂಪನ್ಮೂಲ ಬೆಳವಣಿಗೆಗೂ ಉತ್ತೇಜನ ನೀಡುತ್ತಿದೆ ಎಂದರು.

ಸಿಎಂ ಸಲಹೆಗಾರ, ಶಾಸಕ ಬಿ.ಆರ್.ಪಾಟೀಲ, ಶಾಸಕ ಎಂ.ವೈ.ಪಾಟೀಲ, ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ್, ದೇವಿಂದ್ರಪ್ಪ ಮರತೂರ, ಅಬ್ದುಲ್ ರಶೀದ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜಿಲ್ಲಾ ಸಮಿತಿ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಆರ್.ಚೇತನಕುಮಾರ, ಎಸ್.ಪಿ. ಅಕ್ಷಯ್ ಹಾಕೈ, ಡಿಸಿಪಿ ಕನಿಕಾ ಸಿಕ್ರಿವಾಲ್, ಜಿಪಂ ಸಿಇಒ ಭಂವರಸಿಂಗ್ ಮೀನಾ, ಮಹಾನಗರ ಪಾಲಿಕೆ ಉಪ ಆಯುಕ್ತ ಮಾಧವ ಗಿತ್ತೆ, ಜಿಲ್ಲಾ ಸರ್ಜನ್ ಡಾ.ಓಂಪ್ರಕಾಶ ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ ಪಾಟೀಲ ಸೇರಿದಂತೆ ಜಿಮ್ಸ್ ನ ಅಂಗ ಸಂಸ್ಥೆಗಳ ವೈದ್ಯ ಮತ್ತು ವೈದ್ಯಕೀಯೇತರ ಸಿಬ್ಬಂದಿಗಳು ಇದ್ದರು. ಜಿಮ್ಸ್ ನಿರ್ದೇಶಕ ಡಾ.ಉಮೇಶ ಎಸ್.ಆರ್. ಸ್ವಾಗತಿಸಿದರು.