ಸಾರಾಂಶ
ವಾಡಿಕೆಗೂ ಮೀರಿ ಶೇ. 52 ರಷ್ಟು ಹೆಚ್ಚುವರಿ ಮಳೆ । ಚಿಕ್ಕಮಗಳೂರು ತಾಲೂಕಿನಲ್ಲಿ ಹೆಚ್ಚು ನಷ್ಟ,
---- ಇಲಾಖೆಗಳ ಅಂದಾಜಿನಂತೆ ₹8.90 ಕೋಟಿ ನಷ್ಟು
- ಸರಾಸರಿ 209 ಮಿ.ಮೀ. ಮಳೆ ಬೀಳುವೆಡೆ, ವಾಡಿಕೆಗೂ ಮೀರಿ 317 ಮಿ.ಮೀ. ಮಳೆ- ಮೆಸ್ಕಾಂಗೆ 3.70 ಕೋಟಿ ರು. ನಷ್ಟ
- ಲೋಕೋಪಯೋಗಿ ಇಲಾಖೆಗೆ 5.20 ಕೋಟಿ ರು. ನಷ್ಟ- ನಿರಂತರ ಮಳೆ ಕೃಷಿ ಚಟುವಟಿಕೆಗೆ ಅಡ್ಡಿಯಾಗಿತ್ತು
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಿಲ್ಲೆಯಲ್ಲಿ ಈಗ ಮುಂಗಾರು ಮಳೆ ಆರಂಭಗೊಂಡಿದೆ. ಪೂರ್ವ ಮುಂಗಾರಿನಲ್ಲಿ ಸಕಾಲದಲ್ಲಿ ಮಳೆ ಬರದೆ ಹೋದರೂ ಕೆಲವು ದಿನಗಳ ಕಾಲ ನಿರಂತರವಾಗಿ ಸುರಿದು ವಾಡಿಕೆ ಗಡಿಯನ್ನು ಮೀರಿ ಹೆಚ್ಚುವರಿಯಾಗಿ ಶೇ. 52 ರಷ್ಟು ಮಳೆ ಬಂದಿದೆ.
ಜನವರಿ 1 ರಿಂದ ಜೂನ್ 7ರವರೆಗಿನ ವಾಡಿಕೆ ಮಳೆ ಸರಾಸರಿ 209 ಮಿ.ಮೀ. ಆದರೆ, ಇದೇ ಅವಧಿಯಲ್ಲಿ ಈ ಬಾರಿ ಬಂದಿರುವ ಮಳೆ ಸರಾಸರಿ 317 ಮಿ.ಮೀ. ಅಂದರೆ ವಾಡಿಕೆಗೂ ಮೀರಿ ಮಳೆ ಬಂದಿದೆ.ದಾಖಲೆ ಮಳೆಯಿಂದ ಈ ಅವಧಿಯಲ್ಲಿ ಹಾನಿಯೂ ಹೆಚ್ಚಾಗಿದೆ. ಕಳೆದ ಎರಡು ತಿಂಗಳಲ್ಲಿ ಅಂದರೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಲವಾಗಿ ಬೀಸಿದ ಗಾಳಿ ಹಾಗೂ ಮಳೆಗೆ ಇಲಾಖೆಗಳು ಅಂದಾಜು ಮಾಡಿರುವ ಪ್ರಕಾರ 8.90 ಕೋಟಿ ರು. ನಷ್ಟು ಹಾನಿ ಸಂಭವಿಸಿದೆ.
ಜಿಲ್ಲೆಯಲ್ಲಿ 2168 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಚಿಕ್ಕಮಗೂರು ತಾಲೂಕಿನಲ್ಲಿ 711, ಮೂಡಿಗೆರೆ 139, ಕಳಸ 192, ಕಡೂರು 175, ತರೀಕೆರೆ 80, ಅಜ್ಜಂಪುರ 45, ಎನ್.ಆರ್.ಪುರ 467, ಕೊಪ್ಪ 275 ಹಾಗೂ ಶೃಂಗೇರಿ ತಾಲೂಕಿನಲ್ಲಿ 84 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಇದರಿಂದಾಗಿ ಸುಮಾರು 3.38 ಕೋಟಿ ರು. ನಷ್ಟವಾಗಿದೆ. ಹಾನಿಯಾಗಿರುವ ಕಂಬಗಳ ಪೈಕಿ 2030 ಕಂಬಗಳನ್ನು ಬದಲಾವಣೆ ಮಾಡಲಾಗಿದೆ. ಸುಮಾರು 43.36 ಕಿ.ಮೀ. ವಿದ್ಯುತ್ ತಂತಿಗಳಿಗೆ ಹಾನಿಯಾಗಿದ್ದು, ಈ ಪೈಕಿ 40.60 ಕಿ.ಮೀ. ಲೈನ್ ದುರಸ್ಥಿಗೊಳಿಸಲಾಗಿದೆ. ಇದರಿಂದ 32.40 ಲಕ್ಷ ರು. ಹಾನಿಯಾಗಿದೆ. ಒಟ್ಟಾರೆ ಮೆಸ್ಕಾಂಗೆ 3.70 ಕೋಟಿ ರು. ನಷ್ಟವಾಗಿದೆ.ಲೋಕೋಪಯೋಗಿ ಇಲಾಖೆಗೆ ಒಳಪಟ್ಟಿರುವ ಒಟ್ಟು 7 ಸೇತುವೆಗಳಿಗೆ ಹಾನಿಯಾಗಿದೆ. ಇವುಗಳಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ 2, ಕೊಪ್ಪ ತಾಲೂಕಿನಲ್ಲಿ 4 ಹಾಗೂ ಕಡೂರಿನಲ್ಲಿ ಒಂದು ಸೇತುವೆಗೆ ಹಾನಿಯಾಗಿದೆ. ಇದರಿಂದ 5.20 ಕೋಟಿ ರು. ನಷ್ಟವಾಗಿದೆ.ನಾಲ್ವರ ಸಾವು:
ಪೂರ್ವ ಮುಂಗಾರಿನಲ್ಲಿ ಸಿಡಿಲು ಹಾಗೂ ಬಲವಾಗಿ ಬೀಸಿದ ಗಾಳಿಯಿಂದ 4 ಜನ ಮೃತಪಟ್ಟಿದ್ದಾರೆ. 91 ವಾಸದ ಮನೆಗಳಿಗೆ ಹಾನಿಯಾಗಿದ್ದು ಇವುಗಳಲ್ಲಿ ಒಂದು ಮನೆಗೆ ಪೂರ್ಣ ಪ್ರಮಾಣದಲ್ಲಿ ಹಾನಿ ಯಾಗಿದ್ದರೆ, ಇನ್ನುಳಿದ ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ. ಇದೇ ಅವಧಿಯಲ್ಲಿ 2 ಜಾನುವಾರು ಗಳು ಮೃತಪಟ್ಟಿವೆ.ಏಪ್ರಿಲ್ ಮಾಹೆಯಲ್ಲಿ ರೈತರ ನಿರೀಕ್ಷೆಯಂತೆ ಮಳೆ ಬರಲಿಲ್ಲ. ಆದರೆ, ಜೂನ್ ಎರಡನೇ ವಾರದಿಂದ ಜಿಲ್ಲೆಯಾದ್ಯತ ಮಳೆ ಚುರುಕುಗೊಂಡಿತ್ತು. ಹಾಗಾಗಿ ಬಿತ್ತನೆ ಕಾರ್ಯ ಚರುಕಾಗಿತ್ತು. ಆದರೆ, ನಿರಂತರ ಮಳೆ ಕೃಷಿ ಚಟುವಟಿಕೆಗೆ ಅಡ್ಡಿ ಪಡಿಸಿತ್ತು. ಪೂರ್ವ ಮುಂಗಾರು ಮುಕ್ತಾಯಗೊಂಡು, ಜೂನ್ 1 ರಿಂದ ಮುಂಗಾರು ಆರಂಭಗೊಂಡಿದೆ. ಮಳೆ ಆಗಾಗ ಬಿಡುವು ನೀಡುತ್ತಿರುವುದರಿಂದ ಕೃಷಿ ಚಟುವಟಿಕೆ ಚುರುಕುಗೊಂಡಿದೆ.