ದಾನ-ಧರ್ಮ, ಸತ್ಕಾರ್ಯದಿಂದ ಪುಣ್ಯ ಸಂಪಾದಿಸಿ: ಡಾ.ಪುರುಷೋತ್ತಮಾನಂದಶ್ರೀ

| Published : Feb 02 2025, 11:45 PM IST

ಸಾರಾಂಶ

ಸನ್ಮಾರ್ಗದಲ್ಲಿ ನಡೆದು ಸತ್ಕಾರ್ಯ ಮಾಡುತ್ತಾ ನಾವು ತಂದೆ-ತಾಯಿ, ಗುರು ಹಾಗೂ ಭಗವಂತನ ಋಣ ತೀರಿಸಬೇಕು. ಮಾನವ ಹುಟ್ಟಿದ ತಕ್ಷಣ ಶ್ರೇಷ್ಠತೆ, ಪವಿತ್ರತೆ ಬರುವದಿಲ್ಲ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ(ರ-ಬ)

ಬಾಲ್ಯ, ಯೌವನ ಹಾಗೂ ಮುಪ್ಪು ಈ ಶರೀರಕ್ಕೆ ಬರುತ್ತದೆ. ಮುಪ್ಪು, ಸಾವು ಬರುವ ಮುನ್ನ ದಾನ ಧರ್ಮ ಸತ್ಕಾರ್ಯ ಮಾಡಿ ಪುಣ್ಯ ಸಂಪಾದನೆ ಮಾಡಬೇಕು ಎಂದು ಚಿನ್ಮೂಲಾದ್ರಿ ಶಿಲಾಪುರಿ ಮಹಾಸಂಸ್ಥಾನ ಮಠ, ಭಗೀರಥ ಪೀಠದ ಡಾ.ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ ಹೇಳಿದರು.

ನೆರೆಯ ಕೆಸರಗೊಪ್ಪ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀಭಗೀರಥ ಸಮುದಾಯ ಭವನ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಸನ್ಮಾರ್ಗದಲ್ಲಿ ನಡೆದು ಸತ್ಕಾರ್ಯ ಮಾಡುತ್ತಾ ನಾವು ತಂದೆ-ತಾಯಿ, ಗುರು ಹಾಗೂ ಭಗವಂತನ ಋಣ ತೀರಿಸಬೇಕು. ಮಾನವ ಹುಟ್ಟಿದ ತಕ್ಷಣ ಶ್ರೇಷ್ಠತೆ, ಪವಿತ್ರತೆ ಬರುವದಿಲ್ಲ. ನಮ್ಮ-ನಮ್ಮ ಸಾಧನೆ ಹಾಗೂ ಸಂಸ್ಕಾರ ಬಲದಿಂದ ಶ್ರೇಷ್ಠತೆ ಪಡೆದುಕೊಳ್ಳಲು ಸಾಧ್ಯ ಇದೆ. ಸಹಜವಾಗಿ ಮಾನವನಲ್ಲಿ ಬರುವ ಮೃಗೀಯ ಹಾಗೂ ರಾಕ್ಷಸಿ ಗುಣ ತೊರೆದು, ದೈವಿ ಗುಣ, ದೈವಿ ಸಂಪತ್ತು ಪಡದುಕೊಂಡು ನಿಜಾರ್ಥದಲ್ಲಿ ಮಾನವನಾಗಬಹುದು. ಮಹಾದೇವನೂ ಆಗಬಹುದು. ಭಾರತೀಯ ಸನಾತನ ಹಿಂದೂ ಧರ್ಮದಲ್ಲಿ ಎಲ್ಲ ಮಹಾತ್ಮರು ಸಂತರು ಸಾಧನೆ ಮಾಡಿ ಈ ತಪೋಭೂಮಿಯನ್ನು ಪುಣ್ಯ ಭೂಮಿಯಾಗಿಸಿದ್ದಾರೆ. ಅಂತಹ ಪುಣ್ಯ ಭೂಮಿಯಲ್ಲಿ ನಾವಿರುವುದು ನಮ್ಮೆಲ್ಲರ ಭಾಗ್ಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಸಿದ್ದು ಸವದಿ, ಅತಿಥಿಗಳಾಗಿ ಆಗಮಿಸಿದ ವಿಪ ಸದಸ್ಯ ಹಣಮಂತ ನಿರಾಣಿ, ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿ, ಶ್ರೀರಾಮಚಂದ್ರ ಭಗೀರಥ ಸಮಾಜದ ಮೂಲ ಪುರುಷ. ಘೋರ ತಪಸ್ಸು ಮಾಡಿ ಗಂಗೆಯನ್ನು ಭೂಮಿಗೆ ತಂದು ಜಗತ್ತಿನ ಜನತೆ, ಪಶು ಪಕ್ಷಿಗಳ ದಾಹ ತೀರಿಸಿದ ಹೃದಯವಂತ ಎಂದರು.

ಚಿಮ್ಮಡದ ಪ್ರಭು ಮಹಾಸ್ವಾಮೀಜಿ, ರಬಕವಿ ಬ್ರಹ್ಮಾನಂದ ಮಠದ ಗುರುಸಿದೇಶ್ವರ ಮಹಾಸ್ವಾಮೀಜಿ, ಕಡಕಭಾವಿಯ ಅಭಿನವ ಧರೇಶ್ವರ ಮಹಾಸ್ವಾಮೀಜಿ ಆಶಿರ್ವಚನ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀಭಗೀರಥ ಉಪ್ಪಾರ ಸಮಾಜದ ಅಧ್ಯಕ್ಷ ಭೀಮಪ್ಪ ಸಸಾಲಟ್ಟಿ, ಗೌರವಾಧ್ಯಕ್ಷ ಪರಪ್ಪ ಬ್ಯಾಕೋಡ, ವಿಪ ಸದಸ್ಯ ಸುನೀಲಗೌಡ ಪಾಟೀಲ, ಜಿಪಂ ಸದಸ್ಯ ಮಹಾಂತೇಶ ಹಿಟ್ಟಿಮಠ, ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೋಡ, ಸಂಗಪ್ಪ ಹಲ್ಲಿ, ಲಕ್ಮಣ ಉಪ್ಪಾರ, ಡಾ.ಎಂ.ಬಿ.ಪೂಜೇರಿ, ಗ್ರಾಪಂ ಅಧ್ಯಕ್ಷೆ ರಾಧಾ ಮಾದರ, ಉಪಾಧ್ಯಕ್ಷೆ ಸುವರ್ಣಾ ಚನ್ನಾಳ, ಪಿಡಿಓ ಹೇಮಾ ದೇಸಾಯಿ, ರಮೇಶ ಲೋಣಾರಿ, ಮಹೇಶ ಮನ್ನಯ್ಯನವರಮಠ ಅತಿಥಿಗಳಾಗಿ ಆಗಮಿಸಿದ್ದರು. ಗ್ರಾಮದ ಭಗೀರಥ ಉಪ್ಪಾರ ಸಂಘದ ಉಪಾಧ್ಯಕ್ಷ ಮಾರುತಿ ಬ್ಯಾಕೋಡ, ಸದಸ್ಯರಾದ ಮಾರುತಿ ಕರೋಶಿ, ಪರಪ್ಪ ಬ್ಯಾಕೋಡ, ಮಾರುತೆಪ್ಪ ತೇಜಪ್ಪಗೋಳ ಮುಂತಾದವರಿದ್ದರು. ನಾರನಗೌಡ ಉತ್ತಂಗಿ ಸ್ವಾಗತಿಸಿ, ರಾಘವೇಂದ್ರ ನೀಲನ್ನವರ ನಿರೂಪಿಸಿ, ಬಸವರಾಜ ಮಿರ್ಜಿ ವಂದಿಸಿದರು.